‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಬುಲೆಟ್ ಟ್ರೈನ್ ಅಡ್ಡಿ ?

Update: 2018-01-18 18:26 GMT

ಹೊಸದಿಲ್ಲಿ, ಜ.18: ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೆಯ ‘ಬುಲೆಟ್ ಟ್ರೈನ್’ ಯೋಜನೆಗೆ ಜಪಾನ್ ಸಹಕಾರ ನೀಡುವ ಒಪ್ಪಂದಕ್ಕೆ 2017ರ ಸೆಪ್ಟೆಂಬರ್‌ನಲ್ಲಿ ಜಪಾನ್ ಪ್ರಧಾನಿಯ ಭಾರತ ಭೇಟಿ ಸಂದರ್ಭ ಸಹಿ ಹಾಕಲಾಗಿದೆ.

ಈ ಯೋಜನೆಯ ಒಟ್ಟು ವೆಚ್ಚದಲ್ಲಿ ಸುಮಾರು ಶೇ.79ರಷ್ಟನ್ನು ಜಪಾನ್ ಭರಿಸಲಿದೆ ಎಂದು ಮೂಲಗಳು ತಿಳಿಸಿವೆ. ಈ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭ ‘ಮೇಕ್ ಇನ್ ಇಂಡಿಯಾ’ ಆಶಯಕ್ಕೆ ಉತ್ತೇಜನ ಹಾಗೂ ತಂತ್ರಜ್ಞಾನದ ವರ್ಗಾವಣೆ- ಈ ಎರಡು ಪ್ರಮುಖ ಷರತ್ತಿಗೆ ಒತ್ತು ನೀಡಲಾಗಿತ್ತು. ಆದರೆ ಈಗ ಜಪಾನೀಯರು ಕೆಲವೊಂದು ವಿಷಯಗಳಲ್ಲಿ ಭಿನ್ನರಾಗ ಎತ್ತುತ್ತಿದ್ದಾರೆ ಎಂದು ಭಾರತೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತದ ಕಾರ್ಯವೈಖರಿ ಹಾಗೂ ಜಪಾನ್‌ನ ಕಾರ್ಯವೈಖರಿಗೆ ವ್ಯತ್ಯಾಸವಿದೆ ಎಂದು ಜಪಾನ್ ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲದೆ ಭಾರತೀಯ ಸಂಸ್ಥೆಗಳ ಕಾರ್ಯಕ್ಷಮತೆ ಹಾಗೂ ನಿಗದಿತ ಅವಧಿಯಲ್ಲಿ ಕಾರ್ಯಮುಗಿಸುವ ಸಾಮರ್ಥ್ಯದ ಬಗ್ಗೆ ಜಪಾನ್ ಅಧಿಕಾರಿಗಳು ಸಂದೇಹ ವ್ಯಕ್ತಪಡಿಸಿದ್ದಾರೆ ಎಂದು ‘ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪ್ ಲಿ.(ಎನ್‌ಎಚ್‌ಎಸ್‌ಆರ್‌ಸಿಎಲ್) ಆಡಳಿತ ನಿರ್ದೇಶಕ ಅಚಲ್ ಖಾರೆ ಹೇಳಿದ್ದಾರೆ.

ಅಲ್ಲದೆ ವಿಶ್ವಬ್ಯಾಂಕ್ ಕೂಡಾ ಭಾರತದ ಸಂಸ್ಥೆಗಳ ಕಾರ್ಯಕ್ಷಮತೆಗೆ ಕಡಿಮೆ ಅಂಕ ನೀಡಿದ್ದು 190 ದೇಶಗಳ ಪಟ್ಟಿಯಲ್ಲಿ ಭಾರತ 100ನೇ ಸ್ಥಾನದಲ್ಲಿದೆ. ಭಾರತೀಯ ಸಂಸ್ಥೆಗಳಿಗೆ ಹೈಸ್ಪೀಡ್ ರೈಲು ತಂತ್ರಜ್ಞಾನದ ಬಗ್ಗೆ ಯಾವುದೇ ಅನುಭವ ಇಲ್ಲದಿರುವುದು ಸಮಸ್ಯೆಗೆ ಕಾರಣ ಎಂದು ಜಪಾನ್‌ನ ಸಾರಿಗೆ ಸಚಿವಾಲಯದ ರೈಲ್ವೇ ವಿಭಾಗದ ಅಂತರಾಷ್ಟ್ರೀಯ ಇಂಜಿನಿಯಿರಿಂಗ್ ವ್ಯವಹಾರಗಳ ನಿರ್ದೇಶಕ ಟೊಮೊಯುಕಿ ನಕಾನೊ ತಿಳಿಸಿದ್ದಾರೆ. ಆದರೂ ಉಭಯ ದೇಶಗಳ ಸಹಕಾರದಲ್ಲಿ ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಪೂರಕವಾಗಿ ಈ ಯೋಜನೆ ಅನುಷ್ಠಾನಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿದೆ ಎಂದವರು ತಿಳಿಸಿದ್ದಾರೆ.

ಆದರೆ ಬುಲೆಟ್ ಟ್ರೈನ್ ಯೋಜನೆಯಲ್ಲಿ ಭಾರತದ ಸಂಸ್ಥೆಗಳಿಗೆ ಪ್ರಮುಖ ಪಾತ್ರ ವಹಿಸುವ ಅವಕಾಶ ದೊರೆಯದು ಎಂಬುದು ಇದೀಗ ಬಹುತೇಕ ನಿಶ್ಚಿತವಾಗಿದೆ ಎಂದು ನೀತಿ ಆಯೋಗದ ಅಧಿಕಾರಿಗಳು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News