ನಿರ್ದಿಷ್ಟ ಅಭ್ಯರ್ಥಿಗೆ ಮತ ಚಲಾಯಿಸಿಲ್ಲ ಎಂದು ಬಾಲಕಿಯ ಬರ್ಬರ ಗ್ಯಾಂಗ್ ರೇಪ್, ಕೊಲೆ

Update: 2018-01-13 11:30 GMT

ರಾಂಚಿ,ಜ.13 :  ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಮಹಿಳೆಯೊಬ್ಬಳಿಗೆ ಕುಟುಂಬವೊಂದರ ಸದಸ್ಯರು ಮತ ಚಲಾಯಿಸಿಲ್ಲ ಎಂಬ ಸಿಟ್ಟಿಗೆ  ಆ ಮಹಿಳೆಯ ಪತಿ ಮತ್ತು ನಾಲ್ಕು ಮಂದಿ ಇತರರು ಆ ಕುಟುಂಬಕ್ಕೆ ಸೇರಿದ 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಗೈದು ಕೊಲೆಗೈದ ಘಟನೆ  ಜಾರ್ಖಂಡ್ ರಾಜ್ಯದ ಪಾಕುರ್ ಜಿಲ್ಲೆಯ ಗ್ರಾಮವೊಂದರಿಂದ ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಸಂತ್ರಸ್ತೆ ಬಾಲಕಿ ಜನವರಿ 8ರ ಬೆಳಿಗ್ಗೆ ಸುಮಾರು 6 ಗಂಟೆಗೆ ಬರ್ಹಿದೆಸೆಗೆಂದು ಹೋದವಳು ಹಿಂದೆ ಬಾರದೇ ಇದ್ದಾಗ ಆಕೆಯ ತಂದೆ  ಲಿಟ್ಟಿಪಾರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು, ಬಾಲಕಿಯ ಶವ ಮರುದಿನ ಹತ್ತಿರದ ಕಾಡಿನಲ್ಲಿ ಪತ್ತೆಯಾಗಿತ್ತು.

ಘಟನೆ ಸಂಬಂಧ ಪೊಲೀಸರು ಪ್ರೇಮಲಾಲ್ ಹಂಸದ, ಸಾಮ್ಯುವೆಲ್ ಹಂಸದ, ಕಟ್ಟಿ ಹಂಸದ ಹಾಗೂ ಸಿಶು ಹಂಸದ ಎಂಬವರನ್ನು ಬಂಧಿಸಿದ್ದಾರೆ.ಮೊದಲ ಆರೋಪಿ ಹೊರತುಪಡಿಸಿ ಉಳಿದವರು ಸಹೋದರರಾಗಿದ್ದಾರೆ.

ಆರೋಪಿ ಪ್ರೇಮಲಾಲ್ ನ ಪತ್ನಿ ಪಂಚಾಯತ್ ಮುಖ್ಯಸ್ಥ ಹುದ್ದೆಗೆ ಸ್ಪರ್ಧಿಸಿದ್ದಳು. ಆದರೆ ಬಾಲಕಿಯ ಕುಟುಂಬ ಆಕೆಯ ಪರ ಮತ ಚಲಾಯಿಸಿಲ್ಲದ ಕಾರಣ ಆಕೆ ಸೋತಿದ್ದಾಳೆ ಎಂದು ದೂರಲಾಗಿತ್ತು, ಇದೇ ಸಿಟ್ಟಿನಿಂದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿ ಕೊಲ್ಲಲಾಗಿದೆ ಎಂದು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News