ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ನಾಲ್ವರು ಹಿರಿಯ ನ್ಯಾಯಾಧೀಶರು ಬಂಡೆದ್ದಿದ್ದು ಏಕೆ?

Update: 2018-01-12 15:45 GMT

ಹೊಸದಿಲ್ಲಿ,ಜ.12: ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಮ್‌ನ ಭಾಗವಾಗಿರುವ ನಾಲ್ವರು ಹಿರಿಯ ನ್ಯಾಯಾಧೀಶರು ಬಹಿರಂಗವಾಗಿಯೇ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ದೂರಿಕೊಂಡ ಐತಿಹಾಸಿಕ ಘಟನೆಗೆ ಶುಕ್ರವಾರ ದೇಶವು ಸಾಕ್ಷಿಯಾಗಿತ್ತು.

  ಪ್ರಕರಣಗಳನ್ನು ವಿಚಾರಣೆಗಾಗಿ ಪೀಠಗಳಿಗೆ ಹಂಚಿಕೆ ಮಾಡುವಲ್ಲಿ ನ್ಯಾಯಾಲಯದಲ್ಲಿಯ ಸ್ಥಾಪಿತ ಸಂಪ್ರದಾಯಗಳನ್ನು ಮುಖ್ಯ ನ್ಯಾಯಮೂರ್ತಿಗಳು ಉಲ್ಲಂಘಿಸುತ್ತಿದ್ದಾರೆ ಎಂದು ಈ ಹಿರಿಯ ನ್ಯಾಯಾಧೀಶರು ಬಹಿರಂಗವಾಗಿಯೇ ಪ್ರತಿಭಟಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕಕ್ಕಾಗಿರುವ ನೂತನ ಪ್ರಕ್ರಿಯಾ ನಿಯಮಾವಳಿಯನ್ನು ಸರ್ವೋಚ್ಚ ನ್ಯಾಯಾಲಯವು ಅಂತಿಮಗೊಳಿಸಿರುವ ರೀತಿಯ ವಿರುದ್ಧವೂ ಅವರು ಧ್ವನಿಯೆತ್ತಿದ್ದಾರೆ.

ಶುಕ್ರವಾರ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿರುವ, ಈ ನಾಲ್ವರು ನ್ಯಾಯಾಧೀಶರು ಮುಖ್ಯ ನ್ಯಾಯಮೂರ್ತಿ ಮಿಶ್ರಾರಿಗೆ ಬರೆದಿದ್ದ ಪತ್ರದಲ್ಲಿ ಪ್ರಕರಣಗಳನ್ನು ಹಂಚುವ ಮುಖ್ಯಸ್ಥರಾಗಿ ತನ್ನ ಪಾತ್ರದಲ್ಲಿ ಅವರು ಸಂಪ್ರದಾಯಗಳನ್ನು ಉಲ್ಲಂಘಿಸಿರುವುದನ್ನು ಬೆಟ್ಟು ಮಾಡಲಾಗಿದೆ.

 ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳಲ್ಲಿ ಮುಖ್ಯ ನ್ಯಾಯಾಧೀಶರು ಇತರ ನ್ಯಾಯಾಧೀಶರಿಗೆ ಪ್ರಕರಣಗಳನ್ನು ಹಂಚಿಕೆ ಮಾಡುತ್ತಾರೆ. ನಿರ್ದಿಷ್ಟ ಪ್ರಕರಣದ ವಿಚಾರಣೆ ನಡೆಸಲು ಪೀಠದಲ್ಲಿ ಎಷ್ಟು ನ್ಯಾಯಾಧೀಶರು ಇರಬೇಕು ಎನ್ನುವುದನ್ನೂ ಅವರು ನಿರ್ಧರಿಸುತ್ತಾರೆ.

