ಚಿಕ್ಕಮಗಳೂರು: ವಿಫಲ ಕೊಳವೆಬಾವಿ ಮುಚ್ಚಲು ಜಿಲ್ಲಾಧಿಕಾರಿ ಸೂಚನೆ

Update: 2018-01-13 17:12 GMT

ಚಿಕ್ಕಮಗಳೂರು, ಜ.13: ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ತೆರೆದ ಕೊಳವೆ ಬಾವಿಗಳಿಂದ ಸಂಭವಿಸಬಹುದಾದ ದುರಂತಗಳನ್ನು ತಪ್ಪಿಸುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ತೆರೆದ ಮತ್ತು ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಲಾಗಿದ್ದು, ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವುದೇ ತೆರೆದ ಅಥವಾ ವಿಫಲ ಕೊಳವೆ ಬಾವಿಗಳು ಇರದಂತೆ ಸರ್ವೋಚ್ಚ ನ್ಯಾಯಾಲಯದ ಆದೇಶ ಪಾಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದ್ದಾರೆ.

ಈ ಕುರಿತು ಪ್ರಕಟನೆ ನೀಡಿರುವ ಅವರು, ಸರಕಾರದ ವಿವಿಧ ಇಲಾಖೆಗಳು ಅರೆ ಸರಕಾರಿ-ಇನ್ನಿತರ ಸಂಸ್ಥೆಗಳಿಂದ ಮತ್ತು ರೈತರು ತಮ್ಮ ಕೃಷಿ ಜಮೀನುಗಳಲ್ಲಿ ಕೊರೆಸಿರುವ ಕೊಳವೆ ಬಾವಿಗಳು ವಿಫಲವಾಗಿದ್ದಲ್ಲಿ ಅವುಗಳಿಗೆ ಕ್ಯಾಪ್ ಹಾಕಿ, ಅದರ ಮೇಲೆ 2 ಅಡಿ ಮಣ್ಣು, ಮುಳ್ಳು ಹಾಕಿ ಮುಚ್ಚಬೇಕು. ಕೊಳವೆ ಬಾವಿಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚದಿದ್ದಲ್ಲಿ ಸಂಬಂಧಪಟ್ಟ ಜಮೀನು ಮಾಲಕರು ಹಾಗೂ ರಿಗ್ ಮಾಲಕರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ತೆರೆದ ಅಥವಾ ನಿರುಪಯುಕ್ತ ಕೊಳವೆ ಬಾವಿಗಳು ಕಂಡುಬಂದಲ್ಲಿ ಜಿಲಾಧಿಕಾರಿ ಕಚೇರಿಯ ಸಹಾಯವಾಣಿ 08262-238950ಗೆ ಕರೆ ಮಾಡಿ ತಿಳಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಕಡೂರು ತಾಲೂಕು ಹೊರತುಪಡಿಸಿ ಇನ್ನು ಮುಂದೆ ಜಿಲ್ಲೆಯಲ್ಲಿ ಸರಕಾರಿ ಅಥವಾ ಖಾಸಗಿ ಉದ್ದೇಶಕ್ಕೆ ಕೊಳವೆ ಬಾವಿ ಕೊರೆಯಲು ಗ್ರಾಮಾಂತರ ಮಟ್ಟದಲ್ಲಿ ಆಯಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಅನುಮತಿ ಹಾಗೂ ನಗರ ಅಥವಾ ಪಟ್ಟಣ ಪ್ರದೇಶಗಳಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ನ ಸಂಬಂಧಪಟ್ಟ ವಾರ್ಡ್‌ನ ಕಿರಿಯ ಅಭಿಯಂತರರಿಂದ ಸರಕಾರದ ನಿಗದಿತ ನಮೂನೆ 1ಸಿ ರಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News