36 ತಾಸುಗಳೊಳಗೆ ಪಾತಕಿಯ ಬಂಧಿಸಲು ಪಾಕ್ ಕೋರ್ಟ್ ಆದೇಶ

Update: 2018-01-13 17:20 GMT

ಲಾಹೋರ್, ಜ.13: ಪಾಕಿಸ್ತಾನವನ್ನೇ ತಲ್ಲಣಗೊಳಿಸಿದ 8 ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಹಿಂದಿರುವ ಪಾತಕಿಗಳನ್ನು 36 ತಾಸುಗಳೊಳಗೆ ಬಂಧಿಸುವಂತೆ ಪಾಕಿಸ್ತಾನದ ಪಂಜಾಬ್ ಪ್ರಾಂತದ ಪೊಲೀಸ್ ವರಿಷ್ಠರಿಗೆ, ಲಾಹೋರ್ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ನ್ಯಾಯವಾದಿಯೊಬ್ಬರು ಸಲ್ಲಿಸಿದ ಮನವಿಯನ್ನು ಆಲಿಸಿದ ಲಾಹೋರ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು, ಪಂಜಾಬ್ ಪ್ರಾಂತದ ಕನ್ಸೂರ್ ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿದ್ದರೂ ಅಪರಾಧಿಗಳನ್ನು ಬಂಧಿಸಲು ಪೊಲೀಸರು ವಿಫಲರಾಗುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.

ಕಸೂರ್ ನಗರದಲ್ಲಿ ನಡೆದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈ ತನಕ 20 ಮಂದಿ ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಅವರ ರಕ್ತದ ಮಾದರಿಗಳನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆಯೆಂದು ಹಿರಿಯ ಪೊಲೀಸ್ ಅಧಿಕಾರಿ ಝುಲ್ಫಿಕರ್ ಹಮೀದ್ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

 ಬಾಲಕಿಯ ಕೊಲೆಯ ಹಿಂದಿರುವ ಪಾತಕಿಗಳೇ ಕಸೂರ್ ಜಿಲ್ಲೆಯಲ್ಲಿ ವರದಿಯಾದ ಇಂತಹ ಇತರ ಪ್ರಕರಣಗಳಲ್ಲಿಯೂ ಶಾಮೀಲಾಗಿದ್ದಾರೆಯೇ ಎಂಬುದು ಅಪರಾಧ ವಿಧಿವಿಧಾನ ಪರೀಕ್ಷೆಯಿಂದ ತಿಳಿದುಬರಲಿದೆಯೆಂದು ಹಮೀದ್ ಹೇಳಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರಿಗೆ ಮಹತ್ವದ ಸುಳಿವು ದೊರೆತಿದ್ದು, ಸದ್ಯದಲ್ಲೇ ಪಾತಕಿಗಳನ್ನು ಬಂಧಿಸಲಾಗುವುದೆಂದು ಅವರು ಹೇಳಿದ್ದಾರೆ.

 ಏಳು ವರ್ಷದ ಬಾಲಕಿಯ ಶವವು ಕಸೂರ್ ನಗರದ ತ್ಯಾಜ್ಯಗುಂಡಿಯೊಂದರಲ್ಲಿ ಪತ್ತೆಯಾದ ಬಳಿಕ ಕರಾಚಿ ಸೇರಿದಂತೆ ಪಾಕಿಸ್ತಾನಾದ್ಯಂತ ಪ್ರತಿಭಟನೆ ಭುಗಿಲೆದ್ದಿತ್ತು. ಕೆಲವೆಡೆ ಮುಷ್ಕರ ಹಿಂಸಾರೂಪಕ್ಕೆ ತಿರುಗಿತ್ತು. ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ಬಾಲಕಿಯ ತಂದೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಇಂದು ಪರಿಸ್ಥಿತಿ ಸಹಜತೆಯೆಡೆಗೆ ಮರಳಿತ್ತು.

ಬಾಲಕಿಗೆ ಚಿತ್ರಹಿಂಸೆ ನೀಡಿ ಅತ್ಯಾಚಾರಗೈದ ಬಳಿಕ ಆಕೆಯನ್ನು ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News