ತೊಗಾಡಿಯಾ ನಾಪತ್ತೆ ಒಂದು ‘ಪ್ರಹಸನ’ ಎಂದ ಗುಜರಾತ್ ಪೊಲೀಸರು!

Update: 2018-01-17 06:41 GMT

ಅಹ್ಮದಾಬಾದ್, ಜ.17: ವಿಶ್ವ ಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ನಾಪತ್ತೆ ಪ್ರಕರಣ ಒಂದು 'ಪ್ರಹಸನ' ಎಂದು ಅಹ್ಮದಾಬಾದ್ ಪೊಲೀಸರು ಹೇಳಿದ್ದಾರೆ. 

ಶಂಕಾಸ್ಪದವಾಗಿ ನಾಪತ್ತೆಯಾಗಿ ನಂತರ ಅಹ್ಮದಾಬಾದ್ ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ತೊಗಾಡಿಯಾ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ತನ್ನನ್ನು ಪೊಲೀಸ್ ಎನ್‌ಕೌಂಟರ್ ನಲ್ಲಿ ಮುಗಿಸುವ ಸಂಚು ಇದೆ ಎಂದು ಆರೋಪಿಸಿದ್ದರು. ತೊಗಾಡಿಯಾ ಅವರ ಈ ಆರೋಪದ ಕುರಿತಂತೆ ಪ್ರತಿಕ್ರಿಯಿಸಿರುವ ಅಹ್ಮದಾಬಾದ್ ಪೊಲೀಸರು 'ತೊಗಾಡಿಯಾ ನಾಟಕವಾಡಿದ್ದಾರೆ' ಎಂದು  ಹೇಳಿದ್ದಾರೆ. ತಮ್ಮ ಚಾಲಕ ಹಾಗೂ ಅವರು ದಾಖಲಾಗಿರುವ ಖಾಸಗಿ ಆಸ್ಪತ್ರೆಯ ವೈದ್ಯರ ಜತೆ ಸೇರಿ ಅವರು ಈ ನಾಟಕವಾಡಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ.

ತೊಗಾಡಿಯಾ ಹೇಳಿಕೆ ಸುಳ್ಳು ಎಂದು ಕ್ರೈಂ ಬ್ರಾಂಚ್ ನ ಜಂಟಿ ಪೊಲೀಸ್ ಆಯುಕ್ತ ಜೆ.ಕೆ. ಭಟ್ಟ್ ಹೇಳಿದ್ದಾರೆ.
‘‘ಸೋಮವಾರ ಪೂರ್ವಾಹ್ನ 11 ಗಂಟೆಗೆ ತನ್ನ ಕಚೇರಿಯಿಂದ (ವಿಹಿಂಪ ಮುಖ್ಯ ಕಾರ್ಯಾಲಯ) ತೆರಳಿದ ತೊಗಾಡಿಯಾ ಸಹವರ್ತಿ ಘನಶ್ಯಾಮ್ ಚರಣದಾಸ್ ಎಂಬವರ ಮನೆಯಲ್ಲಿ ತಂಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಕೊಟರಪುರದಲ್ಲಿ ಅವರ ಚಾಲಕ ನಿಕುಲ್ ಫೋನ್ ಉಪಯೋಗಿಸಿ 108 ಆ್ಯಂಬುಲೆನ್ಸ್ ಗೆ ಕರೆ ಮಾಡಿ ತೊಗಾಡಿಯಾ ಪ್ರಜ್ಞಾಹೀನರಾಗಿದ್ದಾರೆ ಎಂದು ತಿಳಿಸಲಾಗಿತ್ತು. ವೈದ್ಯರಿಗೆ ಈ ಘಟನೆಗಿಂತ ಮುಂಚಿತವಾಗಿಯೇ ತಿಳಿಸಲಾಗಿತ್ತು ಹಾಗೂ ವಿಐಪಿ ರೋಗಿಯೊಬ್ಬರಿಗಾಗಿ ಸಿದ್ಧರಾಗಿರುವಂತೆ ಅಲ್ಲಿನ ಸಿಬ್ಬಂದಿಗೂ ಮಾಹಿತಿ ನೀಡಲಾಗಿತ್ತು’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಗಾಲಿಕುರ್ಚಿಯಲ್ಲಿ ಕುಳಿತು ಪತ್ರಿಕಾಗೋಷ್ಠಿ ನಡೆಸಿದ ತೊಗಾಡಿಯಾ ಎರಡು ಬಾರಿ ಅತ್ತೇ ಬಿಟ್ಟರಲ್ಲದೆ ತಮ್ಮನ್ನು ಎನ್‌ಕೌಂಟರ್ ನಲ್ಲಿ ಮುಗಿಸುವ ಸಂಚಿನ ಬಗ್ಗೆ ಹೇಳಿಕೊಂಡರು. ಕ್ರೈಂ ಬ್ರಾಂಚ್ ಯಾವುದೇ ರಾಜಕೀಯ ಒತ್ತಡವಿಲ್ಲದೆ ಪ್ರಕರಣದ ತನಿಖೆ ನಡೆಸಬೇಕೆಂದೂ ಅವರು ಒತ್ತಾಯಿಸಿದ್ದಾರೆ

ಮಂಗಳವಾರ ಪಟಿದಾರ್ ನಾಯಕರಾದ ಹಾರ್ದಿಕ್ ಪಟೇಲ್ ಹಾಗೂ ದಿನೇಶ್ ಭಂಬನಿಯಾ, ಇಶ್ರತ್ ಜಹಾನ್ ಪ್ರಕರಣದಲ್ಲಿ ಜಾಮೀನಿನ ಮೇಲಿರುವ ನಿವೃತ್ತ ಡಿಜಿ ವಂಝಾರ ಅವರು ತೊಗಾಡಿಯಾ ಅವರನ್ನು ಭೇಟಿಯಾಗಿದ್ದಾರೆ.

ಒಂದೊಮ್ಮೆ ನರೇಂದ್ರ ಮೋದಿಯ ಜತೆ ಆತ್ಮೀಯರಾಗಿದ್ದ ತೊಗಾಡಿಯಾ ಮೋದಿ ಪ್ರಧಾನಿಯಾದ ನಂತರ ಅವರನ್ನು ಹಲವು ಬಾರಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News