ತೊಗಾಡಿಯಾ ಮೇಲೆ ಆರೆಸ್ಸೆಸ್ ತೂಗುಗತ್ತಿ

Update: 2018-01-20 04:52 GMT

ಹೊಸದಿಲ್ಲಿ, ಜ. 20: ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವರಿಷ್ಠರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಿದ್ದ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಮತ್ತು ಭಾರತೀಯ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ವೃಜೇಶ್ ಉಪಾಧ್ಯಾಯ ಅವರನ್ನು ಪದಚ್ಯುತಗೊಳಿಸಲು ಆರೆಸ್ಸೆಸ್ ಚಿಂತನೆ ನಡೆಸಿದೆ.

ವಿಶ್ವಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಅಧ್ಯಕ್ಷ ರಾಘವ ರೆಡ್ಡಿ ಕೂಡಾ ಆರೆಸ್ಸೆಸ್‌ನ ಸಂಭಾವ್ಯ ಪದಚ್ಯುತರ ಪಟ್ಟಿಯಲ್ಲಿ ಸೇರಿದ್ದಾರೆ. ಈ ಮೂವರು ತಮ್ಮದೇ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುವ ಮೂಲಕ ಸರ್ಕಾರಕ್ಕೆ ಮುಜುಗರ ತರುತ್ತಿದ್ದಾರೆ ಎಂಬ ಬಗ್ಗೆ ಆರೆಸ್ಸೆಸ್ ಮುಖಂಡರು ಕೆಂಗಣ್ಣು ಬೀರಿದ್ದಾರೆ ಎನ್ನಲಾಗಿದೆ.

ಸಂಘದ ಸಿದ್ಧಾಂತವನ್ನು ಪ್ರಚಾರಪಡಿಸುವಲ್ಲಿ ತಳಮಟ್ಟದ ಈ ಎರಡು ಸಂಘಟನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎನ್ನುವುದು ಕೂಡಾ ಆರೆಸ್ಸೆಸ್ ಅಭಿಪ್ರಾಯವಾಗಿದೆ.

ಫೆಬ್ರವರಿ ಕೊನೆಯ ಒಳಗಾಗಿ ವಿಎಚ್‌ಪಿ ಆಡಳಿತ ಮಂಡಳಿ ಸಭೆ ನಡೆಯಲಿದೆ. ಇದರಲ್ಲಿ ಹೊಸ ಅಧ್ಯಕ್ಷರ ಆಯ್ಕೆಯ ಬಗ್ಗೆ ಒತ್ತಡ ತರಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

ರೆಡ್ಡಿ ಹಾಗೂ ತೊಗಾಡಿಯಾ ಸೇರಿದಂತೆ ಅವರ ಬೆಂಬಲಿಗರನ್ನು ಬದಲಿಸುವುದು ಇದರ ಉದ್ದೇಶ. ಸಂಘ ಪರಿವಾರದ ಅತ್ಯುನ್ನತ ನೀತಿ ನಿರ್ಧಾರಕ ಸಂಸ್ಥೆಯಾಗಿರುವ ಪ್ರತಿನಿಧಿ ಸಭಾ ಮರ್ಚ್‌ನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ವಿಎಚ್‌ಪಿಯ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News