ಕ್ಷಯರೋಗಿಗಳಿಗೆ ಶೀಘ್ರವೇ ಮಾಸಿಕ 500 ರೂ.ಗಳ ಆರ್ಥಿಕ ನೆರವು

Update: 2018-01-13 16:05 GMT

ಹೊಸದಿಲ್ಲಿ,ಜ.13: ಕ್ಷಯರೋಗಿಗಳು ಸಂಪೂರ್ಣವಾಗಿ ಗುಣಮುಖರಾಗುವವರೆಗೆ ಪೌಷ್ಟಿಕ ಆಹಾರಗಳನ್ನು ಖರೀದಿಸಲು ಮತ್ತು ಪ್ರಯಾಣ ವೆಚ್ಚಗಳನ್ನು ಭರಿಸಲು ಅವರಿಗೆ ನೆರವಾಗಲು ಮಾಸಿಕ 500 ರೂ.ಗಳನ್ನು ನೀಡಲು ಸರಕಾರವು ಯೋಜಿಸಿದೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ಇಲ್ಲಿ ತಿಳಿಸಿದರು.

ಈ ಯೋಜನೆಯಡಿ ಆದಾಯ ಪರಿಗಣನೆ ಇಲ್ಲದೆ ಸುಮಾರು 25 ಲಕ್ಷದಷ್ಟಿರುವ ರೋಗಿಗಳಿಗೆ ಸಾಮಾಜಿಕ ಬೆಂಬಲವಾಗಿ ಈ ನೆರವನ್ನು ನೀಡಲಾಗುವುದು. ಈ ಉಪಕ್ರಮವು 2025ರ ವೇಳೆಗೆ ಕ್ಷಯರೋಗ ನಿರ್ಮೂಲನದ ಗುರಿಯೊಂದಿಗೆ ಆರೋಗ್ಯ ಸಚಿವಾಲಯವು ಹಾಕಿಕೊಂಡಿರುವ ರಾಷ್ಟ್ರೀಯ ವ್ಯೂಹಾತ್ಮಕ ಯೋಜನೆಯ ಭಾಗವಾಗಿದೆ ಎದು ಅವರು ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ಭಾರತದಲ್ಲಿ ಪ್ರತಿವರ್ಷ ಅಂದಾಜು 2.8 ಮಿಲಿಯನ್ ಕ್ಷಯರೋಗ ಪ್ರಕರಣಗಳೂ ಸಂಭವಿಸುತ್ತಿದ್ದು, ಈ ಪೈಕಿ 1.7 ಮಿಲಿಯನ್ ಪ್ರಕರಣಗಳು ವರದಿಯಾಗುತ್ತಿವೆ.

ಆರೋಗ್ಯ ಸಚಿವಾಲಯವು ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ 2025ರ ವೇಳೆಗೆ ಕ್ಷಯರೋಗ ಪ್ರಕರಣಗಳನ್ನು ಶೇ.90ರಷ್ಟು ತಗ್ಗಿಸಲು ಮತ್ತು 2030ರ ವೇಳೆಗೆ ರೋಗದಿಂದ ಸಾವುಗಳ ಸಂಖ್ಯೆಯನ್ನು ಶೇ.95ರಷ್ಟು ತಗ್ಗಿಸಲು ಉದ್ದೇಶಿಸಿದೆ ಎಂದು ಅಧಿಕಾರಿ ತಿಳಿಸಿದರು.

ಆರೋಗ್ಯ ಸಚಿವಾಲಯದ ದತ್ತಾಂಶಗಳಂತೆ 2015ರಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 217 ಕ್ಷಯರೋಗ ಪ್ರಕರಣಗಳು ವರದಿಯಾಗಿದ್ದು, ಈ ಪ್ರಮಾಣ 2016ರಲ್ಲಿ 211ಕ್ಕಿಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News