ಮೋದಿ ಮತ್ತವರ ಸರಕಾರವನ್ನು ಪ್ರಶ್ನಿಸಲೇ ಬೇಕಾಗಿದೆ

Update: 2018-01-19 18:45 GMT

ವಿಶೇಷ ನ್ಯಾಯಾಲಯದ ಸದರಿ ಆದೇಶದಿಂದ ಒಟ್ಟಾರೆ 2ಜಿ ಪ್ರಕರಣ ಏನೆಂದು ಇದೀಗ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಜನಕ ಹಾಗೂ ಇದೀಗ ಕೇಂದ್ರ ಸರಕಾರದ ಬ್ಯಾಂಕಿಂಗ್ ಬೋರ್ಡ್ ಅಧ್ಯಕ್ಷರಾಗಿ ಉಪಕೃತರ ಕೃಪೆಯಿಂದ ಫಲಾನುಭವಿಯಾಗಿರುವ ವಿನೋದರಾಯ್ ಅವರು, ಪ್ರಕರಣವನ್ನು ವೈಭವೀಕರಿಸಿ ಬೃಹತ್ ಕರ್ಮಕಾಂಡದ ರೂಪಕೊಟ್ಟು ಉದ್ದೇಶಿತ ಲಾಭ ದಕ್ಕಿಸಿಕೊಂಡ ಮೋದಿ ಮತ್ತು ಅವರ ಪಕ್ಷದ ನಾಯಕರು ಇಲ್ಲಿ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ನೀಡುವರೇ?


2ಜಿ ತರಂಗಾಂತರ ಭ್ರಷ್ಟಾಚಾರ ಪ್ರಕರಣ ಕುರಿತಂತೆ 7 ವರ್ಷಗಳಿಂದ ಸುದೀರ್ಘ ವಿಚಾರಣೆ ಬಳಿಕ ಸಿಬಿಐ ವಿಶೇಷ ನ್ಯಾಯಾಲಯವು ತನಿಖಾ ಏಜನ್ಸಿಗಳು ದೃಢವಾದ ಸಾಕ್ಷಿ, ಪುರಾವೆಗಳನ್ನು ಒದಗಿಸಲು ವಿಫಲವಾದ ಕಾರಣ ಎ. ರಾಜಾ ಸೇರಿದಂತೆ ಎಲ್ಲಾ ಆರೋಪಿಗಳನ್ನು ಇತ್ತೀಚೆಗಿನ ತನ್ನ ಆದೇಶದ ಮೂಲಕ ಖುಲಾಸೆಗೊಳಿಸಿದೆ. ಸದರಿ ಕೋರ್ಟು ಆದೇಶಗಳ ಕುರಿತಾದ ಪತ್ರಿಕಾ ವರದಿಗಳನ್ನು ಓದುತ್ತಾ ಈ ಲೇಖಕನಿಗೆ 2014 ಲೋಕಸಭಾ ಚುನಾವಣಾ ಪೂರ್ವದಲ್ಲಿ ಟಿ.ವಿ. ಚಾನೆಲ್ ಒಂದರಲ್ಲಿ ನಡೆದಿದ್ದ ಗಂಭೀರ ಚರ್ಚೆ ನೆನಪಾಗುತ್ತಿದೆ. 2014ರ ಎಪ್ರಿಲ್ ಮೊದಲವಾರ ಮಂಗಳೂರಿನ ಸ್ಥಳೀಯ ಸುದ್ದಿ ಚಾನೆಲ್‌ನವರು ಬಿಜೆಪಿಯ ಪ್ರಮುಖ ನಾಯಕರೋರ್ವರ ಜೊತೆಗೆ ಸಂವಾದ ನಡೆಸಲು ಈ ಲೇಖಕನನ್ನು ಆಹ್ವಾನಿಸಿದ್ದರು. ಅಂದಿನ ಕೇಂದ್ರದ ಯುಪಿಎ ಸರಕಾರ/ಸಚಿವರ ವಿರುದ್ಧ ಕೇಳಿಬರುತ್ತಿದ್ದ, ಭ್ರಷ್ಟಾಚಾರ ಪ್ರಕರಣಗಳು ಸಂವಾದದ ಚರ್ಚಿತ ವಿಷಯವಾಗಿತ್ತು. ಅಂದು ಈ ಲೇಖಕ 2ಜಿ ತರಂಗಾಂತರ ವಿತರಣಾ ಪ್ರಕ್ರಿಯೆಯಲ್ಲಿನ ಭ್ರಷ್ಟಾಚಾರ ಆರೋಪಗಳನ್ನು ಈ ಕೆಳಗಿನ ಕಾರಣಗಳಿಗಾಗಿ ವಿರೋಧಿಸಿ ಚರ್ಚಿಸಿರುವ ಬಹುತೇಕ ಅಂಶಗಳನ್ನು ಮೇಲಿನ ವಿಶೇಷ ನ್ಯಾಯಾಲಯ ಎತ್ತಿಹಿಡಿದಿರುವುದರಿಂದ ಅವುಗಳನ್ನು ಎಲ್ಲಿ ಉಲ್ಲೇಖಿಸಲಾಗಿದೆ. ಅವುಗಳು: 1) ಇದು ಸಿಎಜಿಯವರ ಕೇವಲ ಆಡಿಟ್ ಅಂದಾಜು, ಈ ಅಂದಾಜನ್ನು ಅವರು ವಿಜೃಂಭಿತ ಸಂಖ್ಯೆಗೆ ವಿಸ್ತರಿಸಿ ಬೃಹತ್ ಪ್ರಕರಣ ಮಾಡಿರುತ್ತಾರೆ.

