ಕನ್ನಡದ ಹಿರಿಯ ನಟ, ನಿರ್ದೇಶಕ ಕಾಶೀನಾಥ್ ಇನ್ನಿಲ್ಲ

Update: 2018-01-18 14:27 GMT

ಬೆಂಗಳೂರು, ಜ.18: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ, ವಿಭಿನ್ನ ಶೈಲಿಯ ಚಿತ್ರವನ್ನು ತೆರೆ ಮೇಲೆ ತಂದು ಯಶಸ್ಸು ಗಳಿಸಿದ್ದ ಕಾಶೀನಾಥ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಜನಿಸಿದ್ದ ಕಾಶೀನಾಥ್ ಅನಾರೋಗ್ಯದ ಕಾರಣ ಕಳೆದ 2 ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದರು.

ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ಸಂಗೀತ ನಿರ್ದೇಶಕ ವಿ.ಮನೋಹರ್, ನಟ ನಿರ್ದೇಶಕ ಉಪೇಂದ್ರ ಸೇರಿದಂತೆ ಹಲವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು.

30ಕ್ಕೂ ಅಧಿಕ ವರ್ಷಗಳ ವೃತ್ತಿಜೀವನದಲ್ಲಿ ಒಟ್ಟು 40 ಚಿತ್ರಗಳಲ್ಲಿ ನಟಿಸಿದ್ದು, ಕಳೆದ ವರ್ಷ ಬಿಡುಗಡೆಯಾದ ನಂದಕಿಶೋರ್ ನಿರ್ದೇಶನದ 'ಚೌಕ' ಚಿತ್ರದಲ್ಲಿ ನಟಿಸಿದ್ದರು.

ಕಾಶೀನಾಥ್ ಅವರು ಅನುಭವ, ಅನಂತನ ಅವಾಂತರ, ಅವಳೇ ನನ್ನ ಹೆಂಡ್ತಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಕಾಶೀನಾಥ್ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಕಾಶಿನಾಥ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಿನಿಮಾರಂಗದ ಕಲಾವಿದರು, ಹಿತೈಷಿಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಶಂಕರ ಆಸ್ಪತ್ರೆಗೆ ಧಾವಿಸಿದರು. ಕೂಡಲೆ ಪೊಲೀಸರು, ಕುಟುಂಬವರ್ಗ ಹಾಗೂ ಅವರ ಹಿತೈಷಿಗಳು ಸಮಾಲೋಚಿಸಿ ನಗರದ ಎನ್.ಆರ್.ಕಾಲನಿಯ ಎಪಿಎಸ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು.

ಗಣ್ಯರ ಅಂತಿಮ ನಮನ: ಕಾಶಿನಾಥರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನಟರಾದ ಶಿವರಜ್‌ಕುಮಾರ್, ಉಪೇಂದ್ರ, ಸುದೀಪ್, ದರ್ಶನ್, ವಿ.ಮನೋಹರ್, ಸಂಗೀತ ನಿರ್ದೇಶಕ ಗುರುಕಿರಣ್, ಹಾಸ್ಯ ನಟ ಡಿಂಗ್ರಿ ನಾಗರಾಜ್, ಚಂದ್ರು ಸೇರಿದಂತೆ ಚಿತ್ರರಂಗದ ನೂರಾರು ಕಲಾವಿದರು ಅಂತಿಮ ದರ್ಶನ ಪಡೆದು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ನಗರದ ಚಾಮರಾಜಪೇಟೆಯಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಕಾಶಿನಾಥರ ಅಂತ್ಯಕ್ರಿಯೆ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಈ ವೇಳೆ ಚಿತ್ರಕಲಾವಿದರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿದ್ದ ಅಭಿಮಾನಿಗಳು ತನ್ನ ನೆಚ್ಚಿನ ನಟನ ಸಾವಿಗೆ ಕಂಬನಿ ಮಿಡಿದರು.

