ರಾಜನಾಥ್ ಸಿಂಗ್ ವಿರುದ್ಧ ರೈತರ ಧಿಕ್ಕಾರದ ಘೋಷಣೆ

Update: 2018-01-13 14:56 GMT

ಬೆಳಗಾವಿ, ಜ. 13: ರೈತರ ಸಾಲಮನ್ನಾ ಘೋಷಣೆ ಮಾಡಬೇಕು. ಮಹಾದಾಯಿ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕು ಎಂದು ಕೇಂದ್ರ ಸಚಿವ ರಾಜನಾಥ್‌ಸಿಂಗ್ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ರೈತರು ಧಿಕ್ಕಾರದ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಶನಿವಾರ ಇಲ್ಲಿನ ಕೆಎಲ್‌ಇ ಕಾಲೇಜಿನ ಜೀರಿಗೆ ಸಭಾಂಗಣದಲ್ಲಿ ಭಾರತೀಯ ಕೃಷಿಕ್ ಸಮಾಜ ರಾಷ್ಟ್ರೀಯ ಪರಿಷತ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರ ರೈತರ ಸಾಲಮನ್ನಾ ಘೋಷಣೆ, ಮಹಾದಾಯಿ ಸಮಸ್ಯೆ ಇತ್ಯರ್ಥಪಡಿಸಬೇಕು. ಈ ಬಗ್ಗೆ ತಮ್ಮ ಭಾಷಣದಲ್ಲಿ ಘೋಷಿಸಬೇಕೆಂದು ರೈತರು ಆಗ್ರಹಿಸಿದರು.

ಆದರೆ, ರಾಜನಾಥ್ ಸಿಂಗ್ ತಮ್ಮ ಭಾಷಣದಲ್ಲಿ ರೈತರ ಸಾಲಮನ್ನಾ ಮತ್ತು ಉತ್ತರ ಕರ್ನಾಟಕದ ನಾಲ್ಕೈದು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಮಹಾದಾಯಿ ಸಮಸ್ಯೆ ಇತ್ಯರ್ಥ ಸಂಬಂಧ ತುಟಿ ಬಿಚ್ಚಲಿಲ್ಲ. ಹೀಗಾಗಿ ರೈತರು ಸಭಾಂಗಣದಲ್ಲಿ ಧಿಕ್ಕಾರದ ಘೋಷಣೆ ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಮನವಿ ಸಲ್ಲಿಸಲು ತೆರಳಿದ ರೈತರನ್ನು ಸಚಿವರ ಬೆಂಗಾವಲು ಪಡೆ ಸಿಬ್ಬಂದಿ ತಡೆದು ಹೊರದಬ್ಬಿದರು. ರೈತರ ಮನವಿಯನ್ನು ಕೇಂದ್ರ ಸಚಿವ ರಾಜನಾಥ್ ಸಿಂಗ್ ಕಾಲಿನಲ್ಲಿ ತುಳಿದು ಸಭೆಯಿಂದ ಹೊರ ನಡೆದಿದ್ದಾರೆ. ಇದಕ್ಕೆ ಸೂಕ್ತ ಸಂದರ್ಭದಲ್ಲಿ ರೈತರು ತಕ್ಕ ಉತ್ತರ ನೀಡಲಿದ್ದಾರೆ ಎಂದು ರೈತರು ಎಚ್ಚರಿಸಿದರು.

‘ರೈತರಿಗೆ ಒಳ್ಳೆಯ (ಅಚ್ಛೆ ದಿನ್ ಆಯೇಗಾ)ದಿನಗಳು ಬರಲಿವೆ ಎಂಬ ಕೇಂದ್ರ ಸಚಿವ ರಾಜನಾಥ್ ಸಿಂಗ್ ಕನಿಷ್ಟ ಪಕ್ಷ ರೈತರ ಮನವಿಯನ್ನು ಆಲಿಸಲಿಲ್ಲ. ನಮ್ಮ ಮನವಿಯನ್ನು ಕಾಲಿನಲ್ಲಿ ತುಳಿದು ಹೋಗುವ ಮೂಲಕ ರೈತರನ್ನು ಅಪಮಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ರೈತರು ತಕ್ಕ ಉತ್ತರ ನೀಡಲಿದ್ದಾರೆ’

-ವಿಜಯ ಯಮಕನಮರಡಿ ರೈತ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News