ಶೇಕ್ಸ್‌ಪಿಯರ್ ನೆಪದಲ್ಲಿ ಸಾಂಸ್ಕೃತಿಕ ಮುಖಾಮುಖಿ

Update: 2018-01-10 18:51 GMT

ವಿಮರ್ಶಾ ಲೋಕಕ್ಕೆ ದಿ. ರಾಮಚಂದ್ರ ದೇವ ಅವರ ಕೊಡುಗೆ ದೊಡ್ಡದು. ಪಾಶ್ಚಾತ್ಯ ಸಾಹಿತ್ಯದ ಅವರ ಅಧ್ಯಯನ ಕನ್ನಡ ಸಾಹಿತ್ಯದ ಬೆಳವಣಿಗೆಯ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಶೇಕ್ಸ್‌ಪಿಯರ್ ಕುರಿತಂತೆಯೂ ಹಲವು ವಿಮರ್ಶಾತ್ಮಕ ಬರಹಗಳನ್ನು ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟಿದ್ದಾರೆ. ‘ಶೇಕ್ಸ್‌ಪಿಯರ್-ಎರಡು ಸಂಸ್ಕೃತಿಗಳಲ್ಲಿ’ ಅವರ ಮಹತ್ವದ ಕೃತಿಗಳಲ್ಲಿ ಒಂದಾಗಿದೆ. ಇದು ಅವರು ಇಂಗ್ಲಿಷ್‌ನಲ್ಲಿ ಬರೆದ ಕೃತಿಯ ಕನ್ನಡ ಆವೃತ್ತಿ. ಶೇಕ್ಸ್‌ಪಿಯರ್ ವಿಶ್ವವ್ಯಾಪಿಯಾಗಿ ಹರಡಿ ಕೊಂಡಿದ್ದಾನೆ. ಭಾರತದಲ್ಲೂ ಆತ ಚಿರಪರಿಚಿತ. ಆತನ ಬರಹಗಳು ಬೇರೆ ಬೇರೆ ರೂಪದಲ್ಲಿ ಭಾರತೀಯ ಭಾಷೆಗಳಿಗೆ ಇಳಿದಿವೆ. ಅನುವಾದ ಮತ್ತು ಮೂಲಗಳನ್ನು ಇಟ್ಟುಕೊಂಡು ಹೇಗೆ ಭಿನ್ನ ಸಂಸ್ಕೃತಿ ಆತನ ಮೇಲೆ ತನ್ನ ಪರಿಣಾಮವನ್ನು ಬೀರಿದೆ ಎನ್ನುವುದನ್ನು ಕಂುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

 ಶೇಕ್ಸ್‌ಪಿಯರ್‌ನ ಕೃತಿಗಳ ಅನುವಾದದ ಸಮಸ್ಯೆ, ಅದು ಭಾರತೀಯ ಭಾಷೆಗಳಿಗೆ ಬರುವಾಗ ಎದುರಿಸುವ ಬಿಕ್ಕಟ್ಟು, ಭಾಷೆಯಿಂದ ಭಾಷೆಗೆ ಹೇಗೆ ಶೇಕ್ಸ್‌ಪಿಯರ್ ಪಾತ್ರಗಳು ತನ್ನ ಗುಣಲಕ್ಷಣಗಳನ್ನು ಬದಲಿಸುತ್ತಾ ಹೋಗುತ್ತವೆ ಎನ್ನುವುದನ್ನು ಕುತೂಹಲಕರವಾಗಿ ದೇವ ನಿರೂಪಿಸಿದ್ದಾರೆ. ಹತ್ತೊಂಬತ್ತನೇ ಶತಮಾನದಲ್ಲಿ ತನ್ನೊಳಗೇ ಮುಳುಗಿ ಹೋಗಿದ್ದ-ಅವನತಿಗೊಂಡ ಹಿಂದೂ ಯೋಚನಾಕ್ರಮದ ಗಾಢ ಪ್ರಭಾವದಲ್ಲಿದ್ದ-ಭಾರತೀಯ ಸಂಸ್ಕೃತಿ ಪರಕೀಯವಾದ ಇಂಗ್ಲಿಷ್ ಸಂಸ್ಕೃತಿಗೆ ತನ್ನನ್ನು ತೆರೆದುಕೊಂಡಾಗ ಏನೇನು ಸಮಸ್ಯೆಗಳನ್ನು ಎದುರಿಸಿತು ಎಂಬುದನ್ನು ಶೇಕ್ಸ್‌ಪಿಯರ್‌ಗೆ ಸಂಬಂಧಿಸಿದಂತೆ ನೋಡಲು ಲೇಖಕರು ಪ್ರಯತ್ನಿಸಿದ್ದಾರೆ. ಪರಕೀಯ ಭಾಷೆಗಳ ಸಾಹಿತ್ಯಗಳನ್ನು ಅನುವಾದ ಮಾಡುವುದು ಹೇಗೆ ಈ ದೇಶವನ್ನು ಇನ್ನಷ್ಟು ಬಹುತ್ವಗೊಳಿಸಿತು ಎನ್ನುವುದನ್ನು ಅವರು ಕೃತಿಯಲ್ಲಿ ಹೇಳುತ್ತಾರೆ. ಅದಕ್ಕಾಗಿ ಶೇಕ್ಸ್‌ಪಿಯರ್‌ನ ನಾಟಕಗಳು, ಸಾನೆಟ್‌ಗಳನ್ನು ಮುಂದಿಟ್ಟುಕೊಂಡು ಚರ್ಚಿಸುತ್ತಾರೆ. ಪರಕೀಯ ಭಾಷೆಗಳ ಅನುವಾದವು ಬರೀ ಸಾಹಿತ್ಯಕ ಸಮಸ್ಯೆ ಅಲ್ಲ, ಅದೊಂದು ಸಾಂಸ್ಕೃತಿಕ, ರಾಜಕೀಯ ಆಯಾಮವುಳ್ಳ ಚಳವಳಿ ಎಂದು ಅವರು ಹೇಳುತ್ತಾರೆ.
ಬೋಧಿ ಟ್ರಸ್ಟ್ ಈ ಕೃತಿಯನ್ನು ಹೊರತಂದಿದೆ. 192 ಪುಟಗಳ ಈ ಕೃತಿಯ ಮುಖಬೆಲೆ 150 ರೂಪಾಯಿ. ಆಸಕ್ತರು 94826 22589 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News