ಜಾತ್ರೆ ಮಾನವ ಸಮಾಜದ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ: ಸುರೇಶ್‍ಕುಮಾರ್

Update: 2018-01-13 16:02 GMT

ಮೈಸೂರು,(ಸುತ್ತೂರು)ಜ.13: ಅಪರೂಪದ, ವಿರಳ ಸುಂದರ, ಸೃಜನಶೀಲ ಪರಿಸರದಲ್ಲಿ ಶನಿವಾರ ಸಂಪ್ರದಾಯ, ಶಿಕ್ಷಣ, ಜಾನಪದ, ದೇಸಿ ಸಂಸ್ಕೃತಿಯ ಪ್ರತಿಬಿಂಬವಾಗಿ ಸುತ್ತೂರು ಕ್ಷೇತ್ರದಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿ ಸ್ವಾಮೀಜಿ ಅವರ ಜಾತ್ರಾ ಮಹೋತ್ಸವ ವಿದ್ಯುಕ್ತವಾಗಿ ಆರಂಭವಾಯಿತು.

6 ದಿನಗಳ ಕಾಲ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯಲಿರುವ ಜಾತ್ರೆಯಲ್ಲಿ ಧರ್ಮ, ಸಂಸ್ಕøತಿ, ಕೃಷಿ, ದೇಸಿ ಕ್ರೀಡೆಗಳು, ಜಾನಪದ ಕಲೆಗಳು, ವಿಜ್ಞಾನ, ವೈಜ್ಞಾನಿಕತೆ, ಆಧುನಿಕತೆಯಲ್ಲೂ ನಂಬಿಕೆಗಳನ್ನು ಗಟ್ಟಿಗೊಳಿಸಿಕೊಳ್ಳುವ ದೃಢಚಿತ್ತವನ್ನು ಪೋಷಿಸುವ ವೈವಿಧ್ಯಮಯ ಕಾರ್ಯಕ್ರಮಗಳು ಜನಮಾನಸವನ್ನು ಚೈತನ್ಯದ ಚಿಲುಮೆಯಾಗಿಸುವಲ್ಲಿ ಪೈಪೋಟಿ ನಡೆಸಿವೆ.

ರಾಜ್ಯದ ವಿವಿಧಡೆಯಿಂದ ಜಾತ್ರೆಗೆ ಜನರು ಅತ್ಯಂತ ಸಂಭ್ರಮ, ಸಂತೋಷದಿಂದ ಧಾವಿಸಿದ್ದಾರೆ. ಇನ್ನೂ ಬರುವ ನಿರೀಕ್ಷೆಯೂ ಇದೆ. ಲಕ್ಷಾಂತರ ಜನರ  ಅಂತರಾಳಕ್ಕೆ ಜಾತ್ರೆ ಲಗ್ಗೆ ಇಟ್ಟಿದೆ ಎಂದರೆ ಉತ್ಪ್ರೇಕ್ಷೆಯಾಗದು.

ಸುತ್ತೂರು ಗದ್ದಿಗೆ ಬಳಿ ಅಳವಡಿಸಿರುವ ವಿಶಾಲವಾದ ವೇದಿಕೆಯಲ್ಲಿ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ಜಾತ್ರೆಯ ಅಂಗವಾಗಿ ಸಾಂಸ್ಕøತಿಕ ಮೇಳ, ಮಾಹಿತಿ ಕೇಂದ್ರ, ರಂಗೋಲಿ ಮತ್ತು ಸೋಬಾನೆ ಪದ ಸ್ಪರ್ಧೆಯನ್ನು ಉದ್ಘಾಟಿಸಲಾಯಿತು.

ಮಾಜಿ ಸಚಿವ ಎಸ್.ಸುರೇಶ್‍ಕುಮಾರ್ ಮಾತನಾಡಿ, ಹೊರಗೆ ಬೈಗುಳದಿಂದ ತುಂಬಿರುವ ಸಮಾಜವೇ ಇದೆ. ಆದರೆ, ಸುತ್ತೂರಿನ ಅಂಗಳದಲ್ಲಿ ಪ್ರೀತಿ, ಆದರವೇ ಹೊನಲಾಗಿ ಹರಿಯತ್ತಿದೆ. ಇದು ಜನರ ಮನಸ್ಸಿಗೆ ಮುದ ನೀಡಿ, ಚೈತನ್ಯ ಚಿಲುಮೆಯಾಗಿಸಿದೆ. ಜೆಎಸ್‍ಎಸ್ ಸಂಸ್ಥೆಯು ಶಿಕ್ಷಣ, ಆರೋಗ್ಯ, ಸಮಾಜ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಸೇವಾ ಕೈಂಕರ್ಯವನ್ನು ನಡೆಸಿದೆ ಎಂದು ಶ್ಲಾಘಿಸಿದರು. 

ಈ ಜಾತ್ರೆಯು ಮಾನವ ಸಮಾಜದ ಸಂಬಂಧಗಳನ್ನು ಗಟ್ಟಿಗೊಳಿಸುತ್ತಿದೆ. ಬಹುತೇಕ ಎಲ್ಲೆಡೆ ಸಮಾಜಗಳನ್ನು ಒಡೆಯುವ ಕೆಲಸ ನಡೆಯುತ್ತಿದ್ದರೆ, ಇಲ್ಲಿ ಅವನ್ನು ಜೋಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅಭಿಪ್ರಾಯಿಸಿದರು.

ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಕಂಬದಹಳ್ಳಿ ಶ್ರೀ ಜೈನಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಸುತ್ತೂರು ಮಠದ ಕಿರಿಯರಾದ ಶ್ರೀ ಜಯರಾಜೇಂದ್ರ ಸ್ವಾಮೀಜಿ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಶಾಸಕರಾದ ಎಸ್.ಸುರೇಶ್ ಕುಮಾರ್, ಎಚ್.ಪಿ.ಮಂಜುನಾಥ್, ಎಂ.ಪಿ.ರವೀಂದ್ರ, ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್.ಪಾಟೀಲ್, ಡಾ.ಸಿ.ಸೋಮಶೇಖರ್, ವಾಗ್ಮಿ ಡಾ.ಸಿ.ಸೋಮಶೇಖರ್, ಚಲನಚಿತ್ರ ನಿರ್ಮಾಪಕ ಎಸ್.ಎ.ಚನ್ನೇಗೌಡ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಜೆಎಸ್‍ಎಸ್ ಮಹಾವಿದ್ಯಾಲಯದ ಮುಖ್ಯ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಕಾರ್ಯದರ್ಶಿ ಎಸ್.ಪಿ.ಮಂಜುನಾಥ್ ಮುಂತಾದವರ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುತ್ತೂರು ಜಾತ್ರೆಗೆ ತಾರಾ ಮೆರುಗು: ಮಫ್ತಿ ಚಿತ್ರ ಡೈಲಾಗ್, ಟಗರು ಚಿತ್ರದ ಹಾಡಿಗೆ ನೃತ್ಯ ಮಾಡಿದ ಶಿವರಾಜ್‍ಕುಮಾರ್

ಸುತ್ತೂರು ಜಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ತಾರಾ ರಂಗು ಮೇಳೈಸುವ ಮೂಲಕ ಒಂದಿಷ್ಟು ಮನರಂಜನೆ ದ್ಯೋತಕವಾದ ಶಿಳ್ಳೆ ಚಪ್ಪಾಳೆಗಳೂ ಅಬ್ಬರಿಸಿ ಸಂಪ್ರದಾಯವಾದಿಗಳ ಹುಬ್ಬೇರಿಸುವಂತೆ ಮಾಡಿದವು.

ಕನ್ನಡ ಚಲನಚಿತ್ರ ರಂಗದ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‍ಕುಮಾರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಸ್ವಾಗತ ಭಾಷಣದಿಂದ ಹಿಡಿದು ಅತಿಥಿ ಅಭ್ಯಾಗತರು ಮಾತನಾಡುವಾಗ ಶಿವರಾಜ್‍ಕುಮಾರ್ ಅವರ ಹೆಸರು ಹೇಳಿದಾಗಲೆಲ್ಲ ಶಿಳ್ಳೆಗಳು, ಕರತಾಡನ, ಕೇಕೆ, ಶಿವಣ್ಣನಿಗೆ ಜೈ ಎಂಬ ಕೂಗು ಮೊಳಗಿತು.

ಡೈಲಾಗ್ ಹೊಡೆದು, ಹಾಡಿಗೆ ನರ್ತಿಸಿ ಅಭಿಮಾನಿಗಳ ಮನತಣಿಸಿದ ಕರುನಾಡ ಚಕ್ರವರ್ತಿ ಬಿರುದಾಂಕಿತ ಡಾ.ಶಿವರಾಜ್‍ಕುಮಾರ್...!

ಸುತ್ತೂರು ಜಾತ್ರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಿವರಾಜ್‍ಕುಮಾರ್ ಅವರು ಮಾತಿಗೆ ನಿಲ್ಲುತ್ತಿದ್ದಂತೆ, ಪುಟ್ಟ ಮಕ್ಕಳಾದಿಯಾಗಿ ಸಭಿಕರೆಡೆಯಿಂದ ಮಫ್ತಿ ಚಿತ್ರದ ಸಂಭಾಷಣೆ(ಡೈಲಾಗ್) ಹೇಳುವಂತೆ ಒತ್ತಾಯ ಕೇಳಿಬಂದಿತು.

ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಶಿವರಾಜ್‍ಕುಮಾರ್ `ಸುತ್ತ ಸಮುದ್ರ ಮಧ್ಯದಲ್ಲಿ ಕಾಡು...' ಎಂಬ ಉದ್ದದ ಡೈಲಾಗ್ ಹೊಡೆದ ಚಪ್ಪಾಳೆ, ಕರತಾಡನ ಗಿಟ್ಟಿಸಿದರು.

ನಂತರ ಮಾತನಾಡಿದ ಅವರು, ಈ ಸುತ್ತೂರು ಜಾಗ ತುಂಬಾ ಚೆನ್ನಾಗಿದೆ. ಆದರೆ, ಇದುರವರೆಗೆ ಯಾರೂ ಇಲ್ಲಿ ಚಿತ್ರೀಕರಣ ಮಾಡಿಲ್ಲ. ಮುಂದೆ ನಾವೇ ಇಲ್ಲಿ ಚಿತ್ರೀಕರಣ ಮಾಡುತ್ತೇವೆ ಎಂದರು.

ನಂತರ ಧ್ವನಿವರ್ಧಕದಲ್ಲಿ ಕೇಳಿಬಂದ `ಟಗರು' ಚಿತ್ರದ ಹಾಡಿಗೆ ಶಿವರಾಜ್ ನೃತ್ಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News