ಇಥಿಯೋಪಿಯ ಅಥ್ಲೀಟ್‌ಗಳ ಪ್ರಾಬಲ್ಯ

Update: 2018-01-21 18:04 GMT

ಮುಂಬೈ, ಜ.21: ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಓಟದಲ್ಲಿ ಇಥಿಯೋಪಿಯದ ಸೊಲೊಮೊನ್ ಡೆಕ್‌ಸಿಸಾ ಹಾಗೂ ಅಮಾನೆ ಗೊಬೆನಾ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ.

ರವಿವಾರ ನಡೆದ 405,000 ಯುಎಸ್ ಡಾಲರ್ ಬಹುಮಾನ ಮೊತ್ತದ ಮ್ಯಾರಥಾನ್‌ನಲ್ಲಿ 22ರ ಹರೆಯದ ಡೆಕ್‌ಸಿಸಾ 42 ಕಿ.ಮೀ.ದೂರವನ್ನು 2 ಗಂಟೆ, 9 ನಿಮಿಷ, 34 ಸೆಕೆಂಡ್‌ನಲ್ಲಿ ಕ್ರಮಿಸಿದರು. ಈ ಮೂಲಕ ತಮ್ಮದೇ ದೇಶದ 29ರ ಹರೆಯದ ಸಹ ಆಟಗಾರ ಶುಮೆಟ್ ಅಕಾಲ್‌ನಾವ್‌ರನ್ನು(2:10.00)ಎರಡನೇ ಸ್ಥಾನಕ್ಕೆ ತಳ್ಳಿದರು. ಕಳೆದ ವರ್ಷ ಎರಡನೇ ಸ್ಥಾನ ಪಡೆದಿದ್ದ ಕೀನ್ಯದ ಜೊಶುವಾ ಕಿಪ್ಕೊರಿರ್ (2:10:30) ಮೂರನೇ ಸ್ಥಾನ ಪಡೆದರು.

ಮಹಿಳೆಯರ ಮ್ಯಾರಥಾನ್‌ನಲ್ಲಿ ಇಥಿಯೋಪಿಯದ ಗೊಬೆನಾ 2:25:49 ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ ಚಾಂಪಿಯನ್ ಎನಿಸಿಕೊಂಡರು. ಹಾಲಿ ಚಾಂಪಿಯನ್ ಕೀನ್ಯದ ಬೊರ್ನೆಸ್ ಕಿತೂರ್(2:28:48)ಎರಡನೇ ಸ್ಥಾನ ಪಡೆದರು. ಇಥಿಯೋಪಿಯದ ಇನ್ನೋರ್ವ ಆಟಗಾರ್ತಿ ಶುಮೊ ಜೆನೆಮೊ(2:29:41)ಮೂರನೇ ಸ್ಥಾನ ಪಡೆದಿದ್ದಾರೆ.

 ಪುರುಷ ಹಾಗೂ ಮಹಿಳಾ ವಿಭಾಗದ ಪೂರ್ಣ ಮ್ಯಾರಥಾನ್ ವಿನ್ನರ್‌ಗಳು ತಲಾ 42,000 ಡಾಲರ್ ಬಹುಮಾನ ಪಡೆದಿದ್ದಾರೆ. 2016ರ ಎಪ್ರಿಲ್‌ನಲ್ಲಿ ರೂಟರ್‌ಡಮ್ ಮ್ಯಾರಥಾನ್‌ನಲ್ಲಿ 2:06:22 ಸೆಕೆಂಡ್‌ನಲ್ಲಿ ಗುರಿ ತಲುಪಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದ ಡೆಕ್‌ಸಿಸಾ ಮುಂಬೈ ಮ್ಯಾರಥಾನ್‌ನಲ್ಲಿ ಆರನೇ ಶ್ರೇಷ್ಠ ಸಮಯದಲ್ಲಿ ಗುರಿ ತಲುಪಿದರು.

ಭಾರತೀಯ ಪುರುಷ ಓಟಗಾರರಲ್ಲಿ ಗೋಪಿ ಥೋನಕಲ್(2:16:51) ಹಾಗೂ ಆರ್ಮಿಯ ನಿತೇಂದ್ರ ಸಿಂಗ್ ರಾವತ್(2:16:54) ಕ್ರಮವಾಗಿ 11ನೇ ಹಾಗೂ 12ನೇ ಸ್ಥಾನ ಪಡೆದರು.

ಸುಧಾ ಸಿಂಗ್(2:48:32), ಜ್ಯೋತಿ ಗಾವ್ಟೆ(2:50:47) ಹಾಗೂ ಪಾರುಲ್ ಚೌಧರಿ(2:50:47) ಭಾರತದ ಮಹಿಳಾ ಓಟಗಾರ್ತಿಯರಲ್ಲಿ ಅಗ್ರ-3 ಸ್ಥಾನ ಪಡೆದರು.

ಪ್ರದೀಪ್ ಸಿಂಗ್(1:05:42ಸೆ.)ಪುರುಷರ ಹಾಫ್ ಮ್ಯಾರಥಾನ್‌ನಲ್ಲಿ ಪ್ರಶಸ್ತಿ ಜಯಿಸಿದರು. ಮಹಿಳಾ ಹಾಫ್ ಮ್ಯಾರಥಾನ್‌ನಲ್ಲಿ ಸಂಜೀವನಿ ಜಾಧವ್ ಮೊದಲ ಸ್ಥಾನ(1:26:24)ಪಡೆದರೆ, ಮೋನಿಕಾ ಅಥಾರೆ(1:27:15) ಹಾಗೂ ಜುಮಾ ಖತುನ್(1:27:48) ಎರಡು ಹಾಗೂ ಮೂರನೇ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News