ಸಿನೆಮಾ ಪ್ರದರ್ಶನಕ್ಕೂ ಮೊದಲು ರಾಷ್ಟ್ರಗೀತೆ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್

Update: 2018-01-09 13:03 GMT

ಹೊಸದಿಲ್ಲಿ, ಜ.9: ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸುವುದನ್ನು ಕಡ್ಡಾಯ ಮಾಡಿದ್ದ ತನ್ನ ಹಿಂದಿನ ಆದೇಶವನ್ನು ಪರಿಷ್ಕರಿಸಿರುವ ಸರ್ವೋಚ್ಛ ನ್ಯಾಯಾಲಯ, ಸಿನಿಮ ಪ್ರದರ್ಶನಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಲ್ಲ ಎಂದು ಮಂಗಳವಾರ ತಿಳಿಸಿದೆ.

ಚಿತ್ರಮಂದಿರಗಳಲ್ಲಿ ಪ್ರತಿ ಸಿನಿಮ ಪ್ರದರ್ಶನಕ್ಕೂ ಮೊದಲು ರಾಷ್ಟ್ರಗೀತೆ ನುಡಿಸುವುದು ಕಡ್ಡಾಯ ಎಂದು ಸರ್ವೋಚ್ಛ ನ್ಯಾಯಾಲಯವು 2016ರ ನವೆಂಬರ್ 30ರಂದು ನೀಡಿದ ಆದೇಶದಲ್ಲಿ ತಿಳಿಸಿತ್ತು. ಕೇಂದ್ರ ಸರಕಾರವು ರಚಿಸಿರುವ 12 ಸದಸ್ಯರ ಸಚಿವರನ್ನೊಳಗೊಂಡ ಸಮಿತಿಯು ೀ ವಿಷಯದ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ನೇತೃತ್ವದ ಪೀಠ ತಿಳಿಸಿದೆ.

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸುವ ಕೇಂದ್ರದ ನಿರ್ಧಾರದ ವಿರುದ್ಧ ಮಾತನಾಡಿದ್ದ ನ್ಯಾಯಾಲಯ ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಜನರು ತಮ್ಮ ತೋಳುಗಳಲ್ಲಿ ದೇಶಪ್ರೇಮವನ್ನು ಹೊತ್ತುಕೊಂಡು ನಡೆಯಬೇಕು ಎಂದು ಒತ್ತಡ ಹೇರಲು ಸಾಧ್ಯವಿಲ್ಲ. ಅದಲ್ಲದೆ ರಾಷ್ಟ್ರಗೀತೆ ನುಡಿಸುವ ಸಮಯದಲ್ಲಿ ಒರ್ವ ವ್ಯಕ್ತಿ ಎದ್ದುನಿಲ್ಲದಿದ್ದರೆ ಆತ ಅಥವಾ ಆಕೆ ಕಡಿಮೆ ದೇಶಪ್ರೇಮಿ ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.

ಸಮಾಜಕ್ಕೆ ನೈತಿಕ ಪೊಲೀಸ್‌ಗಿರಿಯ ಅಗತ್ಯವಿಲ್ಲ ಎಂದು ತಿಳಿಸಿದ ನ್ಯಾಯಾಲಯ, ಮುಂದಿನ ಬಾರಿ ರಾಷ್ಟ್ರಗೀತೆಗೆ ಅವಮಾನ ಮಾಡುತ್ತದೆ ಎಂಬ ಕಾರಣಕ್ಕೆ ಜನರು ಚಿತ್ರಮಂದಿರಗಳಿಗೆ ಟಿ-ಶರ್ಟ್‌ಗಳನ್ನು ಮತ್ತು ಶೂಗಳನ್ನು ಧರಿಸಿಕೊಂಡು ಬರುವುದನ್ನೂ ಸರಕಾರವು ನಿಷೇಧಿಸಬಹುದು ಎಂದು ನ್ಯಾಯಾಲಯ ಕುಟುಕಿತ್ತು.

ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯ ಸಮಯದಲ್ಲಿ ಎದ್ದುನಿಲ್ಲಬೇಕಾಗಿಲ್ಲ ಎಂಬ ಹಿಂದಿನ ಆದೇಶವು ಸಮಿತಿಯ ನಿರ್ಧಾರ ಸ್ಪಷ್ಟವಾಗುವವರೆಗೂ ಮುಂದುವರಿಯಲಿದೆ ಎಂದು ನ್ಯಾಯಾಧೀಶರಾದ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ತಿಳಿಸಿದೆ. 1971ರ ರಾಷ್ಟ್ರ ಗೌರವಕ್ಕೆ ಅವಮಾನ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲು ಸಲಹೆ ಸೂಚನೆಗಳನ್ನು ನೀಡಲು 12 ಸದಸ್ಯರ ಸಮಿತಿಯನ್ನು ರಚಿಸುವ ಕೇಂದ್ರದ ಮನವಿಗೆ ನ್ಯಾಯಾಲಯ ಒಪ್ಪಿಗೆ ನೀಡಿದೆ. ಈ ಸಮಿತಿಯು ಆರು ತಿಂಗಳೊಳಗಾಗಿ ತನ್ನ ವರದಿಯನ್ನು ಒಪ್ಪಿಸುವುದಾಗಿ ಅಟರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ತಿಳಿಸಿದ್ದಾರೆ. 12 ಸದಸ್ಯರ ಸಮಿತಿಯ ನೇತೃತ್ವವನ್ನು ಹೆಚ್ಚುವರಿ ಕಾರ್ಯದರ್ಶಿ (ಗಡಿ ನಿರ್ವಹಣೆ) ಮತ್ತು ಗೃಹ ವ್ಯವಹಾರಗಳ ಸಚಿವಾಲಯ ವಹಿಸಲಿದೆ. ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರ, ಸಂಸ್ಕೃತಿ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯಗಳು ಈ ಸಮಿತಿಯನ್ನು ಪ್ರತಿನಿಧಿಸಲಿವೆ. ಜೊತೆಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಅಲ್ಪಸಂಖ್ಯಾತ ವ್ಯವಹಾರ, ಕಾನೂನು ವ್ಯವಹಾರ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಮತ್ತು ಅಂಗವಿಕಲರ ಸಬಲೀಕರಣ ಇಲಾಖೆಗಳು ಕೂಡಾ ಈ ಸಮಿತಿಯ ಭಾಗವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News