ಸ್ನೇಹದ ನಾಟಕ: ಬಾಲಕಿಯ ಮೇಲೆ ಅತ್ಯಾಚಾರ

Update: 2018-01-10 04:42 GMT

ಹೊಸದಿಲ್ಲಿ, ಜ. 10: ಬಾಲಕಿಯೊಬ್ಬಳ ಜತೆ ಸ್ನೇಹದ ನಾಟಕವಾಡಿ ಆಕೆಯನ್ನು ಕಾರಿನಲ್ಲಿ ಸುತ್ತಾಟಕ್ಕೆ ಕರೆದುಕೊಂಡು ಹೋಗಿ ಸ್ನೇಹಿತನ ಫ್ಲಾಟ್‌ನಲ್ಲಿ ಅತ್ಯಾಚಾರ ಎಸಗಿದ ಘಟನೆ ರಾಜಧಾನಿಯಲ್ಲಿ ನಡೆದಿದೆ.

ಪೂರ್ವದೆಹಲಿಯ ಶಹ್ದರಾದಲ್ಲಿರುವ ಫ್ಲಾಟ್ ಒಂದರಲ್ಲಿ ಹದಿನೇಳು ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು, ಈ ಸಂಬಂಧ 22 ವರ್ಷದ ಯುವಕನನ್ನು ಬಂಧಿಸಲಾಗಿದೆ.

ಕೇಂದ್ರ ದೆಹಲಿಯ ಗುರುದ್ವಾರ ಬಂಗ್ಲಾ ಸಾಹಿಬ್‌ನಿಂದ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ಯಲಾಗಿತ್ತು. ಘಟನೆ ಶುಕ್ರವಾರವೇ ನಡೆದಿದ್ದರೂ, ಬಾಲಕಿ ರವಿವಾರ ದೂರು ನೀಡಿದ್ದು, ಯುವಕನ ಸಂಬಂಧಿಯನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಾಲಕಿ ಅಶೋಕ ವಿಹಾರದ ತನ್ನ ಮನೆ ಬಿಟ್ಟು ಗುರುದ್ವಾರದಲ್ಲಿ ಕೆಲ ದಿನಗಳಿಂದ ವಾಸವಿದ್ದಳು. ಕೆಲ ತಿಂಗಳಲ್ಲಿ ಮೂರನೇ ಬಾರಿಗೆ ಮನೆಬಿಟ್ಟು ಹೋಗಿದ್ದರಿಂದ ಆಕೆಯ ಪೋಷಕರು ಆಕೆ ಓಡಿಹೋದ ಬಗ್ಗೆ ದೂರು ನೀಡಿರಲಿಲ್ಲ. ಈ ಮೊದಲು ಎರಡು ಬಾರಿ ಮನೆಯಿಂದ ಓಡಿ ಹೋದಾಗ ಅಪಹರಣ ಪ್ರಕರಣ ದಾಖಲಿಸಿದ್ದರು ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಬಿ.ಕೆ.ಸಿಂಗ್ ವಿವರ ನೀಡಿದ್ದಾರೆ.

ಘಟನೆ ನಡೆದ ದಿನ ಆರೋಪಿ, ಆಸ್ಟ್ರೇಲಿಯಾದಲ್ಲಿ ಅಧ್ಯಯನ ವೀಸಾ ಪಡೆಯುವ ಸಲುವಾಗಿ ಉತ್ತರ ಪ್ರದೇಶದ ಫಿಲಿಬಿಟ್‌ನಿಂದ ದೆಹಲಿಗೆ ಕಾರಿನಲ್ಲಿ ಆಗಮಿಸಿದ್ದ. ರಾತ್ರಿ 9ರ ಸುಮಾರಿಗೆ ಗುರುದ್ವಾರದ ಪಾರ್ಕಿಂಗ್ ಪ್ರದೇಶದಲ್ಲಿ ಕಾರು ನಿಲ್ಲಿಸುವ ವೇಳೆ ಬಾಲಕಿ ಒಬ್ಬಳೇ ವಾಕಿಂಗ್ ಮಾಡುತ್ತಿದ್ದುದು ಗಮನಿಸಿ, ಆಕೆಯನ್ನು ಹಿಂಬಾಲಿಸಿದ್ದಾನೆ. ಆಕೆಯ ಜತೆ ಮಾತನಾಡಿ ಸ್ನೇಹ ಸಂಪಾದಿಸಿದ. ಕಾರಿನಲ್ಲಿ ಜಾಲಿ ರೈಡ್ ಬರುವಂತೆ ಆಕೆಯನ್ನು ಕೇಳಿಕೊಂಡಿದ್ದಕ್ಕೆ ಆಕೆ ಒಪ್ಪಿಕೊಂಡಿದ್ದಳು ಎಂದು ತಿಳಿದುಬಂದಿದೆ.

ಸ್ನೇಹಿತನ ಫ್ಲಾಟ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿ ಮರುದಿನ ಮುಂಜಾನೆ ಗುರುದ್ವಾರ ಬಳಿ ಬಿಟ್ಟುಹೋಗಿದ್ದಾನೆ. ಅತ ಎರಡು ಮೊಬೈಲ್ ಸಂಖ್ಯೆಗಳನ್ನು ಆಕೆಗೆ ನೀಡಿದ್ದ. ಮರುದಿನ ಸಂಜೆ ಆಕೆಯನ್ನು ಸಂಬಂಧಿಯ ಜತೆಗೆ ಭೇಟಿಯಾಗಿದ್ದ. ಮತ್ತೆ ಕಾರಿನಲ್ಲಿ ಬರುವಂತೆ ಪುಸಲಾಯಿಸಿದ್ದಕ್ಕೆ ಆಕೆ ಒಪ್ಪಿಕೊಂಡಿ ದ್ದಾಳೆ. ಆದರೆ ಕಾರಿನಲ್ಲಿ ಅಸಭ್ಯವಾಗಿ ವರ್ತಿಸತೊಡಗಿದಾಗ ಪ್ರತಿರೋಧ ವ್ಯಕ್ತಪಡಿಸಿದಳು. ಇಬ್ಬರೂ ಮತ್ತೆ ಆಕೆಯನ್ನು ಗುರುದ್ವಾರ ಬಳಿ ಬಿಟ್ಟುಹೋದರು.
ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಆತನ ಭಾವಚಿತ್ರ ಗುರುತಿಸಿದ ಬಳಿಕ ಆರೋಪಿಯ ಮನೆ ಮೇಲೆ ದಾಳಿ ಮಾಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News