 2. ಸದರಿ ಪ್ರಕರಣದ ವ್ಯವಹಾರದಲ್ಲಿ ಭಾಗಿಗಳಾಗಿ ವ್ಯವಹಾರ ಹೊಂದಿಸಲು ವಿಫಲರಾಗಿ ಕಷ್ಟ ನಷ್ಟ ಅನುಭವಿಸಿದ ಯಾವುದೇ ಕಂಪೆನಿ ಇಲ್ಲವೇ ದೂರುದಾರ ಯಾವುದೇ ದೂರು ದಾಖಲಿಸದೆ ಇರುವಾಗ, ಸಿಎಜಿಯವರ ಕೇವಲ ಅಂದಾಜಿತ ಆದಾಯ ನಷ್ಟ ಒಂದು ಭ್ರಷ್ಟ ಪ್ರಕರಣ ಎಂದಾಗಲು ಹೇಗೆ ಸಾಧ್ಯ?

3) ಈ ಅಂಶ ಇಷ್ಟರಲ್ಲೇ 2012ರಲ್ಲಿ ವರಿಷ್ಠ ನ್ಯಾಯಾಲಯದ ಆದೇಶದಂತೆ ನಡೆದ ತರಂಗಾಂತರಗಳ ಮರು ಹರಾಜಿನಲ್ಲಿ ಸಿಎಜಿ ಅಂದಾಜಿತ ಆದಾಯದ ಕೇವಲ ಶೇ. 17ಗಳಿಕೆಯಾಗಿ ಅವರು ಕೇವಲ ಪ್ರಚಾರಕ್ಕಾಗಿ ಅಥವಾ ದುರುದ್ದೇಶದಿಂದ ಈ ಪ್ರಕರಣವನ್ನು ಹುಟ್ಟು ಹಾಕಿದ್ದರು ಎಂದೂ ಮತ್ತು ಇದರಲ್ಲಿ ಸಾರ್ವಜನಿಕರ ಮತ್ತು ಗ್ರಾಹಕರ ಹಿತಾಸಕ್ತಿ ಏನೇನೂ ಇಲ್ಲ ಎಂದು ವಾದಿಸಿದ್ದರು. ಇದು ಬಿಜೆಪಿಯವರಿಂದ ಬಹು ವ್ಯವಸ್ಥಿತ ವೈಭವೀಕೃತ ಪ್ರಚಾರಣಾ ವಿಷಯವಾಗಿ, ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ಚುನಾವಣೆಯಲ್ಲಿ ಮಾರಕ ಹೊಡೆತವನ್ನಿತ್ತ ಸದರಿ ಪ್ರಕರಣ ಕುರಿತಂತೆ ಮೇಲಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ತನ್ನ ಆದೇಶದಲ್ಲಿ ನೀಡಿರುವ ಒಂದು ಕಿರು ಟಿಪ್ಪಣಿ ಇಡೀ ಪ್ರಕರಣದ ಟೊಳ್ಳುತನವನ್ನು ಬಯಲು ಮಾಡುತ್ತದೆ.

ಆ ಟಿಪ್ಪಣಿ ಇಂತಿದೆ- ‘‘ಈ ಪ್ರಕರಣದಲ್ಲಿ ಕೆಲವರು ಬಹುದೊಡ್ಡ ಹಗರಣವನ್ನು ಹುಟ್ಟುಹಾಕಿದರು. ಮತ್ತೆ ಕೆಲವರು ಈ ಪ್ರಕರಣವನ್ನು ಒಂದು ಬೃಹತ್ ಹಗರಣವನ್ನಾಗಿಸಲು ಬಹಳ ಜಾಣ್ಮೆಯಿಂದ ಕಲಾತ್ಮಕವಾಗಿ ವಿಷಯವನ್ನು ಹೆಣೆದರು. ಕೆಲ ಆಯ್ದ ಅಂಕಗಳೊಂದಿಗೆ ಅವಗಾಹನೆಗೆ ನಿಲುಕದಷ್ಟು ಅಂಕೆ ಸಂಖ್ಯೆಯ ಬೃಹದಾಕಾರದ ಹಗರಣ ಇದೆಂದರು.’’ ಮಾನ್ಯ ನ್ಯಾಯಾಧೀಶರ ಈ ಒಂದೆರಡು ವಾಕ್ಯಗಳೇ ಇಡೀಯ ಪ್ರಕರಣ ರೂಪುಗೊಂಡ ಬಗೆಗಿನ ಹಿನ್ನೆಲೆ ಮತ್ತು ಮುನ್ನೆಲೆ ಬಗ್ಗೆ ಸಾರಿ ಹೇಳುತ್ತಿಲ್ಲವೇ?

