ಶಿವಮೊಗ್ಗ : ಜ.17ರಂದು ನಗರದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ

Update: 2018-01-13 14:56 GMT

ಶಿವಮೊಗ್ಗ,ಜ.13: ಜ.17ರಂದು ನಗರದ ಸೈನ್ಸ್ ಮೈದಾನದಲ್ಲಿ ಮೂಡುಬಿದರೆಯ ಆಳ್ವಾಸ್ ಪ್ರತಿಷ್ಠಾನದವರು ಸಾಂಸ್ಕೃತಿಕ ವೈಭವವನ್ನು ನಡೆಸಿಕೊಡಲಿದ್ದಾರೆ. 
ಸುದ್ದಿಗೋಷ್ಠಿಯಲ್ಲಿ ಈಬಗ್ಗೆ ಮಾಹಿತಿ ನೀಡಿದ ಆಳ್ವಾಸ್ ನುಡಿಸಿರಿ, ವಿರಾಸತ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಪಿ. ದಿನೇಶ್, ಈ ಕಾರ್ಯಕ್ರಮದಲ್ಲಿ ಆಳ್ವಾಸ್‍ನ ಸುಮಾರು 350 ವಿದ್ಯಾರ್ಥಿಗಳು ಮೂರುವರೆ ಘಂಟೆಗಳ ಕಾಲ ಸುಮಾರು 15 ವೈವಿಧ್ಯಮಯ ನೃತ್ಯ ಪ್ರದರ್ಶನವನ್ನು ನೀಡಲಿದ್ದಾರೆ ಎಂದರು.

ಅಂದು ಸಂಜೆ 5:30ಕ್ಕೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ನಗರದ ಶಾಸಕರು, ಬಿ.ವೈ. ರಾಘವೇಂದ್ರ, ಶಾರದಾ ಪೂರ್ಯಾನಾಯ್ಕ, ಆರ್. ಪ್ರಸನ್ನಕುಮಾರ್, ಮೇಯರ್ ಏಳುಮಲೈ, ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವಾ, ಶಿವಮೊಗ್ಗ ಘಟಕದ ಗೌರವಾಧ್ಯಕ್ಷ ಸಿ.ಎಸ್. ಷಡಕ್ಷರಿ ಮೊದಲಾದವರು ಪಾಲ್ಗೊಳ್ಳುವರು ಎಂದರು.

ಶಿವಮೊಗ್ಗದಲ್ಲಿ 2012ರಿಂದ ಈ ಘಟಕ ಆರಂಭವಾಗಿದ್ದು, ನಾಲ್ಕನೆಯ ಬಾರಿ ಸಾಂಸ್ಕೃತಿಕ ವೈಭವವನ್ನು ಆಳ್ವಾಸ್ ವಿದ್ಯಾರ್ಥಿಗಳು ನಡೆಸಿಕೊಡಲಿದ್ದಾರೆ. ಇದರಲ್ಲಿ ಸುಮಾರು 15ಸಾವಿರ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುವುದು. ಬೃಹದಾಕಾರದ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಸಾರ್ವಜನಿಕರು  ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಅವರು ಮನವಿ ಮಾಡಿದರು.

ಈಗಾಗಲೇ ಈ ಸಾಂಸ್ಕೃತಿಕ ವೈಭವವು ಸಾಗರ ಮತ್ತು ತೀರ್ಥಹಳ್ಳಿಯಲ್ಲಿ ಮುಕ್ತಾಯವಾಗಿದ್ದು, ಜ.16ರಂದು ಹೊನ್ನಾಳಿ 17ರಂದು ಶಿವಮೊಗ್ಗ, 18ರಂದು ಭದ್ರಾವತಿ, 29ರಂದು ಹೊಸನಗರ ಮತ್ತು 30ರಂದು ಶಿಕಾರಿಪುರದಲ್ಲಿ ಜರುಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಘಟಕದ ಗೌರವಾಧ್ಯಕ್ಷ ಸಿ.ಎಸ್. ಷಡಕ್ಷರಿ, ಕಾರ್ಯದರ್ಶಿ ರಾಜಶೇಖರ್, ಪದಾಧಿಕಾರಿಗಳಾದ ಎಸ್.ಬಿ. ಅಶೋಕ್ ಕುಮಾರ್, ಸಿದ್ಧಬಸಪ್ಪ, ಎಚ್.ಸಿ. ಯೋಗೀಶ್ ಮೊದಲಾದವರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶ-ವಿದೇಶದ ವಿವಿಧ ಪ್ರಕಾರದ ಶಾಸ್ತ್ರೀಯ, ಜಾನಪದ ಕಾರ್ಯಕ್ರಮಗಳು ನಡೆಯಲಿವೆ. ಪ್ರಮುಖವಾಗಿ ಕೇರಳದ ಮೋಹಿನಿ ಅಟ್ಟಮ್, ಬಡಗುತಿಟ್ಟು ಯಕ್ಷಗಾನ (ಶ್ರೀರಾಮ ಪಟ್ಟಾಭಿಷೇಕ), ಆಂಧ್ರದ ಬಂಜಾರ ನೃತ್ಯ, ಮಣಿಪುರಿ ಸ್ಪಿಕ್ ಡಾನ್ಸ್, ಶ್ರೀಲಂಕಾದ ಕ್ಯಾಂಡಿ ನೃತ್ಯ, ಮಣಿಪುರಿ ದೋಲ್ ಚಲಂ, ಕಥಕ್ ನೃತ್ಯ, ಒರಿಸ್ಸಾದ ಗೋಟಿಪುವಾ ನೃತ್ಯ, ಮಹಾರಾಷ್ಟ್ರದ ಲಾವಣಿ ನೃತ್ಯ, ಗುಜರಾತಿನ ಗಾರ್ಭಾ ಮತ್ತು ದಾಂಡಿಯಾ ನೃತ್ಯ, ಪಶ್ಚಿಮ ಬಂಗಾಳದ ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನ ಮತ್ತು ವಂದೇಮಾತರಂ ನೃತ್ಯ ಜರುಗಲಿದೆ.
-ಎಸ್.ಪಿ. ದಿನೇಶ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News