ಬಂಡೀಪುರ: ಹುಲಿ ಗಣತಿ ಕಾರ್ಯ ಅಂತ್ಯ

Update: 2018-01-13 16:52 GMT

ಗುಂಡ್ಲುಪೇಟೆ,ಜ.13: ಇಲ್ಲಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಹುಲಿ ಗಣತಿ ಶನಿವಾರ ಅಂತ್ಯಗೊಂಡಿತು.12 ವಲಯದ 112 ಗಸ್ತಿನಲ್ಲಿ ಸುಮಾರು 66 ಸ್ವಯಂಸೇವಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿ ಗಣತಿಯನ್ನು ನಡೆಸಿದರು. ಈ ಸಂದರ್ಭದಲ್ಲಿ ಸುಮಾರು 20ಕ್ಕೂ ಹೆಚ್ಚು ಹುಲಿಗಳು ಗಣತಿದಾರರ ಕಣ್ಣಿಗೆ ಕಂಡಿವೆ. ಬಂಡೀಪುರ, ಹೆಡಿಯಾಲ, ಮೂಲೆಹೊಳೆಯಲ್ಲಿ ತಲಾ ಎರಡು ಹುಲಿಗಳು, ಎನ್. ಬೇಗೂರಿನಲ್ಲಿ 6 ಹುಲಿಗಳು, ಕುಂದಕೆರೆ ಹಾಗೂ ಗುಂಡ್ರೆಯಲ್ಲಿ ತಲಾ 3 ಹುಲಿ, ಮದ್ದೂರು ಹಾಗೂ ಮೊಳೆಯೂರು ತಲಾ 1 ಹುಲಿಗಳು ದರ್ಶನ ಕೊಟ್ಟಿವೆ.

ಬೆಳಗ್ಗೆ 6ರಿಂದ 9 ಗಂಟೆಯವರೆಗೆ ನಡೆದ ಗಣತಿಯಲ್ಲಿ ಒಂದೊಂದು ತಂಡವು ಕಾಲ್ನಡಿಗೆಯಲ್ಲಿ ತಮ್ಮ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಗಣತಿ ನಡೆಸಿದವು. ಇನ್ನೂ ಮೂರು ದಿನ ಟ್ರಾನ್ಸಕ್ಷನ್ ಲೈನ್‍ನಲ್ಲಿ ಗಣತಿ ಮಾಡಿದರು. ಈ ಸಂದರ್ಭದಲ್ಲಿ ಹುಲಿಯ ಹೆಜ್ಜೆ ಗುರುತಿನ ಜಾಡು ಹಿಡಿದು ಅವುಗಳ ಆವಾಸ ಸ್ಥಾನದ ವ್ಯಾಪ್ತಿ ಪತ್ತೆ ಮಾಡಲಾಯಿತು. ಹೆಜ್ಜೆಯ ಉದ್ದ-ಅಗಲವನ್ನು ಅಳತೆ ಮಾಡಲಾಯಿತು.

ಹುಲಿ ಗಣತಿಯೊಂದಿಗೆ ಕಾಡಿನ ಇತರೆ ಪ್ರಾಣಿಗಳಾದ ಆನೆ, ಚಿರತೆ, ಕಾಡೆಮ್ಮೆ, ಜಿಂಕೆ ಮುಂತಾದ ಪ್ರಾಣಿಗಳು ಗಣತಿದಾರರಿಗೆ ದರ್ಶನ ಕೊಟ್ಟವು. ವಿವಿಧ ವಲಯದಲ್ಲಿ 5 ಚಿರತೆ, 43 ಸೀಳು ನಾಯಿಗಳು, 176 ಆನೆಗಳು, 38 ಕಾಡೆಮ್ಮೆಗಳನ್ನು ಗಣತಿಯಲ್ಲಿ ದಾಖಲಿಸಿಕೊಳ್ಳಲಾಗಿದೆ.

ಹುಲಿ ಗಣತಿ ವೇಳೆ ಸ್ವಯಂ ಸೇವಕರು ಬಹಳ ಪ್ರೀತಿ ಪೂರಕವಾಗಿ, ಬದ್ಧತೆಯಿಂದ ಕಾಡಿನ ನಿಯಮಕ್ಕೆ ಯಾವುದೇ ತೊಂದರೆ ನೀಡದೆ ಗಣತಿ ನಡೆಸಿದರು. ಅವರಿಗೆ ತುಂಬಾ ಅಬಾರಿಯಾಗಿದ್ದೇವೆ ಎಂದು ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಅಂಬಾಡಿ ಮಾಧವ್ ತಿಳಿಸಿದರು.

2014ರ ಹುಲಿ ಗಣತಿಯಲ್ಲಿ ಬಂಡೀಪುರದಲ್ಲಿ 139 ಹುಲಿಗಳು ಇರುವುದಾಗಿ ಅಂಕಿ ಅಂಶಗಳಲ್ಲಿ ದಾಖಲಾಗಿತ್ತು. ಪ್ರಸ್ತುತ ಪ್ರತಿನಿತ್ಯ ಸಫಾರಿಗೆ ಹೊರಟವರಿಗೆ ಹುಲಿಗಳು ಹೆಚ್ಚಾಗಿ ದರ್ಶನ ಕೊಡುತ್ತಿವೆ. ಅಲ್ಲದೆ ಗಣತಿದಾರರಿಗೂ ನೇರ ದರ್ಶನ ಕೊಟ್ಟಿವೆ. ಇದರಿಂದ ನಮಗೆ ವಿಶ್ವಾಸವಿದೆ. ಕಳೆದ ಗಣತಿಯಲ್ಲಿ ದಾಖಲಾಗಿದ್ದ ಅಂಕಿ-ಅಂಶಕ್ಕಿಂತ ಹೆಚ್ಚಾಗಿ ಈ ವರ್ಷದ ಗಣತಿಯಲ್ಲಿ ಹುಲಿಗಳು ಕಾಣ ಸಿಗುತ್ತವೆ. ಮತ್ತೆ ಮೊದಲ ಸ್ಥಾನ ನಮಗೆ ದೊರೆಯುತ್ತದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News