ವಿಶೇಷ ನ್ಯಾಯಾಲಯದ ಸದರಿ ಆದೇಶದಿಂದ ಒಟ್ಟಾರೆ ಈ ಪ್ರಕರಣ ಏನೆಂದು ಇದೀಗ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಜನಕ ಹಾಗೂ ಇದೀಗ ಕೇಂದ್ರ ಸರಕಾರದ ಬ್ಯಾಂಕಿಂಗ್ ಬೋರ್ಡ್ ಅಧ್ಯಕ್ಷರಾಗಿ ಉಪಕೃತರ ಕೃಪೆಯಿಂದ ಫಲಾನುಭವಿಯಾಗಿರುವ ವಿನೋದರಾಯ್ ಅವರು, ಪ್ರಕರಣವನ್ನು ವೈಭವೀಕರಿಸಿ ಬೃಹತ್ ಕರ್ಮಕಾಂಡದ ರೂಪಕೊಟ್ಟು ಉದ್ದೇಶಿತ ಲಾಭ ದಕ್ಕಿಸಿಕೊಂಡ ಮೋದಿ ಮತ್ತು ಅವರ ಪಕ್ಷದ ನಾಯಕರು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡುವರೇ?

1. ಅಂದಿನ ಸಿಎಜಿಯವರು ಉದ್ದೇಶಪೂರ್ವಕವಾಗಿ ಈ ತಥಾಕಥಿತ ಆಡಿಟ್ ವರದಿ ನೀಡದರೇ? 
 ಸಿಎಜಿ ವಿನೋದರಾಯ್ ಅವರು ಅಂದಿನ ಸಂದರ್ಭದಲ್ಲಿ ಚಾಲ್ತಿಯಲ್ಲಿ ಇಲ್ಲದ ಹರಾಜು ವ್ಯವಸ್ಥೆಯ ಮೂಲಕ ಲೆಕ್ಕಾಚಾರಕ್ಕೆ ನಿಲುಕದ ಸಂಖ್ಯೆಯ ಮೊತ್ತ ಬರುವಂತೆ 3ಜಿ ತರಂಗಾಂತರದ ಬೆಲೆಯನ್ನು 2ಜಿ ತರಂಗಾಂತರಕ್ಕೆ ಹೊಂದಿಸಿ 1.76 ಲಕ್ಷ ಕೋಟಿ ರೂ. ಗಳ ಆದಾಯ ನಷ್ಟ ಆಗಿದೆ ಎಂದು ವರದಿ ನೀಡಿದರೆ ಮೋದಿ ಮತ್ತು ಬಿಜೆಪಿಯ ಎಲ್ಲಾ ನಾಯಕರು ಅದನ್ನು ಇನ್ನಷ್ಟು ಹಿಗ್ಗಿಸಿ 2 ಲಕ್ಷ ಕೋಟಿ ರೂ.ಗಳ ದೇಶದ ಈವರೆಗಿನ ಬೃಹತ್ ಹಗರಣ ಇದೆಂದು ದೇಶಾದ್ಯಂತ ಪ್ರಚಾರ ಗೈದರು! ಈ ತಥಾಕಥಿತ ವೈಭವೀಕರಿಸಿದ ಪ್ರಚಾರದ ಪರಿಣಾಮವಾಗಿ ಬಿಜೆಪಿ ಪ್ರಥಮ ಬಾರಿಗೆ ತನ್ನ ಸ್ವಂತ ಬಲದಲ್ಲೇ ಅಧಿಕಾರ ನಡೆಸುವಷ್ಟು ಬಲದ 282 ಸೀಟುಗಳನ್ನು ಗೆದ್ದು ಬೀಗಿದರೆ, ಈ ವ್ಯವಸ್ಥಿತ ‘ಮೇಕ್ ಬಿಲೀವ್’ ಪ್ರಚಾರಕ್ಕೆ ಬಲಿಯಾಗಿ ಕಾಂಗ್ರೆಸ್ ಇದುವರೆಗಿನ ಕನಿಷ್ಠ ಗಳಿಕೆಯಾದ 44 ಸೀಟುಗಳಿಗೆ ಕುಸಿದು ಹೋಯ್ತು.

