ಶಾಸಕ ಸಿ.ಟಿ ರವಿ ಸುಳ್ಳು ಹೇಳಿಕೆಗೆ ಕ್ಷಮೆ ಕೇಳಲಿ: ಎಂ.ಸಿ ಶಿವಾನಂದ ಸ್ವಾಮಿ

Update: 2018-01-17 11:15 GMT

ಚಿಕ್ಕಮಗಳೂರು, ಜ.17: ಜಿಲ್ಲಾ ಕೇಂದ್ರದಲ್ಲಿ ಆರಂಭವಾಗಬೇಕಾಗಿರುವ ಎಂಜಿನೀಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳ ಆರಂಭಕ್ಕೆ ಕಾಂಗ್ರೆಸ್ ಅಡ್ಡಿಯಾಗಿದೆ ಎಂಬ ಶಾಸಕ ಸಿ.ಟಿ.ರವಿಯ ಹೇಳಿಕೆಯು ಜವಬ್ದಾರಿ ಮರೆತ ಜನಪ್ರತಿನಿಧಿಯ ಸುಳ್ಳು ಹಾಗೂ ಜನರನ್ನು ದಾರಿ ತಪ್ಪಿಸುವ ಹುನ್ನಾರವಾಗಿದೆ ಎಂದು ಪಕ್ಷದ ವಕ್ತಾರ ಎಂ.ಸಿ ಶಿವಾನಂದ ಸ್ವಾಮಿ ದೂರಿದ್ದಾರೆ.

ಅವರು ಬುಧವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಳೆದ 14 ವರ್ಷಗಳಿಂದ ಶಾಸಕರಾಗಿರುವ, ಮಂತ್ರಿಯೂ ಆಗಿದ್ದ ಸಿ.ಟಿ.ರವಿ ಅವರ ಬಾಯಿಂದ ಇಂತಹ ಸುಳ್ಳುಗಳನ್ನು ಪಕ್ಷ ಹಾಗೂ ಜಿಲ್ಲೆಯ ಜನ ನಿರೀಕ್ಷಿಸುವುದಿಲ್ಲ. ಏಕೆಂದರೆ ಎಂಜಿನಿಯರಿಂಗ್ ಕಾಲೇಜ್ ಸಂಬಂಧ ಸರ್ಕಾರವು ಚಿಕ್ಕಮಗಳೂರು ನಗರಕ್ಕೆ ಹೊಂದಿಕೊಂಡಿರುವ ಇಂದಾವರ ಸ.ನಂ.36 ರಲ್ಲಿ 15.02 ಎಕರೆ 37 ರಲ್ಲಿ 16.10 ಎಕರೆ ಪ್ರದೇಶವನ್ನು ಕಾಲೇಜು ನಿರ್ಮಾಣಕ್ಕೆ ಆದೇಶ ಸಂಖ್ಯೆ ಎಂ4:ಎಲ್‍ಎನ್‍ಡಿ:ಸಿಆರ್ 186:2012-13 ದಿನಾಂಕ:10.07.2014 ರಂತೆ ಜಾಗವನ್ನು ನೀಡಿದೆ ಎಂದು ತಿಳಿಸಿದ್ದಾರೆ.

