ಮುಖ್ಯ ನ್ಯಾಯಾಧೀಶ ಹುದ್ದೆಯನ್ನು ಪಣಕ್ಕಿಟ್ಟು ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ ನ್ಯಾ. ಗೊಗೋಯಿ

Update: 2018-01-13 10:04 GMT

ಹೊಸದಿಲ್ಲಿ,ಜ.13 : ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಕೆಲವೊಂದು ನಿರ್ಧಾರಗಳ ವಿರುದ್ಧ ಶುಕ್ರವಾರ ಸಿಡಿದೆದ್ದ ನಾಲ್ವರು ಹಿರಿಯ ನ್ಯಾಯಾಧೀಶರುಗಳ ಪೈಕಿ ಜಸ್ಟಿಸ್ ರಂಜನ್ ಗೊಗೋಯಿ ಮೂರನೇ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ. ನಾಲ್ವರಲ್ಲಿ ಅತ್ಯಂತ ಹಿರಿಯ ನ್ಯಾಯಾಧೀಶರಾಗಿರುವ ನ್ಯಾ. ಚೆಲಮೇಶ್ವರ್ ಈ ವರ್ಷದ  ಜೂನ್ ತಿಂಗಳಲ್ಲಿ ನಿವೃತ್ತರಾಗಲಿದ್ದರೆ,ನ್ಯಾ. ಮದನ್ ಬಿ ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಅವರು ಕ್ರಮವಾಗಿ ಈ ವರ್ಷದ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ.

ಹಾಲಿ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಮಿಶ್ರಾ ಅವರು ಅಕ್ಟೋಬರ್ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ. ಹೀಗಿರುವಾಗ ಮುಂದಿನ ಮುಖ್ಯ ನ್ಯಾಯಮೂರ್ತಿಯ ಹುದ್ದೆಗೆ ನ್ಯಾ. ಗೊಗೋಯಿ ಅವರನ್ನೇ ಶಿಪಾರಸು ಮಾಡಬೇಕಾಗಬಹುದು. ಆದರೆ ಬಂಡಾಯವೆದ್ದಿರುವ ಅವರ ಹೆಸರನ್ನು ಹಾಲಿ ಮುಖ್ಯ ನ್ಯಾಯಮೂರ್ತಿಗಳು ಶಿಫಾರಸು ಮಾಡುವ ಸಾಧ್ಯತೆಯಿದೆಯೇ ಎಂಬುದು ಈಗಿನ ಪ್ರಶ್ನೆ.

ಶುಕ್ರವಾರದ ಪತ್ರಿಕಾಗೋಷ್ಠಿಯುದ್ದಕ್ಕೂ ನ್ಯಾ. ಗೊಗೋಯಿ ಏನನ್ನೂ ಹೇಳಿರಲಿಲ್ಲ ಆದರೆ ಅಂತಿಮವಾಗಿ ಬಾಯ್ತೆರೆದ ಅವರು ದೇಶದ  ಋಣವನ್ನು ತೀರಿಸಲು ಬಂದಿದ್ದಾಗಿ ಹೇಳಿದರು. ನ್ಯಾಯಾಧೀಶ ಲೋಯಾ ಪ್ರಕರಣದ ವಿಚಾರಣೆಯನ್ನು  ಇನ್ನೊಂದು ಪೀಠಕ್ಕೆ ಹಸ್ತಾಂತರಿಸಿರುವುದೇ  ಈ ಪತ್ರಿಕಾಗೋಷ್ಠಿ ನಡೆಸಲು ಕಾರಣವೆಂಬುದನ್ನೂ ಅವರು ದೃಢಪಡಿಸಿದ್ದರು.

