ಚಿಕ್ಕಮಗಳೂರು: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ ‘ಪರೀಕ್ಷಾಪೂರ್ವ ತಯಾರಿ ಶಿಬಿರ’

Update: 2018-01-13 12:31 GMT

ಚಿಕ್ಕಮಗಳೂರು, ಜ.13: ಪರೀಕ್ಷೆಯ ಭಯದಿಂದ ಹೊರಬಂದು ಬದುಕನ್ನು ಸಂಭ್ರಮಿಸಬೇಕು.  ಸ್ಪರ್ಧೆ ಮತ್ತು ಹೋಲಿಕೆ ಸರ್ವಸ್ವವಲ್ಲ ಎಂದು ರಾಷ್ಟ್ರೀಯ ತರಬೇತುದಾರ ಕಾರ್ಪೋರೇಷನ್ ಬ್ಯಾಂಕ್ ಮಂಗಳೂರು ಹಿರಿಯ ವ್ಯವಸ್ಥಾಪಕ ಆರ್.ಕೆ.ಬಾಲಚಂದ್ರ ಅಭಿಪ್ರಾಯಿಸಿದರು.

ಅವರು ಶನಿವಾರ ಚಿಕ್ಕಮಗಳೂರು ರೋಟರಿಕ್ಲಬ್ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ನಗರದ ಎಂಎಲ್‍ವಿ ರೋಟರಿ ಸಭಾಂಗಣದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಪರೀಕ್ಷಾಪೂರ್ವ ತಯಾರಿ ಶಿಬಿರ’ದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪರಿಸರದ, ಸರ್ಕಾರಿ ಶಾಲೆಯ ಮಕ್ಕಳಿಗೆ ಹೆಚ್ಚಿನ ಸೌಲಭ್ಯ ತಲುಪಿಲ್ಲ.  ಹೊಸ ಪಠ್ಯಕ್ರಮ ಐದುವರ್ಷದ ಪ್ರಶ್ನೆಗಳನ್ನು ಆಧರಿಸಿ ಕಿರುಹೊತ್ತಿಗೆ ಸಿದ್ಧಪಡಿಸಿದ್ದು,  ಅದನ್ನು ನಿತ್ಯ ಆಸಕ್ತಿಯಿಂದ ಗಮನಿಸಿದರೆ ಶೇ.35ಅಂಕಪಡೆಯಲು ಯಾವುದೇ ಕಷ್ಟವಿಲ್ಲ.  35ರ ಅಂಚಿನವರು 65ಅಂಕ ಗಳಿಸುವುದು ಸುಲಭ.  ಧನಾತ್ಮಕವಾದ ಚಿಂತನೆ ನಮ್ಮ ಬಗ್ಗೆ ನಮಗೆ ನಂಬಿಕೆ ಅಗತ್ಯ.  ಮಗು ಹುಟ್ಟಿನಾಗಿನಿಂದ ಸ್ಪರ್ಧೆ ಮತ್ತು ಹೋಲಿಕೆ ಆರಂಭವಾಗುವುದು ದುರಾದೃಷ್ಟಕರ.  ಅಂಕಗಳೇ ಜೀವನವಲ್ಲ.  ಒಂದು ಪರೀಕ್ಷೆ ಒಬ್ಬವ್ಯಕ್ತಿಯ ಜೀವನ ಖಂಡತಾ ಬದಲಾಯಿಸಲಾರದು ಎಂದು ಹೇಳಿದರು.

ಒಬ್ಬವ್ಯಕ್ತಿಗೆ ಸಾಧ್ಯತೆ ಇರುವ ಸಾಮಥ್ರ್ಯ ಮಾತ್ರ ಹೊರಬರುತ್ತದೆ.  ಅದಕ್ಕಿಂತ ಹೆಚ್ಚಿನದು ಸಾಧ್ಯವಿಲ್ಲ.  ಆಸಕ್ತಿಯ ಕ್ಷೇತ್ರ ಗೊತ್ತುಮಾಡಿಕೊಂಡರೆ ಶೇ.100ರಷ್ಟು ಯಶಸ್ಸು ಗಳಿಸಬಹುದು.  9ನೆಯ ತರಗತಿಯಲ್ಲಿ ಅನುತ್ತೀರ್ಣನಾದ್ದರಿಂದ ಸಚಿನ್ ತೆಂಡುಲ್ಕರ್ ಅಂತಹ ಕ್ರಿಕೆಟ್ ದೇವರು ನಮಗೆ ಸಿಕ್ಕಿದ್ದಾನೆ.  ಒಂದು ಫೇಲ್‍ನಲ್ಲಿ ಭವಿಷ್ಯಪೂರ್ತಿ ನಿಲ್ಲುವುದಿಲ್ಲ ಎಂಬ ಸತ್ಯವನ್ನೂ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.