2. ಎ. ರಾಜಾ ತನ್ನ ಸಚಿವ ಸ್ಥಾನವನ್ನು ದುರುಪಯೋಗ ಪಡಿಸಿದ್ದರೇ? 
ಕೇಂದ್ರದ ಯುಪಿಎ ಸರಕಾರದಲ್ಲಿ ಅಂದು ಡಿಎಂಕೆ ಪರವಾಗಿ ರಾಜಾ ಅವರು 2007ರಲ್ಲಿ ಅಧಿಕಾರ ವಹಿಸಿಕೊಂಡಾಗ 2 ಜಿ ತರಂಗಾಂತರ ವಿತರಣೆ ಮಾಡುವ ‘ಫರ್ಸ್ಟ್ ಕಂ ಫರ್ಸ್ಟ್ ಸರ್ವ್’ ವ್ಯವಸ್ಥೆ ಅಷ್ಟರಲ್ಲೇ ಜಾರಿಯಲ್ಲಿತ್ತು. ಆ ಪ್ರಕಾರ ಆರೋಪಿತ ಯೂನಿಟಕ್ ಮತ್ತು ಸ್ವಾನ್ ಟೆಲಿಕಾಂ ಕಂಪೆನಿಗಳು ಮೊದಲೇ ಬೇಡಿಕೆ ಅರ್ಜಿ ಸಲ್ಲಿಸಿ ಅವುಗಳ ಅಷ್ಟರಲ್ಲೇ ಪರಿಶೀಲನೆಯಲ್ಲಿದ್ದುದರಿಂದ ಎ. ರಾಜಾ ಅವರು ಮೇಲಿನ ಸಂಸ್ಥೆಗಳಿಗೆ ಅಕ್ರಮವಾಗಿ ಸಹಾಯ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬುದು ವಿಚಾರಣೆ ಗೈದ ನ್ಯಾಯಾಲಯ ಹೇಳಿದೆ

3. ಅಪೂರ್ವ ಸುಧಾರಣಾ ಕ್ರಮಗಳಿಂದ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ನವೀನ ಸೌಲಭ್ಯಗಳನ್ನು ಒದಗಿಸಿದ್ದ ರಾಜೀವ್ ಗಾಂಧಿ ಮತ್ತು ಸ್ಯಾಂ ಪಿತ್ರೋಡಾ ಅವರಿಗೆ ಕೀರ್ತಿಯನ್ನೊದಗಿಸಬೇಕಾಗಿದ್ದ ಟೆಲಿಕಾಂ ಸುಧಾರಣೆಗಳು ಅವರಿಗೆ ಕೀರ್ತಿ ತರುವ ಬದಲು ಪಕ್ಷಕ್ಕೆ ಅಪಕೀರ್ತಿ ತರುವಂತಾದುದು ನಿಜಕ್ಕೂ ಒಂದು ಶೋಚನೀಯ ಬೆಳವಣಿಗೆ. ಹಾಗೆ ನೋಡಿದರೆ ಈ ‘ಫರ್ಸ್ಟ್ ಕಂ ಫರ್ಸ್ಟ್ ಸರ್ವ್’ ಸೇವಾ ಮಾದರಿಯನ್ನು 1999-2004ರಲ್ಲಿ ವಾಜಪೇಯಿ ಸರಕಾರದಲ್ಲಿ ಸಂಪರ್ಕ ಸಚಿವರಾಗಿದ್ದ ಪ್ರಮೋದ್ ಮಹಾಜನ್ ಅವರು ಜಾರಿಗೆ ತಂದರು. ಸಾರ್ವಜನಿಕರ ವಿಶೇಷವಾಗಿ ಗ್ರಾಹಕರ ಹಿತರಕ್ಷಿಸುವ ಸದರಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು ಎಂದು ಮಹಾಜನ್ ಹೇಳಿದ್ದರು. ಗ್ರಾಹಕರ ಹಿತಾಸಕ್ತಿಯನ್ನು ಮತ್ತೆ ಗಮನದಲ್ಲಿಟ್ಟು ಯುಪಿಎ ಸರಕಾರ ಸದರಿ ವ್ಯವಸ್ಥೆಯನ್ನು ಮುಂದುವರಿಸಿತ್ತು.

