ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಸೆರೆ

Update: 2018-01-11 06:36 GMT

ಅಹ್ಮದಾಬಾದ್, ಜ.11: ಗುಜರಾತ್ ರಾಜ್ಯದಲ್ಲಿ 2002ರ ಹಿಂಸಾಚಾರದ ಸಂದರ್ಭ ನಡೆದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದಲ್ಲಿ ಬೇಕಾಗಿದ್ದ ಹಾಗೂ ಇತ್ತೀಚಿಗಿನವರೆಗೂ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಅಹ್ಮದಾಬಾದ್ ಕ್ರೈಂ ಬ್ರ್ಯಾಂಚ್ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿಯನ್ನು ಕೃಷ್ಣನಗರ ನಿವಾಸಿ ಆಶಿಷ್ ಪಾಂಡೆ ಎಂದು ಗುರುತಿಸಲಾಗಿದೆ.

ಪ್ರಕರಣದ ಇತರ 60 ಆರೋಪಿಗಳ ಜತೆ ಪಾಂಡೆ ಹೆಸರು ಕೂಡ ಪ್ರಕರಣದ ಸಂಬಂಧ ಮೇಘನಿ ನಗರ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ನಲ್ಲಿ ಉಲ್ಲೇಖಗೊಂಡಿತ್ತು. ರಾಜ್ಯಸಭಾ ಸದಸ್ಯ ಎಹ್ಸಾನ್ ಜಾಫ್ರಿ ಸಹಿತ 69 ಮುಸ್ಲಿಮರನ್ನು ಬಲಿ ತೆಗೆದುಕೊಂಡು ಈ ಘಟನೆಯ ಸಂದರ್ಭ ಅಲ್ಲಿ ಹಾಹಾಕಾರ ಸೃಷ್ಟಿಸಿದ ಗುಂಪಿನಲ್ಲಿ ಪಾಂಡೆ ಕೂಡ ಇದ್ದನೆಂದು ಪೊಲೀಸರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಒಟ್ಟು ಐವರು ಆರೋಪಿಗಳು ಕಳೆದ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಅವರಲ್ಲಿ ಪಾಂಡೆ ಒಬ್ಬನಾಗಿದ್ದ. ಆತ ವಿವಿಧ ನಗರಗಳಲ್ಲಿ ಕಳೆದ ಕೆಲ ವರ್ಷಗಳಿಂದ ವಾಸಿಸುತ್ತಿದ್ದು, ಉತ್ತರಾಖಂಡದ ಹರಿದ್ವಾರದಲ್ಲಿ ಆತ ಸಾರಿಗೆ ಉದ್ಯಮವೊಂದರಲ್ಲಿ ಕೆಲಸಕ್ಕಿದ್ದನೆನ್ನಲಾಗಿದೆ. ಆತನನ್ನು ಈಗ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದ ಸುಪ್ರೀಂ ಕೋರ್ಟ್ ನೇಮಿಸಿರುವ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಿದ್ದಾರೆ.

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ವಿಚಾರಣಾ ನ್ಯಾಯಾಲಯ ಕಳೆದ ವರ್ಷದ ಜೂನ್ ನಲ್ಲಿ ಒಟ್ಟು 24 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತ್ತು. ಅವರಲ್ಲಿ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಎಲ್ಲಾ ಅಪರಾಧಿಗಳು ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಗುಜರಾತ್ ಹೈಕೋರ್ಟಿಗೆ ಅಪೀಲು ಸಲ್ಲಿಸಿದ್ದಾರೆ. ಪ್ರಕರಣದ ಇತರ 36 ಆರೋಪಿಗಳ ದೋಷಮುಕ್ತಿಯ ವಿರುದ್ಧ ಅಪೀಲು ಸಲ್ಲಿಸಲು ವಿಶೇಷ ತನಿಖಾ ತಂಡ ಸದ್ಯ ರಾಜ್ಯ ಸರಕಾರದ ಅನುಮತಿಗಾಗಿ ಕಾಯುತ್ತಿದೆ. ಈಗಾಗಲೇ ತಪ್ಪಿತಸ್ಥರು ಎಂದು ಘೋಷಿಸಿದವರ ಶಿಕ್ಷೆಯ ಪ್ರಮಾಣವನ್ನೂ ಹೆಚ್ಚಿಸಬೇಕೆಂಬ ಬೇಡಿಕೆಯನ್ನು ತಂಡ ಮುಂದಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News