ನಾಲ್ವರು ಪೊಲೀಸರ ಅಮಾನತು, ತನಿಖೆಗೆ ಆದೇಶ

Update: 2018-01-19 13:55 GMT

ಲಕ್ನೊ, ಜ.19: ಪೊಲೀಸರು ಹಾಗೂ ಕ್ರಿಮಿನಲ್‌ಗಳ ನಡುವೆ ಬುಧವಾರ ಮಥುರಾ ಗ್ರಾಮದಲ್ಲಿ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಎಂಟು ವರ್ಷದ ಬಾಲಕ ಮೃತಪಟ್ಟ ಪ್ರಕರಣದ ತನಿಖೆಗೆ ಆದೇಶಿಸಲಾಗಿದ್ದು, ಇಬ್ಬರು ಎಸ್ಸೈ ಸಹಿತ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಮಥುರಾದಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಒಳಗೊಂಡಿದ್ದ ದುಷ್ಕರ್ಮಿಗಳು ಅಡುಕಿ ಮೋಹನ್‌ಪುರ ಗ್ರಾಮದಲ್ಲಿ ಇದ್ದಾರೆ ಎಂಬ ಮಾಹಿತಿಯಂತೆ ಬುಧವಾರ ಸಂಜೆ ಆರು ಮಂದಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲಿ ದುಷ್ಕರ್ಮಿಗಳು ಹಾಗೂ ಪೊಲೀಸರ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು ಆಗ ಅಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಮಾಧವ್ ಭಾರದ್ವಾಜ್ ಎಂಬಾತನಿಗೆ ಗುಂಡು ತಗುಲಿದ್ದು ಬಳಿಕ ಆತ ಮೃತಪಟ್ಟಿದ್ದಾನೆ.

   ಬಾಲಕನ ದೇಹದ ಮರಣೋತ್ತರ ಪರೀಕ್ಷೆಯಲ್ಲಿ ಬುಲೆಟ್‌ನಿಂದ ಆದ ಗಾಯ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಆದರೆ ಗುಂಡು ಹಾರಿಸಿದವರು ಯಾರೆಂದು ತಿಳಿದುಬಂದಿಲ್ಲ. ಬಾಂಬ್ ನಿಷ್ಕ್ರಿಯ ದಳ ಹಾಗೂ ಫೊರೆನ್ಸಿಕ್ ತಂಡ ಬುಲೆಟ್ ಪತ್ತೆಹಚ್ಚಲು ವಿಫಲವಾಗಿದೆ ಎಂದು ಮಥುರಾದ ಹಿರಿಯ ಪೊಲೀಸ್ ಅಧೀಕ್ಷಕ ಸ್ವಪ್ನಿಲ್ ಮಂಗೈನ್ ತಿಳಿಸಿದ್ದಾರೆ.

   ಈ ಮಧ್ಯೆ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಸ್ಥಳಕ್ಕೆ ತೆರಳಿದ್ದ ಆಗ್ರಾ ವಲಯದ ಐಜಿಪಿ ರಾಜಾ ಶ್ರೀವಾಸ್ತವ ಅವರು ನೀಡಿದ ವರದಿಯ ಆಧಾರದಲ್ಲಿ ಕರ್ತವ್ಯ ಲೋಪದ ಆರೋಪದಲ್ಲಿ ಎಸ್ಸೈಗಳಾದ ವೀರೇಂದ್ರ ಸಿಂಗ್ ಯಾದವ್ ಹಾಗೂ ಸೌರಭ್ ಶರ್ಮ, ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ಸುಭಾಷ್‌ಚಂದ್ರ ಮತ್ತು ಉಧಾಮ್ ಸಿಂಗ್‌ರನ್ನು ಅಮಾನತುಗೊಳಿಸಲಾಗಿದೆ. ಮೃತಬಾಲಕನ ತಂದೆ ನೀಡಿದ ದೂರಿನಂತೆ ನಾಲ್ವರು ಗುರುತಿಸಲಾಗದ ವ್ಯಕ್ತಿಗಳ ವಿರುದ್ಧ ಹೈವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಎಸ್ಸೈ ಯಾದವ್ ಸರಿಯಾಗಿ ಯೋಚಿಸದೆ ಕಾರ್ಯನಿರ್ವಹಿಸಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಎಸ್ಸೈ ಶರ್ಮ ಹಾಗೂ ಇತರ ಇಬ್ಬರು ಪೊಲೀಸರು ಬಾಲಕನನ್ನು ಆಸ್ಪತ್ರೆಗೆ ಸಾಗಿಸದೆ ಸ್ಥಳದಿಂದ ತೆರಳಿದ್ದು, ಸಂವೇದನರಹಿತ ವರ್ತನೆಗಾಗಿ ಅವರನ್ನು ಅಮಾನತುಗೊಳಿಸಲಾಗಿದೆ . ಅಲ್ಲದೆ ಸರ್ಕಲ್ ಇನ್‌ಸ್ಪೆಕ್ಟರ್ ಅಥವಾ ಠಾಣಾಧಿಕಾರಿಗೆ ಮಾಹಿತಿ ನೀಡದೆ ಎಸ್ಸೈ ಯಾದವ್ ತನ್ನ ತಂಡದೊಂದಿಗೆ ಘಟನಾ ಸ್ಥಳಕ್ಕೆ ತೆರಳಿದ್ದಾರೆ ಎಂದು ಸ್ವಪ್ನಿಲ್ ತಿಳಿಸಿದ್ದಾರೆ. ತನಿಖೆಗೆ ಆದೇಶಿಸಲಾಗಿದ್ದು ಎರಡು ವಾರದೊಳಗೆ ಸರಕಾರಕ್ಕೆ ತನಿಖಾ ವರದಿ ಸಲ್ಲಿಸಲಾಗುವುದು ಎಂದವರು ತಿಳಿಸಿದ್ದಾರೆ.

   ಈ ಮಧ್ಯೆ, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಮೃತ ಬಾಲಕನ ಅಂತ್ಯಸಂಸ್ಕಾರ ನಡೆಸಲಾಗಿದೆ. ಮೃತಬಾಲಕನ ಕುಟುಂಬಕ್ಕೆ ಮುಖ್ಯಮಂತ್ರಿ ಆದಿತ್ಯನಾಥ್ ಘೋಷಿಸಿದ 5 ಲಕ್ಷ ರೂ. ಪರಿಹಾರಧನವನ್ನು ಗುರುವಾರ ಹಸ್ತಾಂತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News