10ನೆಯ ತರಗತಿ ರಾಜ್ಯಮಟ್ಟದ ಪರೀಕ್ಷೆಯಾಗಿದ್ದು,  ಅಲ್ಲಿಯವರೆಗೂ ಮುಂದಿನ ತರಗತಿಗಳಿಗೆ ಮುಂದೂಡಿಕೊಂಡು ಬರುವ ಪದ್ಧತಿ ಇದೆ. ಹಿಂದೆ ಫಲಿತಾಂಶ ರಾಜ್ಯಮಟ್ಟದ ಪರೀಕ್ಷೆಗಳಲ್ಲಿ ಪ್ರಕಟವಾಗುತ್ತಿತ್ತು. ಇಂದು ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ಸಾಕಷ್ಟು ಬದಲಾವಣೆ ಬಂದಿದೆ. ಒತ್ತಡ ನಿವಾರಣೆ ಹಿನ್ನಲೆಯಲ್ಲಿ ಪ್ರಶ್ನೆಪತ್ರಿಕೆ ನೀಡಿ 15ನಿಮಿಷ ಅದನ್ನು ಓದಲು ಸಮಯಾವಕಾಶ ಮಾಡಿಕೊಡಲಾಗುತ್ತದೆ. ಇಂದು ಲೋಕಾರ್ಪಣೆಗೊಂಡ ‘ಪರೀಕ್ಷೆ ಒಂದು ಧನಾತ್ಮಕ ಚಿಂತನೆ’ ಕಿರುಹೊತ್ತಿಗೆ ರಾಜ್ಯದ ಪ್ರಯತ್ನ ಪ್ರಥಮ ಪ್ರಯತ್ನ ಎಂದು ನುಡಿದರು.

ಕ್ಷೇತ್ರಶಿಕ್ಷಣಾಧಿಕಾರಿ ವೆಂಕಟರಾಮು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಶಿಕ್ಷಣ ಇಲಾಖೆ ಕಾರ್ಯದಲ್ಲಿ ರೋಟರಿ ಕ್ಲಬ್ ಕೈಜೋಡಿಸಿರುವುದು ಅಭಿನಂದನಾರ್ಹ. ಪರೀಕ್ಷೆ ಪಾಸಾಗಲು ಬೇಕಾದ ಅಗತ್ಯ ಪ್ಯಾಕೇಜ್ ಇಲ್ಲಿದೆ.  ಇಲ್ಲಿ ತರಬೇತಿ ಪಡೆದ ಮಕ್ಕಳು ತಮ್ಮ ಸ್ನೇಹಿತರಿಗೂ ಈ ವಿಚಾರ ತಿಳಿಸಬೇಕು. ಕ್ಷೇತ್ರದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು 4,348ಮಕ್ಕಳು ತೆಗೆದುಕೊಂಡಿದ್ದು ಎಲ್ಲರಿಗೂ ಕಿರುಹೊತ್ತಿಗೆ ಸಹಕಾರಿ ಎಂದರು.
ಚಿಕ್ಕಮಗಳೂರು ರೋಟರಿಕ್ಲಬ್ ಅಧ್ಯಕ್ಷ ಕೆ.ಬಿ.ಅನಂತೇಗೌಡ ಅಧ್ಯಕ್ಷತೆ ವಹಿಸಿದ್ದು, ಕಿರುಹೊತ್ತಿಗೆ ಬಿಡುಗಡೆಗೊಳಿಸಿದರು. ಮೂಗ್ತಿಹಳ್ಳಿ, ಮರ್ಲೆ, ಕೆ.ಆರ್.ಪೇಟೆ ಸೇರಿದಂತೆ 11 ಶಾಲೆಗಳ 270ಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಉಮಾಮಹೇಶ್ವರಯ್ಯ, ದಂಡನಾಯಕ ಸನತ್ ಸದಸ್ಯರಾದ ಪ್ರಸಾದ್, ಗೌತಮಚಂದಜೈನ್, ನಂಜೇಗೌಡ,ಯೋಜನಾ ನಿರ್ದೇಶಕ ಎಂ.ಎಸ್.ಸುಧೀರ್, ನಿರ್ದೇಶಕ ಸೆಂದಿಲ್‍ಕುಮಾರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News