ಬಿಜೆಪಿ ನಾಯಕರಿಗೆ 1999-2004ರಲ್ಲಿ ಮೇಲಿನ ವಿತರಣಾ ವ್ಯವಸ್ಥೆ ಸರಿಯೆಂದು ಕಂಡು ಬಂದಿದ್ದರೆ, 2007ರ ನಂತರ ಅದು ಏಕೆ ಸರಿ ಎನಿಸಲಿಲ್ಲ? ಇಲ್ಲಿ ಸಾರ್ವಜನಿಕರು ಮತ್ತು ಗ್ರಾಹಕರು ಗಮನಿಸಲೇಬೇಕಾದ ಇನ್ನೊಂದು ಅಂಶ ಈ ತರಂಗಾಂತರ ವಿತರಣೆ ದರಗಳು ಟೆಲಿಫೋನ್ ಕರೆಗಳ ದರದ ಮೇಲಾಗುವ ಪರಿಣಾಮದ ಬಗ್ಗೆ. ಈ ತರಂಗಾಂತರವು ಟೆಲಿಕಾಂ ಕ್ಷೇತ್ರದ ಸೇವಾ ಕ್ಷೇತ್ರಕ್ಕೆ ಬೇಕಾದ ಒಂದು ಅತೀ ಅಗತ್ಯದ ಮೂಲ ಸೌಲಭ್ಯ. ಈ ಮೂಲ ಸೌಲಭ್ಯ ಎಷ್ಟು ಕಡಿಮೆದರದಲ್ಲಿ ಲಭ್ಯವಾಗುತ್ತೋ ಅಷ್ಟರಮಟ್ಟಿಗೆ ಮೊಬೈಲ್ ಕಾಲ್‌ರೇಟು ಕಡಿಮೆ ಮಟ್ಟದಲ್ಲಿರುತ್ತದೆ. ಅಂದರೆ ವಾದಕ್ಕಾಗಿ ಒಂದು ವೇಳೆ ವಿನೋದರಾಯ್ ಅಂದಾಜಿನಂತೆ ತರಂಗಾಂತರ ವಿತರಣೆಯಿಂದ ಸರಕಾರಕ್ಕೆ ಶೇ. 1. 76 ಲಕ್ಷ ಕೋಟಿ ಆದಾಯ ಬರುತ್ತಿದ್ದರೆ ಏನಾಗುತ್ತಿತ್ತು? ಗ್ರಾಹಕರಿಂದಲೇ ಹೆಚ್ಚುವರಿ ಕರೆದರಗಳ ಮೂಲಕ ವಸೂಲಿ ಮಡುತ್ತಿದ್ದರು. ಆಗ ಗ್ರಾಹಕರಿಗೆ ಪ್ರತೀ ಮಿನಿಟ್‌ಗೆ 30/40 ಪೈಸೆಗೆ ಲಭಿಸುತ್ತಿದ್ದ ಕಾಲ್‌ರೇಟ್‌ಗೆ ಪ್ರತಿಯಾಗಿ ಅವರುಗಳು ಕನಿಷ್ಠ ರೂ. 1.50ರಿಂದ 2.00 ರೂ. ಪ್ರತೀ ಮಿನಿಟ್‌ಗೆ ತೆರಬೇಕಾಗುತ್ತಿತ್ತು! ಹೀಗೆ ಮಾನ್ಯ ವಿನೋದರಾಯ್‌ರವರು ಈ ಮೇಲಿನಂತೆ ಗ್ರಾಹಕರ ಹಿತಾಸಕ್ತಿ ವಿಚಾರ ಎಂದಾದರೂ ಮನನ ಮಾಡಿದ್ದರೆ, ಅವರು ಮೇಲಿನ ಉತ್ಪ್ರೇಕ್ಷಿತ ಅಂದಾಜು ಆದಾಯ ನೀಡಲು ಸಾಧ್ಯವಿತ್ತೇ?

