ಕನಕಪುರ: ದುಡಿದ ಹಣದಲ್ಲಿ ಸ್ವಲ್ಪವಾದರೂ ಸಮಾಜದ ಅಭಿವೃದ್ಧಿಗೆ ನೀಡಬೇಕು; ಸುಧಾನಾರಾಯಣಮೂರ್ತಿ

Update: 2018-01-13 18:49 GMT

ಕನಕಪುರ, ಜ.13: ನಾವು ದುಡಿದ ಹಣದಲ್ಲಿ ಸ್ವಲ್ಪವಾದರೂ ಸಮಾಜದ ಅಭಿವೃದ್ಧ್ದಿಗೆ ನೀಡಿದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಇನ್ಪೋಸಿಸ್ ಸಂಸ್ಥೆ ಮುಖ್ಯಸ್ಥೆ ಸುಧಾನಾರಾಯಣಮೂರ್ತಿ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕನಕೋತ್ಸವ 2018 3ನೇ ದಿನದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಎನ್ನುವುದು ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವುದಲ್ಲ, ಬದಲಾಗಿ ಜೀವನದ ಪರೀಕ್ಷೆಯಲ್ಲಿ ಗೆಲ್ಲುವುದನ್ನು ಕೂಡಾ ಕಲಿಯಬೇಕು. ಶಿಕ್ಷಣ ಕೇವಲ ಜ್ಞಾನವಲ್ಲ, ಸರಿ ತಪ್ಪುಗಳ ವಿಶ್ಲೇಷಣೆಯಾಗಿರಬೇಕು ಎಂದು ಅಭಿಪ್ರಾಯಿಸಿದರು.

ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳನ್ನು ಸಮಾಜಕ್ಕೆ ಆದರ್ಶ ವ್ಯಕ್ತಿಗಳನ್ನಾಗಿ ಮಾಡಲು ಶಿಕ್ಷಕರು ಮತ್ತು ಪೋಷಕರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಇಂತಹ ಮಹನೀಯರಿಗೆ ನಾವೆಲ್ಲರು ಗೌರವನ್ನು ನೀಡಬೇಕು. ಕೃಷಿಕ, ಸೈನಿಕ, ಕಾರ್ಮಿಕ, ಶಿಕ್ಷಕ ಸಮಾಜದ ಆಧಾರ ಸ್ತಂಭ, ಇದರಲ್ಲಿ ಯಾವುದಾದರೂ ಒಂದು ಏರುಪೇರೆ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದರು. ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಕನಕಪುರ ತಾಲೂಕು ನಂಜುಂಡಪ್ಪವರದಿಯಂತೆ ತೀವ್ರ ಹಿಂದುಳಿದ ತಾಲೂಕು ಎನಿಸಿಕೊಂಡಿತ್ತು. ಆ ಹಣೆ ಪಟ್ಟಿಯಿಂದ ಕಿತ್ತು ಹಾಕಲು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿಸಲಾಗಿದೆ. ತಾಲೂಕಿನಲ್ಲಿ ಶುದ್ಧ ನೀರನ ಘಟಕಗಳನ್ನು ತೆರೆದು ಜನತೆಗೆ ಗುಣಮಟ್ಟದ ನೀರನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುಮಾರು 3 ಸಾವಿರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿಧಾನ ಪರಿಷತ್ ಸದಸ್ಯ ಎಸ್.ರವಿ, ರಾಜ್ಯ ಕೃಷಿ ಅಭಿವೃದ್ಧ್ದಿ ಮಂಡಳಿಯ ಅಧ್ಯಕ್ಷ ಜಯರಾಮೇಗೌಡ, ತಾಪಂ ಅಧ್ಯಕ್ಷ ರಾಜಶೇಖರ್, ನಗರಸಭೆ ಅಧ್ಯಕ್ಷ ಕೆ.ಎನ್.ದಿಲೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್, ಟ್ರಸ್ಟಿಗಳಾದ ವೆಂಕಟಪ್ಪ, ಕೆ.ಶ್ರೀನಿವಾಸ್, ಶಶಿಕುಮಾರ್, ನಗರಸಭೆ ಸದಸ್ಯ ಆರ್.ಕೃಷ್ಣಮೂರ್ತಿ, ಡಿಡಿಪಿಐ ಗಂಗೇಮಾರೇಗೌಡ, ಜಿಪಂ ಸದಸ್ಯ ನಾಗರಾಜು, ಶಂಕರ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್.ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News