ವೈದ್ಯಕೀಯ ಕಾಲೇಜುಗಳ ಪ್ರಕರಣ

2017,ಆಗಸ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಮಿಶ್ರಾ ಅವರು ಹಲವಾರು ಸಂದರ್ಭಗಳಲ್ಲಿ ಪ್ರಕರಣಗಳನ್ನು ಒಂದು ಪೀಠದಿಂದ ಇನ್ನೊಂದು ಪೀಠಕ್ಕೆ ವರ್ಗಾಯಿಸಿದ್ದಾರೆ. ಈಗ ‘ವೈದ್ಯಕೀಯ ಕಾಲೇಜುಗಳ ಹಗರಣ’ವೆಂದು ಕರೆಯಲಾಗುತ್ತಿರುವ ಪ್ರಕರಣದಲ್ಲಿ ತನಿಖೆಯನ್ನು ಕೋರಿದ್ದ ಅರ್ಜಿಯನ್ನು ಕಳೆದ ನವೆಂಬರ್‌ನಲ್ಲಿ ನ್ಯಾ.ಜೆ.ಚೆಲಮೇಶ್ವರ ಅವರು ವಿಚಾರಣೆಗಾಗಿ ಅಂಗೀಕರಿಸಿದ್ದರು. ಸೆ.23ರಂದು ಸಿಬಿಐ ಸರ್ವೋಚ್ಚ ನ್ಯಾಯಾಲಯದಲ್ಲಿ ವೈದ್ಯಕೀಯ ಕಾಲೇಜುಗಳ ಪರ ತೀರ್ಪು ಕೊಡಿಸುವ ಭರವಸೆ ನೀಡಿ ಅವುಗಳಿಂದ ಲಂಚ ಸ್ವೀಕರಿಸಿದ್ದ ಆರೋಪದಲ್ಲಿ ಒಡಿಶಾ ನ್ಯಾಯಾಲಯದ ಮಾಜಿ ನ್ಯಾಯಾಧೀಶರೋರ್ವರನ್ನು ಬಂಧಿಸಿತ್ತು. ಆ ಸಮಯದಲ್ಲಿ ಈ ಪ್ರಕರಣವು ಮುಖ್ಯ ನ್ಯಾಯಮೂರ್ತಿ ಮಿಶ್ರಾ ನೇತೃತ್ವದ ಪೀಠದ ಎದುರಿನಲ್ಲಿತ್ತು. ನ್ಯಾ.ಚೆಲಮೇಶ್ವರ ಅವರು ಅದನ್ನು ಸಂವಿಧಾನ ಪೀಠಕ್ಕೆ ಒಪ್ಪಿಸಿದ್ದರು.

 ಮರುದಿನವೇ ನ್ಯಾ.ಮಿಶ್ರಾ ಅವರು ಈ ಆದೇಶವನ್ನು ಮರಳಿಸಲು ಐವರು ನ್ಯಾಯಾಧೀಶರ ಪೀಠವನ್ನು ರಚಿಸಿದ್ದರು ಮತ್ತು ಪ್ರಕರಣಗಳ ನಿಯೋಜನೆ ಕೇವಲ ಮುಖ್ಯ ನ್ಯಾಯಾಧೀಶರ ಹಕ್ಕು ಎಂದು ಪುನರುಚ್ಚರಿಸಿದ್ದರು. ನ್ಯಾಯಾಲಯ ಕಲಾಪದ ಸಂದರ್ಭದಲ್ಲಿ ನ್ಯಾ.ಚೆಲಮೇಶ್ವರ ಅವರ ಆದೇಶವನ್ನು ಕೆಲವು ವಕೀಲರು ಬಹಿರಂಗವಾಗಿಯೇ ಪ್ರಶ್ನಿಸಿದ್ದರು.

ನಂತರ ಅರ್ಜಿಗಳ ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯದ ಬೇರೊಂದು ಪೀಠವು ಹುರುಳಿಲ್ಲದ ಆರೋಪಗಳನ್ನು ಮಾಡಿದ್ದಕ್ಕಾಗಿ ಅರ್ಜಿದಾರರಿಗೆ 25 ಲ.ರೂ.ದಂಡವನ್ನು ವಿಧಿಸಿತ್ತು.

ನ್ಯಾಯಾಧೀಶರ ನೇಮಕ ಪ್ರಕ್ರಿಯಾ ನಿಯಮಾವಳಿಗಳಿಗೆ ಸಂಬಂಧಿಸಿದಂತೆಯೂ ಈ ನಾಲ್ವರು ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಅಂತಿಮಗೊಳಿಸಿರುವ ವಿಧಾನವನ್ನು ಅವರು ಆಕ್ಷೇಪಿಸಿದ್ದಾರೆ.

