ಕಲಬುರ್ಗಿ ಹತ್ಯೆ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲು ಪತ್ನಿಯ ಮನವಿ

Update: 2018-01-10 10:08 GMT

ಹೊಸದಿಲ್ಲಿ, ಜ.10: ಹಿರಿಯ ಸಂಶೋಧಕ, ವಿದ್ವಾಂಸ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‍ಐಟಿ) ವಹಿಸಬೇಕೆಂದು ಕೋರಿ ಅವರ ಪತ್ನಿ ಉಮಾದೇವಿ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ. ಈ ಮನವಿಯನ್ನು ಪರಿಗಣಿಸಿ ಈ ನಿಟ್ಟಿನಲ್ಲಿ ಕೇಂದ್ರದ ಪ್ರತಿಕ್ರಿಯೆಯನ್ನು ನ್ಯಾಯಾಲಯ ಕೋರಿದೆ.

ಎಂ.ಎಂ. ಕಲಬುರ್ಗಿ, ನರೇಂದ್ರ ದಾಭೋಲ್ಕರ್ ಹಾಗು  ಗೋವಿಂದ ಪನ್ಸಾರೆ ಹತ್ಯೆ ಪ್ರಕರಣಗಳಲ್ಲಿ ಸಾಮ್ಯತೆಯಿದೆ ಎಂದು ಉಮಾದೇವಿ ನ್ಯಾಯಾಲಯಕ್ಕೆ ತಿಳಿಸಿದ್ದರಲ್ಲದೆ, ಈ ಅಂಶವನ್ನು ಪರಿಗಣಿಸಿ ಮೂರೂ ಹತ್ಯೆ ಪ್ರಕರಣಗಳ ಸಂಘಟಿತ ತನಿಖೆ ನಡೆಸಬೇಕೆಂದೂ ಕೋರಿದ್ದಾರೆ.

ಮೂವರು ವಿಚಾರವಾದಿಗಳನ್ನೂ ಹಾಡಹಗಲೇ ಹಂತಕರು ಸಾಯಿಸಿದ್ದರು. 69 ವರ್ಷದ ದಾಭೋಲ್ಕರ್ ಅವರನ್ನು ಬೈಕಿನಲ್ಲಿ ಬಂದ ದುಷ್ಕರ್ಮಿಗಳು 7.65 ಎಂಎಂ ದೇಶೀಯ ನಿರ್ಮಿತ ಪಿಸ್ತೂಲಿನಿಂದ ಗುಂಡುಹಾರಿಸಿ ಕೊಂದಿದ್ದರೆ, 81 ವರ್ಷದ ಪನ್ಸಾರೆ ಮತ್ತವರ ಪತ್ನಿ ಉಮಾ ಮೇಲೆ ಅದೇ ಮಾದರಿಯ ಪಿಸ್ತೂಲಿನಿಂದ ಐದು ಗುಂಡುಗಳನ್ನು ಹಾರಿಸಲಾಗಿತ್ತು. 2015ರ ಆಗಸ್ಟ್ 30ರಂದು ಕಲಬುರ್ಗಿಯವರನ್ನು ಅವರ ಮನೆಯಲ್ಲಿಯೇ ದುಷ್ಕರ್ಮಿಗಳು ಇಂತಹುದೇ ಪಿಸ್ತೂಲಿನಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News