ಆಹಾರ ಗೋದಾಮುಗಳಿಗೂ ಬಯೋಮೆಟ್ರಿಕ್ ಅಳವಡಿಕೆ: ಯು.ಟಿ.ಖಾದರ್

Update: 2018-01-13 13:36 GMT

 ಧಾರವಾಡ, ಜ.13: ನ್ಯಾಯಬೆಲೆ ಅಂಗಡಿಗಳಲ್ಲಿ ಅಳವಡಿಸಿರುವಂತೆ ಆಹಾರ ಗೋದಾಮುಗಳಲ್ಲಿಯೂ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸುವ ಸಂಬಂಧ ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಶನಿವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ 512 ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಅಳವಡಿಸಲಾಗಿದೆ. ಉತ್ತಮ ಸೇವೆ ಒದಗಿಸುವ ಅಂಗಡಿಗಳ ಮೂಲಕ ಪಡಿತರ ಪಡೆಯುವ ಅವಕಾಶ ಗ್ರಾಹಕರಿಗೆ ಒದಗಿಸಲಾಗಿದೆ. ಶೇ.100ರಷ್ಟು ಆಧಾರ್ ಸಂಪರ್ಕ ಕಲ್ಪಿಸಲಾಗಿದೆ. ಜನರ ಬೇಡಿಕೆಗೆ ಅನುಗುಣವಾಗಿ ಕೆಲವೆಡೆ 5 ಕೆಜಿ ಅಕ್ಕಿ ಹಾಗೂ 2 ಕೆಜಿ ಗೋಧಿ ವಿತರಿಸಲಾಗುತ್ತಿದೆ ಎಂದರು.

ಬಿಪಿಎಲ್ ಆದ್ಯತಾ ಪಡಿತರ ಚೀಟಿ ಪಡೆಯಲು ಅಗತ್ಯವಿರುವ ಅರ್ಹತಾ ಷರತ್ತುಗಳನ್ನು ಸರಳಗೊಳಿಸಲಾಗಿದ್ದು 1 ಲಕ್ಷ 20 ಸಾವಿರಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಎಲ್ಲ ಕುಟುಂಬಗಳಿಗೂ ಈಗ ಸೌಲಭ್ಯ ದೊರೆಯುತ್ತಿದೆ ಎಂದು ಅವರು ಹೇಳಿದರು. ಬಿಪಿಎಲ್ ಆದ್ಯತಾ ಕುಟುಂಬದ ಅರ್ಹತಾ ಷರತ್ತುಗಳ ಸಡಿಲಿಕೆಯಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ. ರಾಜ್ಯದಲ್ಲಿ 8.5 ಲಕ್ಷ ನಕಲಿ ಪಡಿತರ ಚೀಟಿದಾರರನ್ನು ತೆಗೆದು ಹಾಕಲಾಗಿದೆ. ರಾಜ್ಯದ ಪಡಿತರ ವಿತರಣಾ ವ್ಯವಸ್ಥೆಯ ಸಾಫ್ಟ್‌ವೇರ್ ಅಳವಡಿಸಿಕೊಳ್ಳಲು ದೇಶದ ಇತರ ರಾಜ್ಯಗಳು ಮುಂದೆ ಬರುತ್ತಿವೆ ಎಂದು ಖಾದರ್ ಹೇಳಿದರು.

ಗ್ರಾಮ ಪಂಚಾಯತಿಗಳು, ಸೈಬರ್ ನೆಟ್ ಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೂ ಸಾಕು ಪಡಿತರ ಚೀಟಿದಾರರ ಮನೆ ಬಾಗಿಲಿಗೆ ನೋಂದಾಯಿತ ಅಂಚೆ ಮೂಲಕ ಪಡಿತರ ಚೀಟಿ ತಲುಪುತ್ತಿದೆ. ಅದಕ್ಕಾಗಿ ಅಲೆದಾಡುವ ಪರಿಸ್ಥಿತಿ ಈಗ ಇಲ್ಲ. ಕಳೆದ 20 ವರ್ಷಗಳಿಂದ ಇದ್ದ ಸಮಸ್ಯೆಗಳು ಈಗ ನಿವಾರಣೆಯಾಗಿವೆ ಎಂದು ಅವರು ತಿಳಿಸಿದರು.

ಧಾರವಾಡ ಜಿಲ್ಲೆಯಲ್ಲಿ 50 ಸಾವಿರ ಪಡಿತರ ಚೀಟಿ ಅರ್ಜಿಗಳು ಬಂದಿವೆ. 45 ಸಾವಿರ ಅರ್ಜಿಗಳನ್ನು ಪರಿಶೀಲಿಸಲಾಗಿದೆ. ದ್ವಿಪ್ರತಿಯಲ್ಲಿದ್ದ 10 ಸಾವಿರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಈಗಾಗಲೇ 33 ಸಾವಿರ ಕಾರ್ಡುಗಳನ್ನು ಮುದ್ರಿಸಿ, 25 ಸಾವಿರ ಕಾರ್ಡುಗಳನ್ನು ವಿತರಿಸಲಾಗಿದೆ ಎಂದು ಖಾದರ್ ಹೇಳಿದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಸದಾಶಿವ ಮರ್ಜಿ, ಮಹಾನಗರಪಾಲಿಕೆ ಸದಸ್ಯ ದೀಪಕ್ ಚಿಂಚೋರೆ, ಮುಖಂಡರಾದ ಇಸ್ಮಾಯಿಲ್ ತಮಟಗಾರ, ದೇವಾನಂದ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News