ನ್ಯಾ.ಲೋಯಾ ಪ್ರಕರಣ

ಆದರೆ ಶುಕ್ರವಾರದ ಬೆಳವಣಿಗೆಗಳಲ್ಲಿ ಅತ್ಯಂತ ವಿವಾದಾತ್ಮಕ ಭಾಗವು ವಿಶೇಷ ಸಿಬಿಐ ನ್ಯಾಯಾಧೀಶ ಬೃಜ್‌ಗೋಪಾಲ ಹರಕಿಶನ್ ಲೋಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ನ್ಯಾಯಾಧೀಶರ ಹೇಳಿಕೆಯಾಗಿತ್ತು. ಈ ಸುದ್ದಿಗೋಷ್ಠಿಗೂ ನ್ಯಾ.ಲೋಯಾ ಪ್ರಕರಣಕ್ಕೂ ಸಂಬಂಧವಿದೆಯೇ ಎಂಬ ನಿರ್ದಿಷ್ಟ ಪ್ರಶ್ನೆಗೆ ನ್ಯಾ.ರಂಜನ ಗೊಗೊಯ್ ಅವರು ‘ಹೌದು’ ಎಂದು ಉತ್ತರಿಸಿದ್ದರು. ಆದರೆ ಬಳಿಕ ಬಿಡುಗಡೆಗೊಳಿಸಲಾದ ಪತ್ರದಲ್ಲಿ ಲೋಯಾ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಇದು ಎರಡು ತಿಂಗಳ ಹಿಂದೆ ಬರೆದಿದ್ದ ಪತ್ರ ಎಂದು ನ್ಯಾಯಾಧೀಶರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ಲೋಯಾ ಸಾವಿನ ಕುರಿತು ತನಿಖೆಯನ್ನು ಕೋರಿದ್ದ ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯವು ಜ.10ರಂದು ಅಂಗೀಕರಿಸಿತ್ತು ಮತ್ತು ಜ.23ರಂದು ವಿಚಾರಣೆಯನ್ನು ನಡೆಸಲಿತ್ತು. ಆದರೆ ಶುಕ್ರವಾರ ಮಧ್ಯ ಪ್ರವೇಶಿಸಿದ ಸರ್ವೋಚ್ಚ ನ್ಯಾಯಾಲಯವು ವಕೀಲರ ಆಕ್ಷೇಪಗಳಿದ್ದರೂ ತನ್ನೆದುರು ಸಲ್ಲಿಸಲಾಗಿದ್ದ ಇಂತಹುದೇ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡಿತ್ತು. ವಿಚಾರಣೆಯ ಹೊಣೆಯನ್ನು ನ್ಯಾಯಮೂರ್ತಿಗಳಾದ ಅರುಣ ಮಿಶ್ರಾ ಮತ್ತು ಎಂ.ಎಂ.ಶಾಂತನಗೌಡರ್ ಅವರಿಗೆ ವಹಿಸಲಾಗಿದ್ದು, ವಿಷಯವು ಗಂಭೀರವಾಗಿದೆ ಮತ್ತು ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಅವರು ಶುಕ್ರವಾರ ಹೇಳಿದ್ದಾರೆ. ಅವರು ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರಕಾರಕ್ಕೆ ನೋಟಿಸ್‌ನ್ನೂ ಜಾರಿಗೊಳಿಸಿದ್ದಾರೆ.

ಬಾಂಬೆ ಉಚ್ಚ ನ್ಯಾಯಾಲಯವು ಈಗಾಗಲೇ ಈ ವಿಷಯವನ್ನು ಕೈಗೆತ್ತಿಕೊಂಡಿದ್ದರೂ ಈ ಅರ್ಜಿಯ ವಿಚಾರಣೆಯನ್ನು ನಡೆಸುವ ಸರ್ವೋಚ್ಚ ನ್ಯಾಯಾಲಯದ ನಿರ್ಧಾರ ಮತ್ತು ಈ ನಾಲ್ವರು ನ್ಯಾಯಾಧಿಶರಿಲ್ಲದ ಪೀಠಕ್ಕೆ ಅದನ್ನು ಒಪ್ಪಿಸಿರುವುದು ಅವರ ಬಂಡಾಯಕ್ಕೆ ಕಾರಣವಾಗಿರಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News