4. ಮರು ಹರಾಜು ಪ್ರಕ್ರಿಯೆಯಲ್ಲಿ ದಕ್ಕಿದ್ದು ಕೇವಲ ರೂ. 30,000 ಕೋಟಿ
ವಿನೋದರಾಯ್‌ಯವರ ಅಂದಾಜಿತ ಹೆಚ್ಚುವರಿ ಆದಾಯದ ಆಡಿಟ್ ವರದಿ ಬಳಿಕ ಅದೊಂದು ಹಗರಣ ರೂಪ ತಳೆದು ಸುಪ್ರೀಂ ಕೋರ್ಟು ಅಂಗಣಕ್ಕೆ ಬಂದು ಎಲ್ಲಾ 122 ಪರವಾನಿಗೆಗಳು ರದ್ದಾಗಿ, ಕೋರ್ಟ್ ಮರು ಹರಾಜಿಗೆ ಆದೇಶ ನೀಡುತ್ತದೆ. ಅಂತೆಯೇ 2012ರಲ್ಲಿ ನಡೆದ ಮರು ಹರಾಜು ಪ್ರಕ್ರಿಯೆಯಲ್ಲಿ ಸಿಎಜಿ ಅಂದಾಜಿಸಿದಂತೆ ರೂ. 1.76 ಲಕ್ಷ ಕೋಟಿ ಲಭ್ಯವಾಗದೆ ಕೇವಲ ಅಂದರೆ ಶೇ. 17 ಅಂದರೆ ರೂ. 30,000 ಕೋಟಿ ಮಾತ್ರ ಲಭ್ಯವಾಗಿತ್ತು. ಹೀಗೆ ಮೇಲಿನ ಅಂದಾಜಿತ ವರದಿ ಎಷ್ಟರಮಟ್ಟಿಗೆ ಕಪೋಲ ಕಲ್ಪಿತವಾಗಿತ್ತು ಎಂದು ಅರ್ಥೈಸಲು ಸಾಧ್ಯ. ಮೇಲಿನ ವಾಸ್ತವಾಂಶ ಅರಿತ ಬಳಿಕ ಮೋದಿ ಮತ್ತು ಬಿಜೆಪಿ ನಾಯಕರು ಅಷ್ಟಕ್ಕೆ ಸದರಿ ಹಗರಣವನ್ನು ಬದಿಗೆ ಸರಿಸಬಹುದಿತ್ತು. ಆದರೆ ಯಾವತ್ತೂ ಸುಳ್ಳನ್ನು ಸತ್ಯವೆಂದು ಪ್ರತಿಪಾದಿಸುವುದರಲ್ಲಿ ನಿಸ್ಸೀಮರಾದ ಬಿಜೆಪಿ /ಸಂಘ ಪರಿವಾರ ಮತ್ತೆ ಅದೇ ಸುಳ್ಳಿನ ಕಂತೆಗೆ ಜೋತು ಬಿದ್ದು 2014ರ ಚುನಾವಣೆವರೆಗೂ ಅದನ್ನು ಜೀವಂತ ಇಟ್ಟು ವೈಭವೀಕರಿಸುತ್ತಾ ಪ್ರಚಾರ ಗೈದರು.

5. ಕಾಂಗ್ರೆಸ್ ಪಕ್ಷವನ್ನೇ ಟಾರ್ಗೆಟ್ ಮಾಡಲಾಗಿತ್ತು
ಈ ತರಂಗಾಂತರ ವಿತರಣೆ ಮತ್ತು ಕಲ್ಲಿದ್ದಲು ಬ್ಲಾಕ್ ವಿತರಣೆ ಎರಡರಲ್ಲೂ ಸಚಿವ ಸ್ಥಾನದ ಹೊಣೆ ಹೊತ್ತವರು ಎ. ರಾಜಾ ಡಿ.ಎಂ.ಕೆ. ಮತ್ತು ಸೊರೇನ್-ಜೆ.ಎಂ.ಎಂ. ಪಕ್ಷದವರಾಗಿದ್ದರು. ಆದರೂ ಬಿಜೆಪಿ ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಪಕ್ಷದವರೇ ಈ ಹಗರಣಗಳಿಗೆ ಹೊಣೆಗಾರರು ಎಂಬ ರೀತಿಯಲ್ಲಿ ಪ್ರಚಾರ ಗೈದರು. ಆ ಮೇಕ್ ಬಿಲೀವ್ ಪ್ರಚಾರವನ್ನು ಧೈರ್ಯದಿಂದ ಮೆಟ್ಟಿ ನಿಂತು ತನ್ನನ್ನು ರಕ್ಷಿಸಿ ಕೊಳ್ಳುವುದರಲ್ಲಿ ಕಾಂಗ್ರೆಸ್ ವಿಫಲವಾದುದು ನಿಜಕ್ಕೂ ಶೋಚನೀಯ.

6. ಕಾಂಗ್ರೆಸ್ ಪ್ರಾಯೋಜಿತ ಸಂಪರ್ಕ ಕ್ಷೇತ್ರ ಸುಧಾರಣಾ ಕ್ರಮಗಳ ಬಹುದೊಡ್ಡ ಫಲಾನುಭವಿ-ಟಿ.ವಿ. ಮಾಧ್ಯಮಗಳೇ ಕಾಂಗ್ರೆಸ್ ಪಕ್ಷದ ಹಿತಾಸಕ್ತಿಗೆ ಮಾರಕವಾದವು: ಮಾನ್ಯ ರಾಜೀವ್ ಗಾಂಧಿ ಕಾಲದಲ್ಲಿ ಅವರ ಕೋರಿಕೆಯಂತೆ ಸ್ಯಾಂ ಪಿತ್ರೋಡಾ ಅವರು ಆರಂಭಿಸಿದ ಸುಧಾರಣ ಪ್ರಕ್ರಿಯೆಗಳು ಅನಾವರಣಗೊಳ್ಳುತ್ತಾ ಹತ್ತಾರು ಟಿ.ವಿ. ಮಾಧ್ಯಮ ಸಂಸ್ಥೆಗಳು ಸೇವಾ ಕ್ಷೇತ್ರಗಳಲ್ಲಿ ಕಂಡು ಬಂದವು. ಹೀಗೆ ವಿಸ್ತರಣೆಗೊಂಡ ದೃಶ್ಯ ಮಾಧ್ಯಮಗಳ ಒಂದು ದೊಡ್ಡ ಕೊಡುಗೆ 24್ಡ7 ನ್ಯೂಸ್ ಚಾನೆಲ್‌ಗಳು. ಆದರೆ ಈ ನ್ಯೂಸ್ ಚಾನೆಲ್‌ಗಳ ಬಹುಭಾಗ ಅದರಲ್ಲೂ ಇಂಗ್ಲಿಷ್ ನ್ಯೂಸ್ ಚಾನೆಲ್‌ಗಳು ಬಹುತೇಕ ತಮ್ಮ ಸ್ಟುಡಿಯೋಗಳನ್ನೇ ಒಪನ್‌ಕೋರ್ಟ್ ಮಾಡಿ ತಾವು ಪ್ರಿ-ಜಡ್ಜ್ ಮೆಂಟಲ್ ಮತ್ತು ಏಕಮುಖವಾಗಿ ಕಾಂಗ್ರೆಸ್ ಸರಕಾರದ ವಿರುದ್ಧ ಮಾತ್ರ ಕಾರ್ಯವೆಸಗುತ್ತಾ ಅದರ ಪೂರ್ತಿ ಲಾಭ ಬಿಜೆಪಿಗೆ ದಕ್ಕುವಂತೆ ಮಾಡಿರುವುದು ನಿಜಕ್ಕೂ ಒಂದು ವಿಪರ್ಯಾಸ!

