ಜಾನಪದ ಕಲೆಯ ಏಳಿಗೆಗೆ ಪ್ರೋತ್ಸಾಹಿಸಿ: ಶಾಂತಕುಮಾರ್

Update: 2018-01-09 11:09 GMT

ಬಣಕಲ್, ಜ.9: ಜಾನಪದ ಕಲೆಯಲ್ಲಿ ಉತ್ತಮವಾದ ಸಾಹಿತ್ಯವಿದ್ದು ಹಿರಿಯರ ಬಾಯಿಂದ ಬಾಯಿಗೆ ಬಂದ ಕಲೆಯಾಗಿದೆ. ಜಾನಪದ ಕಲೆ ಸೊರಗುತ್ತಿದ್ದು ಅದರ ಏಳಿಗೆಗೆ ಶ್ರಮಿಸುವ ಕೆಲಸ ಆಗಬೇಕಿದೆ ಎಂದು ಅಂಗಡಿ ಪ್ರಾಥಮಿಕ ಶಾಲೆಯ ಶಿಕ್ಷಕ ಹಾಗೂ ಸಾಹಿತಿ ಶಾಂತಕುಮಾರ್ ಅಭಿಪ್ರಾಯಪಟ್ಟರು.

ಅವರು ಬಣಕಲ್‍ನ ವಿದ್ಯಾಭಾರತಿ ಶಾಲೆಯಲ್ಲಿ ನಡೆದ ಕನ್ನಡ ಜಾನಪದ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ‘ಸುಗ್ಗಿ ಕಾಲದಲ್ಲಿ ಜಾನಪದ ಸಾಹಿತ್ಯ.’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕನ್ನಡ ಜಾನಪದ ಪರಿಷತ್ತು ಜಾನಪದ ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದು. ಜಾನಪದ ಗೊತ್ತಿರುವ ಕಲಾವಿದರು ಯುವ ಕಲಾಪ್ರತಿಭೆಗಳಿಗೆ ಜಾನಪದ ಹಾಡು ಕಲಿಸುವುದರ ಮೂಲಕ ಜಾನಪದ ಸೊಗಡಿನ ರುಚಿಯನ್ನು ಉಣಬಡಿಸುವ ಅವಶ್ಯಕತೆಯಿದೆ ಎಂದರು.

ಶ್ರೀವಿದ್ಯಾಭಾರತಿ ಶಾಲೆಯ ಮುಖ್ಯ ಶಿಕ್ಷಕಿ ಟಿ.ಆರ್.ಮಾಲತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಳಿವಿನಂಚಿನಲ್ಲಿರುವ ಜಾನಪದ ಕಲೆಯನ್ನು ಪೋಷಿಸುವ ಅಗತ್ಯವಿದೆ. ಹಿಂದಿನ ಕಾಲದಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಜೀವನದ ಪರಿಯನ್ನು ಹಾಡಿನ ಮೂಲಕ ಹಾಡಿ ಜನರನ್ನು ರಂಜಿಸುವ ಕೆಲಸ ಆಗುತ್ತಿತ್ತು. ಆದರೆ ಆಧುನೀಕರಣದಿಂದ ಜಾನಪದ ಕಲೆಗೆ ಹೊಡೆತ ಬಿದ್ದಂತಾಗಿದೆ. ಈ ಕಲೆ ಉಳಿಯಬೇಕಾದರೆ ಗ್ರಾಮಗಳಲ್ಲಿ ಜಾನಪದದ ವಿಶೇಷ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಯುವ ಪ್ರತಿಭೆಗಳಿಗೆ ಜಾನಪದ ಸಾಹಿತ್ಯದ ಒಲವು ಮೂಡಿಸಬೇಕಿದೆ ಎಂದರು.

ಹೋಬಳಿ ಕ.ಜಾ.ಪ.ದ ಅಧ್ಯಕ್ಷ ಸಬ್ಲಿ ದೇವರಾಜ್ ಮಾತನಾಡಿ, ಕನ್ನಡ ಜಾನಪದ ಸಮ್ಮೇಳನ ಮಾಡಿ ಯುವ ಪೀಳಿಗೆಗೆ ಜಾನಪದ ಸಂಸ್ಕೃತಿಯ ಬಗ್ಗೆ ಪರಿಚಯಿಸುವ ಅಗತ್ಯವಿದೆ. ಯುವ ಜನರು ಜಾನಪದ ಸಾಹಿತ್ಯದ ಕಡೆಗೆ ಒಲವು ತೋರಿಸಬೇಕಾದರೆ ಕನ್ನಡ ಜಾನಪದ ಪರಿಷತ್ತು ವತಿಯಿಂದ ಕೆಲವು ಗ್ರಾಮಗಳನ್ನು ಆಯ್ದು ಜಾನಪದ ಸಮ್ಮೇಳನ ಮಾಡಿಸುವ ಮೂಲಕ ಜಾನಪದ ಕಲೆಯನ್ನು ಉಳಸಬಹುದು. ಇದಕ್ಕಾಗಿ ಕಜಾಪ ಪ್ರಯತ್ನಿಸುತ್ತಿದೆ.ಜನರ ಹಾಗೂ ಕನ್ನಡಪರ ಸಂಘ ಸಂಸ್ಥೆಗಳ ಸಹಕಾರದಿಂದ ಮಾತ್ರ ಜಾನಪದ ಕಲೆಯನ್ನು ಉಳಿಸಲು ಮತ್ತು ಬೆಳೆಸಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬಣಕಲ್‍ನ ಕಸಾಪ ಅಧ್ಯಕ್ಷ ಮೋಹನ್‍ಕುಮಾರ್‍ಶೆಟ್ಟಿ, ತಾಲೂಕು ಕ.ಜಾಪ.ದ ಅಧ್ಯಕ್ಷ ಬಕ್ಕಿ ಮಂಜುನಾಥ್ ಮಾತನಾಡಿದರು. ಗಾನ ಕೋಗಿಲೆ ಬಕ್ಕಿ ಮಂಜುನಾಥ್ ವಿವಿಧ ಪ್ರಕಾರದ ಜಾನಪದ ಹಾಡುಗಳನ್ನು ಹೇಳಿ ನೆರೆದವರ ಮನ ರಂಜಿಸಿದರು.

ಸಭೆಯಲ್ಲಿ ವಿದ್ಯಾಭಾರತಿ ಶಾಲೆಯ ಮುಖ್ಯ ಶಿಕ್ಷಕ ನಾಗರಾಜ್, ಶಿಕ್ಷಕರಾದ ವಸಂತ್‍ಹಾರ್‍ಗೋಡು, ಭಕ್ತೇಶ್, ಶೇಖರಪ್ಪ, ಲೋಕೇಶ್, ಲಿಂಗರಾಜ್, ಮನಮೋಹನ್, ಪ್ರತಾಪ್, ಲೀಲಾಮಣಿ, ಗೀತಾ, ಆತ್ಮಿಕ, ಇಂದಿರಾ, ರೂಪ, ಕಮಲಮ್ಮ, ಸುನೀತ, ಆಶಾಸಂತೋಷ್, ನಳಿನಾಕ್ಷಿ, ಕವನ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News