ಮುಸ್ಲಿಮ್ ಬಾಲಕಿಗೆ ಹಲ್ಲೆ ನಡೆಸಿ ಹಿಜಾಬ್ ಕತ್ತರಿಸಿದ ದುಷ್ಕರ್ಮಿ

Update: 2018-01-13 17:13 GMT

ಟೊರಾಂಟೊ,ಜ.13: ಕೆನಡಾದ ಟೊರಾಂಟೊ ನಗರದಲ್ಲಿ 11 ವರ್ಷದ ಮುಸ್ಲಿಂ ಬಾಲಕಿಯೊಬ್ಬಳು ಶಾಲೆಗೆ ತೆರಳುತ್ತಿದ್ದಾಗ, ಆಕೆಯ ಮೇಲೆ ಅಪರಿಚಿತನೊಬ್ಬ ಹಲ್ಲೆ ನಡೆಸಿ, ಆಕೆಯ ಹಿಜಾಬ್‌ನ್ನು ಎರಡು ಸಲ ಕತ್ತರಿಸಿ ಹಾಕಿದ ಘಟನೆ ಶುಕ್ರವಾರ ವರದಿಯಾಗಿದೆ. ಪೊಲೀಸರು ಇದೊಂದು ಜನಾಂಗೀಯ ದ್ವೇಷದ ಕೃತ್ಯವೆಂದು ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾಲಕಿಯ ಮೇಲೆ ಹಲ್ಲೆ ನಡೆಸಿದ ಶಂಕಿತ ದುಷ್ಕರ್ಮಿಯು ಏಶ್ಯ ಮೂಲದವನಾಗಿದ್ದು, 20ರ ಹರೆಯದವನೆಂದು ಪೊಲೀಸರು ತಿಳಿಸಿದ್ದಾರೆ.

 ಈ ಮಧ್ಯೆ ಕೆನಡ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಮುಸ್ಲಿಮ್ ಬಾಲಕಿಯ ಮೇಲೆ ನಡೆದ ಹಲ್ಲೆಯ ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ. ‘‘ದಾಳಿಗೊಳಗಾದ ಬಾಲಕಿಗಾಗಿ ಹಾಗೂ ಆಕೆಯ ಧರ್ಮಕ್ಕಾಗಿ ನನ್ನ ಹೃದಯ ಮಿಡಿಯುತ್ತಿದೆ’’ ಎಂದವರು ಹೇಳಿದ್ದಾರೆ. ನಿಜವಾದ ಕೆನಡದಲ್ಲಿ ಇಂತಹ ಕೃತ್ಯಗಳಿಗೆ ಅವಕಾಶವಿಲ್ಲವೆಂದು ಆಕೆಗೆ ಹಾಗೂ ಆಕೆಯ ಕುಟುಂಬಕ್ಕೆ ತಾನು ಸ್ಪಷ್ಟಪಡಿಸಬಯಸುತ್ತೇನೆ ಎಂದವರು ಹೇಳಿದ್ದಾರೆ.

  ಒಂಟಾರಿಯೊ ರಾಜ್ಯದ ಮುಖ್ಯಮಂತ್ರಿ ಕ್ಯಾಥ್ಲಿನ್ ವೈನ್ ಕೂಡಾ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ‘‘ಇದೊಂದು ದ್ವೇಷಯುತವಾದ ಹೇಡಿತನದ ಕೃತ್ಯವಾಗಿದ್ದು, ಈ ಪ್ರಾಂತದಲ್ಲಿ ಇದಕ್ಕೆ ಜಾಗವಿಲ್ಲ’’ ಎಂದಾಕೆ ತಿಳಿಸಿದ್ದಾರೆ. ಹಿಜಾಬ್ ಧರಿಸಿದ್ದಾಳೆಂಬ ಕಾರಣಕ್ಕೆ ಹಲ್ಲೆಗೊಳಗಾದ ಈ ಬಾಲಕಿಗೆ ನಾವು ದೃಢವಾದ ಬೆಂಬಲವನ್ನು ಸಾರುತ್ತೇವೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News