ಸಾಮಾನ್ಯವಾಗಿ ತಮ್ಮ ನಿವೃತ್ತಿಯಾಗುವ ದಿನಾಂಕಕ್ಕಿಂತ ಬಹಳ ಮುಂಚಿತವಾಗಿಯೇ ಹಾಲಿ ಮುಖ್ಯ ನ್ಯಾಯಮೂರ್ತಿ  ತಮ್ಮ ಉತ್ತರಾಧಿಕಾರಿಯ ಹೆಸರು ಶಿಫಾರಸು ಮಾಡಿ ಸರಕಾರಕ್ಕೆ ಪತ್ರ ಬರೆಯುತ್ತಾರೆ.  ನ್ಯಾ. ಮಿಶ್ರಾ ಅಕ್ಟೋಬರ್ ತಿಂಗಳಲ್ಲಿ ನಿವೃತ್ತರಾಗಲಿರುವುದರಿಂದ ಅವರು ಯಾರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಶಿಫಾರಸು ಮಾಡಲಿದ್ದಾರೆಂಬುದು ಕುತೂಹಲಕರ.

ಜ್ಯೇಷ್ಠತೆಯನ್ನು ಪರಿಗಣಿಸದೆ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಿಸಿದ ಒಂದೆರಡು ಘಟನೆಗಳು ದೇಶದಲ್ಲಿ ನಡೆದಿದ್ದು, 1977ರಲ್ಲಿ  ಆಗಿನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದ ಜಸ್ಟಿಸ್ ಎಚ್ ಎಸ್ ಖನ್ನಾ ಅವರನ್ನು ಕಡೆಗಣಿಸಿ ಜಸ್ಟಿಸ್ ಎಂ ಎಚ್ ಬೇಗ್ ಅವರನ್ನು ಇಂದಿರಾ ಗಾಂಧಿ ಅವರ ಅವಧಿಯಲ್ಲಿ ಮುಖ್ಯ ನ್ಯಾಯಮೂರ್ತಿಯನ್ನಾಗಿಸಲಾಗಿತ್ತು. ಈ ಘಟನೆ ನಡೆದ ಕೂಡಲೇ ಖನ್ನಾ ನಿವೃತ್ತಿ ಘೋಷಿಸಿದ್ದರು.  ತುರ್ತುಪರಿಸ್ಥಿತಿಯ ವೇಳೆ ಜೀವಿಸುವ ಮೂಲಭೂತ ಹಕ್ಕು ಹಾಗೂ ಕಾನೂನಿನ ಪರವಾಗಿ ನಿಂತಿದ್ದಕ್ಕೆ ಜಸ್ಟಿಸ್ ಖನ್ನಾ ಬೆಲೆ ತೆರಬೇಕಾಗಿ ಬಂದಿತ್ತು.

ಇದಕ್ಕೂ ಹಿಂದೆ 1971ರಲ್ಲಿ   ನ್ಯಾಯಾಂಗಕ್ಕಿಂತ ಸಂಸತ್ತಿಗೆ ಹೆಚ್ಚಿನ ಅಧಿಕಾರ ನೀಡುವ ಸಲುವಾಗಿ ಸಂವಿಧಾನದಲ್ಲಿ  ತಿದ್ದುಪಡಿ ತರ ಬಯಸಿದ್ದ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಯತ್ನವು ಕೇಶವಾನಂದ ಭಾರತಿ ತೀರ್ಪಿನಲ್ಲಿ  ತಲೆಕೆಳಗಾದ  ನಂತರ   ಆಗಿನ ಮುಖ್ಯ ನ್ಯಾಯಮೂರ್ತಿ ಎಸ್ ಎಂ ಸಿಕ್ರಿ ಅವರ ಸ್ಥಾನಕ್ಕೆ  ತಮ್ಮನ್ನು ಕಡೆಗಣಿಸಿ ತಮ್ಮ ಕಿರಿಯ ನ್ಯಾಯಾಧೀಶ ನ್ಯಾ. ಎ ಎನ್ ರಾಯ್ ಅವರನ್ನ ನೇಮಿಸಿದ್ದನ್ನು ವಿರೋಧಿಸಿ  ನ್ಯಾಯಾಧೀಶರುಗಳಾದ ಜೆ ಎಂ ಶೇಲತ್, ಎ ಎನ್ ಗ್ರೋವರ್ ಹಾಗೂ ಕೆ. ಎಸ್. ಹೆಗ್ಡೆ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News