ಫೆಬ್ರವರಿಯಲ್ಲಿ ಫೆಲೆಸ್ತೀನ್ ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

Update: 2018-01-18 06:35 GMT

ಹೊಸದಿಲ್ಲಿ, ಜ.18: ಪ್ರಧಾನಿ ನರೇಂದ್ರ ಮೋದಿ ಫೆಲೆಸ್ತೀನಿನ ರಮಲ್ಲಾಹ್ ನಗರಕ್ಕೆ ಫೆಬ್ರವರಿ 10ರಂದು ಭೇಟಿ ನೀಡಲಿದ್ದು, ಫೆಲೆಸ್ತೀನ್ ಗೆ ಭೇಟಿ ನೀಡಲಿರುವ ಭಾರತದ ಪ್ರಥಮ ಪ್ರಧಾನಿಯಾಗಲಿದ್ದಾರೆ.

ಕಳೆದ ವರ್ಷ ಮೋದಿ ಇಸ್ರೇಲ್ ಗೆ ಭೇಟಿ ನೀಡಿದ್ದರು. ಇದೀಗ ಭಾರತ ಮತ್ತು ಫೆಲೆಸ್ತೀನ್ ನಡುವಿನ ಸಂಬಂಧಗಳನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಮೋದಿ ಆ ದೇಶಕ್ಕೆ ಭೇಟಿ ನೀಡಲಿದ್ದಾರೆಂದು ಹೇಳಲಾಗಿದೆ. ಮೋದಿ 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಫೆಲೆಸ್ತೀನ್ ಜತೆಗಿನ ಸಂಬಂಧದಲ್ಲಿ ಬದಲಾವಣೆಯಾಗಿದೆ ಎಂಬ ಅಭಿಪ್ರಾಯವನ್ನು ಅಲ್ಲಗಳೆಯುವ ನಿಟ್ಟಿನಲ್ಲಿ ಈ ಭೇಟಿ ಹಮ್ಮಿಕೊಳ್ಳಲಾಗಿದೆ ಎಂದೇ ಭಾವಿಸಲಾಗಿದೆ.  ಅಮೆರಿಕಾ ಇತ್ತೀಚೆಗೆ ಜೆರುಸಲೆಂ ನಗರವನ್ನು ಇಸ್ರೇಲ್ ರಾಜಧಾನಿಯನ್ನಾಗಿ ಮಾನ್ಯ  ಮಾಡಿದ್ದರ ವಿರುದ್ಧ ಮತ ಚಲಾಯಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಮೋದಿ ಭೇಟಿಯ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲವಾದರೂ ಅವರು ಜೋರ್ಡಾನ್ ದೇಶದ ಅಮ್ಮಾನ್ ನಗರದಿಂದ ಹೆಲಿಕಾಪ್ಟರ್ ಮೂಲಕ ರಮಲ್ಲಾಹ್ ನಗರಕ್ಕೆ ಪ್ರಯಾಣಿಸುವ ಸಾಧ್ಯತೆಯಿದೆ. ಜೋರ್ಡಾನ್ ಮೂಲಕ ಪ್ರಯಾಣಿಸುವುದರಿಂದ ಇಸ್ರೇಲ್ ಮೂಲಕ ಫೆಲೆಸ್ತೀನ್ ತಲುಪುವ ಅಗತ್ಯವಿಲ್ಲವಾಗುತ್ತದೆ. ಕಳೆದ ಬಾರಿ ಮೋದಿ ಇಸ್ರೇಲ್ ಗೆ ಭೇಟಿ ನೀಡಿದಾಗಲೂ ಫೆಲೆಸ್ತೀನ್ ಮೂಲಕ ಪ್ರಯಾಣಿಸಿರಲಿಲ್ಲ. ಕಳೆದ ವರ್ಷ ಮೋದಿ ಇಸ್ರೇಲ್ ಗೆ ಭೇಟಿ ನೀಡಿ ಫೆಲೆಸ್ತೀನ್ ಗೆ ಭೇಟಿ ನೀಡದೇ ಇರುವುದರಿಂದ ಭಾರತ 1947ರಿಂದ ಫೆಲೆಸ್ತೀನ್ ಬಗ್ಗೆ ತಳೆದಿದ್ದ ನಿಲುವಿನಿಂದ ದೂರ ಸರಿಯುತ್ತಿದೆಯೇನೋ ಎಂಬ ಆತಂಕಕ್ಕೂ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News