ಮಹಿಳೆಯರ ಪಾಲಿಗೆ ಭಯಾನಕ ಹರ್ಯಾಣ!

Update: 2018-01-16 03:59 GMT

ಚಂಡೀಗಢ, ಜ.16: ಹತ್ತು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹನ್ನೊಂದು ವರ್ಷದ ಬಾಲಕಿಯ ಮೇಲೆ ಪೈಶಾಚಿಕ ರೀತಿಯಲ್ಲಿ ಅತ್ಯಾಚಾರ ಎಸಗಿ ಹಲ್ಲೆ ನಡೆಸಿದ ಮತ್ತೆರಡು ಪ್ರಕರಣಗಳು ಹರ್ಯಾಣದಲ್ಲಿ ಬೆಳಕಿಗೆ ಬಂದಿವೆ. ಇದರಿಂದ ಈ ಉತ್ತರ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

ಮಹಿಳೆಯರು ಮತ್ತು ಬಾಲಕಿಯರ ಮೇಲೆ ಲೈಂಗಿಕ ಹಲ್ಲೆಗಳು ಅದರಲ್ಲೂ ಮುಖ್ಯವಾಗಿ ಕೆಲ ಪ್ರಕರಣಗಳಲ್ಲಿ ಗುಪ್ತಾಂಗಗಳ ಮೇಲೆ ಪೈಶಾಚಿಕವಾಗಿ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ. 2016ರ ಡಿಸೆಂಬರ್‌ನಲ್ಲಿ ದಿಲ್ಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದಂಥ ಪ್ರಕರಣಗಳು ಮತ್ತೆ ಕಾಣಿಸಿಕೊಳ್ಳುತ್ತಿರುವುದು ನಾಗರಿಕ ವಲಯದ ಆಕ್ರೋಶಕ್ಕೆ ಕಾರಣವಾಗಿದೆ. ಹರ್ಯಾಣದಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಇಂಥ ನಾಲ್ಕು ಭೀಕರ ಪ್ರಕರಣಗಳು ಬೆಳಕಿಗೆ ಬಂದಿವೆ.

ರಾಜ್ಯದ ಪಿಂಜೋರೆ ಎಂಬಲ್ಲಿ ಹತ್ತು ವರ್ಷದ ಬಾಲಕಿಯ ಮೇಲೆ ಲೈಂಗಿಕವಾಗಿ ಹಲ್ಲೆ ನಡೆಸಿದ್ದಲ್ಲದೇ, ಆಕೆಯ ಗುಪ್ತಾಂಗಕ್ಕೆ ಕೋಲು ತುರುಕಿ ಗಾಯಗೊಳಿಸಿದ ಸಂಬಂಧ 48 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ನೆರೆಯವನಾದ ಆತನನ್ನು ರವಿವಾರ ಬಂಧಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ 11 ವರ್ಷದ ಬಾಲಕಿಯ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಪಾಣಿಪತ್‌ನಲ್ಲಿ ಪತ್ತೆಯಾಗಿದೆ. ಈ ಪ್ರಕರಣದಲ್ಲೂ ನೆರೆಮನೆಯವನನ್ನು ಬಂಧಿಸಲಾಗಿದ್ದು, ಆತ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಹೇಳಿದ್ದಾರೆ.

ಫರೀದಾಬಾದ್‌ನಲ್ಲಿ ಶನಿವಾರ ರಾತ್ರಿ 23 ವರ್ಷದ ಮಹಿಳೆಯನ್ನು ಅಪಹರಿಸಿ, ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿದೆ. ಅತ್ಯಾಚಾರ ಎಸಗಿದ ಬಳಿಕ ಮಥುರಾ ರಸ್ತೆಯಲ್ಲಿ ಮಹಿಳೆಯನ್ನು ಕೈಕಾಲು ಕಟ್ಟಿ ಎಸೆಯಲಾಗಿದೆ. ಮೂವರು ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆ ಎಂದು ಮಹಿಳೆ ಹೇಳಿಕೆ ನೀಡಿದ್ದು, ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಕುರುಕ್ಷೇತ್ರದ ಮತ್ತೊಂದು ಘಟನೆಯಲ್ಲಿ 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆ ಮಾಡಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿತ್ತು. ಸಾಮೂಹಿಕ ಅತ್ಯಾಚಾರ ನಡೆಸಿದ ಬಳಿಕ ಬಾಲಕಿಯ ಗುಪ್ತಾಂಗಗಳಿಗೆ ಹರಿತವಾದ ಆಯುಧಗಳನ್ನು ತಳ್ಳಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಇದು ನಿರ್ಭಯಾ ಪ್ರಕರಣದಷ್ಟೇ ಭೀಕರ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News