ಸರ್ಕಾರದ ಆದೇಶ ಸಂಖ್ಯೆ ಇಡಿ 59 ಹೆಚ್‍ಟಿಪಿ 2016(ಭಾ) ಬೆಂಗಳೂರು 2016 ಅ.4ರಲ್ಲಿ ರಾಜ್ಯ ಸರ್ಕಾರವು ರಾಜ್ಯದಲ್ಲಿ ಆರಂಭಗೊಳ್ಳಬೇಕಾಗಿರುವ ಚಿಕ್ಕಮಗಳೂರು ಸೇರಿದಂತೆ 3 ಇಂಜಿನೀಯರಿಂಗ್ ಕಾಲೇಜುಗಳಿಗೆ ನಬಾರ್ಡ್ ಯೋಜನೆಯಡಿ ಕಾಮಗಾರಿ ನಡೆಸಲು ಏಜನ್ಸಿಯನ್ನು ನಿಗದಿಗೊಳಿಸಿದೆ. ರೈಟ್ಸ್ ಸಂಸ್ಥೆಯು ಕಾಮಗಾರಿಯನ್ನು ಪಡೆದುಕೊಂಡಿದೆ. ಚಿಕ್ಕಮಗಳೂರು ಡಿಎಸಿಜಿ ಪಾಲಿಟೆಕ್ನಿಕ್‍ನ ಪ್ರಾಂಶುಪಾಲರನ್ನು ವಿಶೇಷ ಅಧಿಕಾರಿಯನ್ನಾಗಿ ಕೂಡ ನೇಮಿಸಿರುವುದು ಮತ್ತು ದಾಖಲೆಗಳ ಮಾಹಿತಿಗಳ ಸತ್ಯ ಶಾಸಕರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕಳೆದ ಬಜೇಟ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ನೀಡಿದ್ದಾರೆ. ಈಗಾಗಲೇ  ಆದಿಶಕ್ತಿ ನಗರದ ಸಮೀಪ ಕದ್ರಿಮಿದ್ರಿ ಗ್ರಾಮದಲ್ಲಿ 30 ಎಕರೆ ಭೂಮಿಯನ್ನು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ನೀಡಲಾಗಿದೆ. ಕಾಲೇಜು ಆರಂಭದ ಪ್ರಕ್ರಿಯೆ ಸಂಬಂಧ ಶಿವಮೊಗ್ಗದ ಮೆಘಾನ್ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಲೋಹಿತ್ ರವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ್ದಾರೆ ಅವರೂ ಸೇರಿದಂತೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಉನ್ನತ ತಂಡ ಎರಡು ಬಾರಿ ಚಿಕ್ಕಮಗಳೂರು ಜಿಲ್ಲಾ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೆಡಿಕಲ್ ಕಾಲೇಜು ಆರಂಭದ ಸಂಬಂಧ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. 

ಅಲ್ಲದೇ ಕೆಎಸ್‍ಎಸ್‍ಆರ್‍ಡಿಪಿ ಸಂಸ್ಥೆಯ ಇಂಜಿನೀಯರ್‍ಗಳು ಸ್ಥಳ ಪರಿಶೀಲನೆ ನಡೆಸಿದ್ದು, ಯೋಜನಾ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಈ ಸತ್ಯಗಳನ್ನು ಮರೆಮಾಚಿ ಶಾಸಕ ರವಿ ಕಾಂಗ್ರೆಸ್ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳ ಆರಂಭಕ್ಕೆ ತಡೆಹಾಕಿದ್ದಾರೆ ಎಂಬ ಸುಳ್ಳು ಹೇಳಿರುವುದು ಅಕ್ಷಮ್ಯ. ಕೂಡಲೇ ಅವರು ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಹಿರೇಮಗಳೂರಿಗೆ ನಗರೋತ್ಥಾನದ ಹೆಚ್ಚುವರಿ ಅನುಧಾನದಲ್ಲಿ ಅಂದಿನ ಎಂಎಲ್‍ಸಿ ಶ್ರೀಮತಿ ಗಾಯಿತ್ರಿ ಶಾಂತೇಗೌಡರ ಕೋರಿಕೆ ಮೇರೆಗೆ ಹಿರೇಮಗಳೂರು ಕಾಲೋನಿ ರಸ್ತೆ ಗೆ 20 ಲಕ್ಷ, ಶ್ರೀ ರಾಮ ದೇವಾಲಯ ಹತ್ತಿರದ ಹೊಂಡದ ರಸ್ತೆ ಡಾಂಬರೀಕರಣಕ್ಕೆ 4.99 ಲಕ್ಷದ ಕಾಮಗಾರಿಯಾಗಿದೆ ಎಂದಿರುವ ಅವರು, ಚಿಕ್ಕಮಗಳೂರು ನಗರದ ಒಳಚರಂಡಿ ಯೋಜನೆ ಕಳೆದ ಆರೇಳು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ. 57 ಕೋಟಿ ಯೋಜನೆ ಈಗ  82 ಕೋಟಿಗೆ ಮುಟ್ಟಿದರೂ ಇನ್ನೂ ಕೆಲಸ ಮುಗಿದಿಲ್ಲ ಎಂದಿದ್ದಾರೆ. 

ಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ನಗರಸಭೆ ಸದಸ್ಯ ಹೆಚ್.ಎಸ್.ಪುಟ್ಟಸ್ವಾಮಿ, ನಗರಸಭೆ ಸದಸ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ವಕ್ತಾರ ರೂಬೆನ್ ಮೊಸಸ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಹಿರೇಕೊಳಲೆ ಪ್ರಕಾಶ್ ಹಾಗೂ ಸಂದೇಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News