7. ಸಿಎಜಿ ಬಿಜೆಪಿ ಪಕ್ಷಪಾತಿಯಾಗಿ ಕಾರ್ಯ ನಿರ್ವಹಿಸಿದ್ದರೇ?
ಅಂದಿನ ಸಿಎಜಿಯವರು ತನ್ನ ವರದಿ ಬಗ್ಗೆ ಆಗಾಗ್ಗೆ ಮಾಧ್ಯಮಗಳಿಗೆ ವರದಿಯ ಅಂಕಗಳನ್ನು ಲೀಕ್ ಮಾಡುತ್ತಾ ತಾನು ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡದ್ದೇ ಅಲ್ಲದೆ ಅದರ ಗರಿಷ್ಠ ಲಾಭ ಬಿಜೆಪಿ ಪಡೆಯುವಂತೆ ಸಹಕಾರಿಸುತ್ತಿದ್ದರು ಎಂದು ಕಂಡುಬಂದಿದೆ. ಅಂತಹ ಒಂದು ಸಂಭಾವ್ಯ ತಿಳುವಳಿಕೆಯಿಂದಾಗಿಯೇ ಬಹುಶಃ ಮಾನ್ಯ ವಿನೋದರಾಯ್‌ಗೆ ಬಿಜೆಪಿ ಸರಕಾರದಿಂದ ಎರಡು ಮಹತ್ವದ ಅಧಿಕಾರ ಸ್ಥಾನ ಗಿಟ್ಟಿಸಲು ಸಾಧ್ಯವಾಗಿದೆ ಎಂದು ಹೇಳಬಹುದು.

ಮೇಲೆ ವಿವರಿಸಿರುವಂತೆ ತರಂಗಾಂತರ ವಿತರಣೆಯಲ್ಲಿ ಸಿಎಜಿಯವರು ನೀಡಿರುವುದು ಕೇವಲ ಅಂದಾಜು ಹೆಚ್ಚುವರಿ ಆದಾಯ. ಇತ್ತೀಚೆಗೆ ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ದಾತಾರ ಸಂಸ್ಥೆ ಭಾರತೀಯ ರಿಸರ್ವ ಬ್ಯಾಂಕ್ ಬಿಡುಗಡೆ ಮಾಡಿದ ರಾಷ್ಟ್ರೀಯ ಜಿಡಿಪಿ ರೇಟು ಶೇ. 5.7 ಕುಸಿತಗೊಂಡು ಒಟ್ಟು ರೂ. 2.5 ಲಕ್ಷ ಕೋಟಿಗಳಷ್ಟು ದೊಡ್ಡ ಪ್ರಮಾಣದ ನಷ್ಟ ಆಗಿದೆ ಎಂದು ಘೋಷಿಸಿದೆ. ಸದರಿ ವರದಿಯನ್ನು ಜಾಗತಿಕ ಬ್ಯಾಂಕ್, ಐಎಂಎಫ್ ಮತ್ತು ಇತರ ಅಂತಾರಾಷ್ಟ್ರೀಯ ಹಣಕಾಸು ರೇಟಿಂಗ್ ಸಂಸ್ಥೆಗಳೂ ಮಾನ್ಯ ಮಾಡಿವೆ. ಹೀಗೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಮೋದಿ ಮತ್ತವರ ಸರಕಾರ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ಒಂದು ಮೇಲಿನ ಪ್ರಕರಣದಲ್ಲಿ ಸಿಎಜಿ ವ್ಯಕ್ತಪಡಿಸಿದ್ದು ಕೇವಲ ಅಂದಾಜು ನಷ್ಟ. ಎರಡನೆಯದಾಗಿ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ಆಲಕ್ಷಿಸಿ ಮೋದಿಯವರ ಏಕವೇವ ದಾರ್ಷ್ಟ್ಯತನದ ಅರ್ಥಾತ್ ಏಕವ್ಯಕ್ತಿಯ ನಿರಂಕುಶ ನಿರ್ಧಾರದ ಮೂಲಕ ನೋಟು ಅಮಾನ್ಯಗೊಳಿಸಿ, ದೇಶ ಈ ಕಷ್ಟ ನಷ್ಟ ಅನುಭವಿಸಿದೆ.