ಗುರುಗಳ ಜೊತೆ ಸಿನಿಮಾ ಮಾಡಬೇಕೆನ್ನುವ ಆಸೆ ಇತ್ತು. ಆದರೆ, ಕೈಗೂಡಲಿಲ್ಲ ಎಂಬ ಕೊರಗು ನನ್ನನ್ನು ಬಹುಕಾಲ ಕಾಡಲಿದೆ. ನನ್ನನ್ನು ಚಿತ್ರರಂಗಕ್ಕೆ ಕರೆತಂದವರೆ ಅವರು, ಅವರ ಗರಡಿಯಲ್ಲಿ ಬೆಳೆದ ಪ್ರತಿಯೊಬ್ಬರು ಇವತ್ತು ದೊಡ್ಡ ಹೆಸರು ಮಾಡಿದ್ದಾರೆ.
-ಉಪೇಂದ್ರ ನಟ

ಕನ್ನಡ ಸಿನಿಮಾ ರಂಗದ ಅಪ್ರತಿಮ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ ಎಂಬುದನ್ನು ನೆನೆಸಿಕೊಳ್ಳಲು ಸಾಧ್ಯವಿಲ್ಲ. ಅವರ ಅನುಭವದ ಮೂಲಕ ನಾವೆಲ್ಲರೂ ಸಾಕಷ್ಟು ಕಲಿತ್ತಿದ್ದೇವೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕುಟುಂಬ ವರ್ಗಕ್ಕೆ ಸಿಗಲಿ ಎಂದು ಹಾರೈಸುತ್ತೇನೆ.
-ಶಿವರಾಜ್‌ಕುಮಾರ್ ನಟ

ಕನ್ನಡ ಚಿತ್ರರಂಗಕ್ಕೆ ಹಲವು ಪ್ರತಿಭಾವಂತ ಕಲಾವಿದರನ್ನು ನೀಡಿದವರು ಕಾಶಿನಾಥ್. ಅವರ ನಿರ್ದೇಶನದ ಚಿತ್ರಗಳಲ್ಲಿ ನಟಿಸಬೇಕು ಎನ್ನುವುದು ಪ್ರತಿಯೊಬ್ಬರ ಆಸೆಯಾಗಿರುತ್ತಿತ್ತು. ಅವರ ಸಾವು ಕನ್ನಡ ಸಿನಿಮಾ ರಂಗಕ್ಕ ತುಂಬಲಾರದ ನಷ್ಟ.
-ರಮೇಶ್ ಅರವಿಂದ್ ನಟ

ಅಪರಿಚಿತ’ ಚಿತ್ರದ ಮೂಲಕ ಕಾಶೀನಾಥ್ ಪರಿಚಿತ 
ನಮ್ಮ ನಡುವಿನ ಸಾಧಾರಣ ವ್ಯಕ್ತಿಯೊಬ್ಬ ನಾಯಕನಾದರೆ ಹೇಗಿರಬಹುದು ಎಂಬುದನ್ನು ತಮ್ಮ ವಿಶಿಷ್ಟ ಮ್ಯಾನರಿಸಂ ಮೂಲಕ ತೋರಿಸಿಕೊಟದ್ದು ಕಾಶೀನಾಥ್. ಅವರ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿವೆ. ತನ್ನ ಜೊತೆ ಅನೇಕ ಕಲಾವಿದರನ್ನು ಬೆಳೆಸುವಲ್ಲಿ ಅವರ ಪಾತ್ರ ಬಹಳ ದೊಡ್ಡದು. ಕಾಶೀನಾಥ್ ಚಿತ್ರಗಳು ಭಾರತೀಯ ಚಿತ್ರರಂಗ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದವು. ನಿರ್ದೇಶಕನಾಗಿ, ನಟನಾಗಿ, ಲೇಖಕನಾಗಿ ಕಾಶೀನಾಥ್ ತಮ್ಮ ಅನನ್ಯ ಛಾಪನ್ನು ಕನ್ನಡ ಚಿತ್ರರಂಗ ಅದ್ಬುತ ಪ್ರತಿಭಾವಂತ ವ್ಯಕ್ತಿಯನ್ನು ಕಳೆದುಕೊಂಡಿದೆ. ಅವರ ಸ್ಥಾನ ತುಂಬಲು ಮತ್ತೊಂದು ಪ್ರತಿಭೆ ಸಿಗುವುದು ಕಷ್ಟ .

ಸಚಿವೆ ಉಮಾಶ್ರೀ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News