ಸಿದ್ದಾಪುರ: ಹಿಂಸಾ ರಾಜಕೀಯದ ವಿರುದ್ಧ ಎಸ್‍ಡಿಪಿಐ ಪ್ರತಿಭಟನೆ

Update: 2018-01-13 16:26 GMT

ಸಿದ್ದಾಪುರ, ಜ.13: ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಸಂಘಪರಿವಾರ ಹಿಂಸಾ ರಾಜಕೀಯದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿ ಎಸ್‍ಡಿಪಿಐ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇಲ್ಲಿನ ಬಸ್ ನಿಲ್ಥಾಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. 

ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಮುಸ್ತಫ ಮಾತನಾಡಿ, ವಿಜಯಪುರದ ವಿದ್ಯಾರ್ಥಿನಿ ದಾನಮ್ಮ ಅತ್ಯಾಚಾರ, ಕೊಲೆ, ದಕ್ಷಿಣ ಕನ್ನಡದ ದೀಪಕ್ ರಾವ್ ಮತ್ತು ಬಶೀರ್ ಹತ್ಯೆ ಹಾಗೂ ಮೂಡಿಗೆರೆಯ ಕಾಲೇಜು ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ನೈತಿಕ ಪೊಲೀಸ್‍ಗಿರಿ ಮಿತಿಮೀರುತ್ತಿದ್ದು, ಈ ಎಲ್ಲಾ ಘಟನೆಗಳ ಆರೋಪಿಗಳು ಸಂಘಪರಿವಾರ ಸಂಘಟನೆಗಳ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರಾಗಿದ್ದಾರೆ ಎಂದು ಆರೋಪಿಸಿದ ಅವರು, ಧರ್ಮಗಳ ನಡುವೆ ಅಣೆಕಟ್ಟುಗಳನ್ನು ನಿರ್ಮಿಸಿ ಕೋಮುದ್ರುವೀಕರಣದ ಮೂಲಕ ಸಂಘಪರಿವಾರದ ನೇತೃತ್ವದಲ್ಲಿ ಬಿಜೆಪಿ ಮತ ಭೇಟೆಗೆ ಮುಂದಾಗಿದ್ದು, ಇದರ ಬಗ್ಗೆ ಮತದಾರರು ಎಚ್ಚರಿಕೆಯಿಂದಿರಬೇಕಾಗಿದೆ. ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿ ಮತ್ತೆ ಅಧಿಕಾರಕ್ಕೇರಲು ಅಮಾಯಕರ ಹೆಣವನ್ನು ಮುಂದಿಟ್ಟು ಶವ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ಪ್ರತಿಭಟನೆಯಲ್ಲಿ ಸಿದ್ದಾಪುರ ಘಟಕದ ಅಧ್ಯಕ್ಷ ಶಾಹುಲ್, ಸಿದ್ದಾಪುರ ಗ್ರಾ.ಪಂ ಸದಸ್ಯ ಶೌಕತ್ ಅಲಿ, ನೆಲ್ಯಹುದಿಕೇರಿ ಗ್ರಾ.ಪಂ ಸದಸ್ಯ ಸಂಶೀರ್, ಕಾರ್ಯಕರ್ತರಾದ ಹನೀಫ್, ಬಶೀರ್, ಅಫ್ಸಲ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News