ಮೂರನೆಯದಾಗಿ ಇದು ಕೇವಲ ಆರ್ಥಿಕ ನಷ್ಟ ಮಾತ್ರವಲ್ಲ ನೋಟು ಅಮಾನ್ಯ ಬಳಿಕ ಪ್ರಥಮ 3 ತಿಂಗಳುಗಳಲ್ಲಿ 200ಕ್ಕೂ ಅಮಾಯಕ ಜನ ಸರದಿ ಸಾಲಲ್ಲಿ ನಿಂತು ಜೀವತ್ತೆತ್ತರು. ಸಾವಿರಾರು ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು, ಕಟ್ಟಡ ನಿರ್ಮಾಣ ಸಂಸ್ಥೆಗಳು ಬಾಗಿಲು ಮುಚ್ಚುವಂತಾಗಿ ಲಕ್ಷಾಂತರ ಜನ ನಿರುದ್ಯೋಗಿಗಳಾದರು. ಇನ್ನಷ್ಟು ಜಿಡಿಪಿ ನಷ್ಟದ ಒತ್ತಡದಿಂದ ಪಾರಾಗಲು ಮೋದಿ ಸರಕಾರ ರಿಸರ್ವ್ ಬ್ಯಾಂಕ್ ಮೇಲೆ ಒತ್ತಡ ಹೇರಿ ಈವರೆಗಿನ ಜಿಡಿಪಿ ಲೆಕ್ಕಾಚಾರದ ವಿಧಾನ ಬದಲಾಯಿಸದೆ ಹಳೆ ವಿಧಾನದಲ್ಲೇ ಮಾಡುತ್ತಿದ್ದರೆ ಮೇಲಿನ ನಷ್ಟದ ಪ್ರಮಾಣ ಶೇ. 5.7ರಿಂದ ಶೇ.4ಕ್ಕೆ ಇಳಿಯುತ್ತಿತ್ತು ಎಂದು ನುರಿತ ಅರ್ಥಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಷ್ಟ ನಷ್ಟ ಅನುಭವಿಸಿದ ಜನ ಮೋದಿ ಮತ್ತು ಅವರ ಪಕ್ಷ ಹಾಗೂ ಸರಕಾರವನ್ನು ಅಗತ್ಯವಾಗಿ ಪ್ರಶ್ನಿಸಲೇ ಬೇಕಾದ ಸಂದರ್ಭ ಇದು ಪ್ರಶ್ನೆ ಏನೆಂದರೆ. ಸಿಎಜಿ ಅಂದಾಜಿತ ತರಂಗಾಂತರ ವಿತರಣಾ ಆದಾಯ ನಷ್ಟ ಒಂದು ಬೃಹತ್ ಹಗರಣ ಆಗುವುದಾದರೆ, ರಿಸರ್ವ ಬ್ಯಾಂಕ್ ಘೋಷಿತ ಅಗಾಧ ಜಿಡಿಪಿ ನಷ್ಟ ಕೂಡ ಒಂದು ಬೃಹತ್ ಕರ್ಮಕಾಂಡ ಆಗಿಲ್ಲ ಏಕೆ? ಈ ಮೇಲಿನಂತೆ ಜನತೆಗೆ ಅಪಾರ ಸಾವು -ನೋವು, ಕಷ್ಟ-ನಷ್ಟ ಉಂಟು ಮಾಡಿದ್ದೇ ಅಲ್ಲದೆ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಅಗಾಧ ಪ್ರಮಾಣದ ನಷ್ಟ ಉಂಟು ಮಾಡಿದ ಅಪರಾಧಕ್ಕೆ ಮೋದಿ ಮತ್ತು ಸರಕಾರದಲ್ಲಿನ ಅವರ ಸಹಪಾಠಿಗಳ ವಿರುದ್ಧ ಏಕೆ ದಾವೆ ಹೂಡಬಾರದು? 

Writer - ಎಸ್. ವಿ. ಅಮೀನ್

contributor

Editor - ಎಸ್. ವಿ. ಅಮೀನ್

contributor

Similar News