​ಫೆ. 16 ರಂದು ಮಂಗಳೂರು ಬೃಹತ್ ಉದ್ಯೋಗ ಮೇಳ

Update: 2018-01-16 14:49 GMT

ಮಂಗಳೂರು, ಜ.16: ಜಿಲ್ಲಾಡಳಿತದ ವತಿಯಿಂದ ಮಂಗಳೂರು ಬೃಹತ್ ಉದ್ಯೋಗ ಮೇಳವು ಫೆ. 16 ರಂದು ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಅವರು ಮಂಗಳವಾರ ಜಿಲ್ಲಾಧಿಕಾರಿಯವರ ಕಚೇರಿಯಲ್ಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ವ್ಯವಸ್ಥಿತವಾಗಿ ಉದ್ಯೋಗ ಮೇಳದ ಆಯೋಜನೆಯನ್ನು ನಡೆಸಲು ಸೂಚಿಸಿದ್ದು, ಅದರ ಪ್ರಕಾರ ಉತ್ತಮವಾದ ರೀತಿಯಲ್ಲಿ ಉದ್ಯೋಗ ಮೇಳವನ್ನು ನಡೆಸಿ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಪಡೆಯಲು ಸಹಕರಿಸಬೇಕು ಎಂದು ಹೇಳಿದ್ದಾರೆ.

ಉದ್ಯೋಗ ಮೇಳದ ವೆಬ್‌ಸೈಟ್‌ನ್ನು ರಚಿಸಿ ಅದರ ಮೂಲಕ ಉದ್ಯೋಗ ಮೇಳದ ಮಾಹಿತಿ ಹಾಗೂ ನೋಂದಣಿ ಮತ್ತು ಮೇಳದಲ್ಲಿ ಭಾಗವಹಿಸುವ ಕಂಪೆನಿಗಳ ಮಾಹಿತಿಯನ್ನು ನೀಡಲಾಗುವುದು ಎಂದು ಅವರು ಹೇಳಿದರು. ಅಲ್ಲದೇ ಈ ಸಂಬಂಧ ಮಲ್ಲಿಕಟ್ಟೆಯಲ್ಲಿರುವ ಇನ್‌ಕ್ಯುಬೇಶನ್ ಸೆಂಟರ್‌ನಲ್ಲಿ ಕಂಟ್ರೋಲ್ ರೂಂ ರಚಿಸಿ ಅದರ ಮೂಲಕ ಮಾಹಿತಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಉದ್ಯೋಗ ಮೇಳವು ನಿರುದ್ಯೋಗಿಗಳಿಗೆ ಉತ್ತಮವಾದ ಜೀವನ ರೂಪಿಸಲು ಉದ್ಯೋಗವನ್ನು ಸೃಷ್ಟಿಸಿ ಸೂಕ್ತ ಅಭ್ಯರ್ಥಿಗಳಿಗೆ ಉದ್ಯೋಗ ದೊರೆಯುವಂತೆ ಮಾಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಭಾಗವಹಿಸುವ ಕಂಪೆನಿಗಳ ಜೊತೆಗೆ ಮುಂಚಿತವಾಗಿ ಮಾತಾನಾಡಿ ಸೂಕ್ತವಾದ ಕಂಪೆನಿಗಳನ್ನು ಮಾತ್ರ ಆರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮೇಳದ ಅಚ್ಚುಕಟ್ಟಾದ ಆಯೋಜನೆಗಾಗಿ ವಿವಿಧ ಸಮಿತಿಗಳನ್ನು ರಚಿಸಿ ಸ್ಥಳ ವೀಕ್ಷಣೆ, ಊಟೋಪಚಾರದ ವ್ಯವಸ್ಥೆ ಹಾಗೂ ಕಾರ್ಯಕ್ರಮ ನಿರ್ವಹಣೆಗಾಗಿ ವಿಶೇಷವಾದ ತಂಡವನ್ನು ರಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪಾರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮುಹಮದ್ ನಝೀರ್, ಗೋಕುಲ್‌ದಾಸ್ ನಾಯ್ಕ, ವಿವೇಕ್ ಆಳ್ವ, ಹರೀಶ್ ಶೆಟ್ಟಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News