ಭಾರತದ ಶೇ.73ರಷ್ಟು ಸಂಪತ್ತು ಯಾರ ಕೈಯಲ್ಲಿದೆ ಗೊತ್ತೇ?

Update: 2018-01-22 06:25 GMT

ದಾವೋಸ್, ಜ.22: ಕಳೆದ ವರ್ಷ ಭಾರತದಲ್ಲಿ ಉತ್ಪಾದನೆಯಾದ ಶೇ.73ರಷ್ಟು ಸಂಪತ್ತು ಶೇ.1ರಷ್ಟಿರುವ ಶ್ರೀಮಂತರ ಪಾಲಾಗಿದೆ ಎಂದು ಬಡತನ ನಿರ್ಮೂಲನೆಯ ಉದ್ದೇಶವನ್ನಿಟ್ಟುಕೊಂಡ ಹಲವಾರು ಸಂಘಟನೆಗಳ ಜಾಗತಿಕ ಒಕ್ಕೂಟ ಆಕ್ಸ್‌ಫಾಮ್ ಸಮೀಕ್ಷೆಯಿಂದ ತಿಳಿದು ಬಂದಿದೆ.

ಭಾರತದ ಅತ್ಯಂತ ಬಡವರ ಪೈಕಿ ಅರ್ಧದಷ್ಟು ಜನಸಂಖ್ಯೆ ಅಂದರೆ 67 ಕೋಟಿ ಭಾರತೀಯರ ಸಂಪತ್ತು ಇದೇ ಅವಧಿಯಲ್ಲಿ ಕೇವಲ ಶೇ.1ರಷ್ಟು ಏರಿಕೆ ಆಗಿದೆ ಎಂದು ಸಮೀಕ್ಷೆ ಕಂಡುಕೊಂಡಿದೆ. ದಾವೋಸ್ ನಗರದಲ್ಲಿ ಆರಂಭಗೊಳ್ಳಿರುವ ವರ್ಲ್ಡ್ ಇಕನಾಮಿಕ್ ಫೋರಂ ವಾರ್ಷಿಕ ಅಧಿವೇಶನದ ಮುನ್ನ ಈ ಸಮೀಕ್ಷೆಯ ವರದಿ ಹೊರಬಿದ್ದಿದೆ.

2017ರಲ್ಲಿ ಭಾರತದ ಶೇ.1ರಷ್ಟಿರುವ ಶ್ರೀಮಂತರ ಆದಾಯ ರೂ. 20.9 ಲಕ್ಷ ಕೋಟಿಗೂ ಮಿಗಿಲಾಗಿದ್ದು, ಇದು 2017-18ರ ಭಾರತದ ಒಟ್ಟು ಬಜೆಟ್ ಗೆ ಸಮನಾಗಿದೆ ಎಂದು ಆಕ್ಸ್‌ಫಾಮ್ ಹೇಳಿದೆ.

ಕಳೆದ ಬಾರಿಯ ಸಮೀಕ್ಷೆಯಲ್ಲಿ ದೇಶದ ಶೇ.58ರಷ್ಟು ಸಂಪತ್ತು ಶೇ 1ರಷ್ಟಿರುವ ಶ್ರೀಮಂತರ ಪಾಲಾಗಿದೆ ಎಂದು ತಿಳಿದು ಬಂದಿತ್ತು. ಜಾಗತಿಕವಾಗಿ ಶೇ 50ರಷ್ಟು ಸಂಪತ್ತು ಶ್ರೀಮಂತರ ಪಾಲಾಗಿತ್ತೆಂದು ಕಳೆದ ಬಾರಿಯ ಸಮೀಕ್ಷೆ ತಿಳಿಸಿತ್ತು.

ಜಾಗತಿಕ ಮಟ್ಟದಲ್ಲಿ ಹೇಳುವುದಾದರೆ ಶೇ.82ರಷ್ಟು ಸಂಪತ್ತು ಶೇ.1ರಷ್ಟು ಜನರ ಪಾಲಾಗಿದ್ದರೆ, ಜಗತ್ತಿನಾದ್ಯಂತ 3.7 ಬಿಲಿಯನ್ ಬಡ ಜನತೆಯ ಸಂಪತ್ತಿನಲ್ಲಿ ಏನೂ ಏರಿಕೆ ದಾಖಲಾಗಿಲ್ಲ.

''ರಿವಾರ್ಡ್ ವರ್ಕ್, ನಾಟ್ ವೆಲ್ತ್'' ಎಂಬ ಹೆಸರಿನ ಈ ಸಮೀಕ್ಷೆಯ ಪ್ರಕಾರ 2017ರಲ್ಲಿ ಜಾಗತಿಕ ಮಟ್ಟದಲ್ಲಿ ಬಿಲಿಯಾಧಿಪತಿಗಳ ಸಂಖ್ಯೆ ಭಾರೀ ಏರಿಕೆ ಕಂಡಿತ್ತು. ಅವರ ಸಂಪತ್ತು ಕೂಡ 2010ರಿಂದ ಪ್ರತಿ ವರ್ಷ ಶೇ.13ರಷ್ಟು ಏರಿಕೆ ಕಂಡಿತ್ತಲ್ಲದೆ, ಇದು ಸಾಮಾನ್ಯರ ಆದಾಯಕ್ಕಿಂತ ಆರು ಪಟ್ಟು ವೇಗದಲ್ಲಿ ಏರಿಕೆಯಾಗಿದೆ. ಜನಸಾಮಾನ್ಯರ ಸಂಪತ್ತು ವಾರ್ಷಿಕ ಸರಾಸರಿ ಶೇ.2ರಷ್ಟು ಹೆಚ್ಚಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಭಾರತದಲ್ಲಿ ಕನಿಷ್ಠ ವೇತನ ಪಡೆಯುವ ಕಾರ್ಮಿಕನೊಬ್ಬ ದೊಡ್ಡ ಅಧಿಕಾರಿ ಪಡೆಯುವಂತಹ ವೇತನ ಪಡೆಯಬೇಕಾದರೆ ಇನ್ನೂ 941 ವರ್ಷಗಳು ಬೇಕು ಎಂದು ವರದಿ ಹೇಳಿದೆ. ಅಮೆರಿಕದಲ್ಲಿ ಸಿಇಒ ಒಬ್ಬ ಅಲ್ಲಿನ ಸಾಮಾನ್ಯ ಕಾರ್ಮಿಕನೊಬ್ಬ ವರ್ಷವೊಂದರಲ್ಲಿ ಪಡೆಯುವ ವೇತನವನ್ನು ಒಂದು ದಿನ ಹಾಗೂ ಅದಕ್ಕಿಂತ ಸ್ವಲ್ಪ ಹೆಚ್ಚಿನ ಸಮಯದಲ್ಲಿಯೇ ಪಡೆಯುತ್ತಾನೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News