ಅಂಧರ ಕ್ರಿಕೆಟ್ ವಿಶ್ವಕಪ್ : ಫೈನಲ್‌ನಲ್ಲಿ ಭಾರತಕ್ಕೆ ಪಾಕಿಸ್ತಾನ ಎದುರಾಳಿ

Update: 2018-01-17 18:25 GMT

ಅಜ್ಮಾನ್(ಯುಎಇ), ಜ.17: ಬಾಂಗ್ಲಾದೇಶವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿರುವ ಭಾರತ ತಂಡ ಅಂಧರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದೆ.

 ಹಾಲಿ ಚಾಂಪಿಯನ್ ಭಾರತ ಜ.20 ರಂದು ಶಾರ್ಜಾದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ ತಂಡವನ್ನು ಎದುರಿಸಲಿದೆ. ಬುಧವಾರ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಗಣೇಶ್ ಬಾಯ್ ಮಧುಕರ್ ಶತಕದ(112 ರನ್, 69 ಎಸೆತ) ನೆರವಿನಿಂದ ಭಾರತ ಸುಲಭ ಜಯ ದಾಖಲಿಸಿತು. ದೀಪಕ್ ಮಲಿಕ್ 43 ಎಸೆತಗಳಲ್ಲಿ 53 ರನ್ ಗಳಿಸಿ ಗಾಯಗೊಂಡು ನಿವೃತ್ತಿಯಾದರು. ನರೇಶ್ 18 ಎಸೆತಗಳಲ್ಲಿ 40 ರನ್ ಗಳಿಸಿದರು. ಟಾಸ್ ಜಯಿಸಿದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಿದ್ದು 38.5 ಓವರ್‌ಗಳಲ್ಲಿ 256 ರನ್‌ಗೆ ಆಲೌಟಾಗಿತ್ತು. ಬಾಂಗ್ಲಾ 50 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಶತಕ ಸಿಡಿಸಿದ ಅಬ್ದುಲ್ ಮಲಿಕ್(108) ತಂಡ ಸವಾಲಿನ ಮೊತ್ತ ಗಳಿಸಲು ನೆರವಾದರು. ಭಾರತದ ಪರ ದುರ್ಗ ರಾವ್ 3 ಓವರ್‌ಗಳಲ್ಲಿ ಕೇವಲ 20 ರನ್ ನೀಡಿ 3 ವಿಕೆಟ್ ಉಡಾಯಿಸಿದರು. ದೀಪಕ್ ಮಲಿಕ್ ಹಾಗೂ ಪ್ರಕಾಶ್ ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News