ಬದುಕಿನ ಮೌಲ್ಯಗಳನ್ನು ವೈಚಾರಿಕವಾಗಿ ಕಟ್ಟಿದವರು ಶರಣರು: ಸೂರಿಪ್ರಭು

Update: 2018-01-22 11:38 GMT

ಚಿಕ್ಕಮಗಳೂರು, ಜ.22: ಬದುಕಿನ ಮೌಲ್ಯಗಳನ್ನು ಪ್ರಜ್ಞಾಪೂರಕವಾಗಿ, ವೈಚಾರಿಕವಾಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನುಡಿದಂತೆ ನಡೆದವರು ಶರಣರು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸೂರಿಪ್ರಭು ಹೇಳಿದರು. 

ಅವರು ನಗರದ ಶರಣ ಸಾಹಿತ್ಯ ಪರಿಷತ್ ಕಛೇರಿಯಲ್ಲಿ ನಡೆದ ಶಸಾಪ ತಾಲೂಕಿನ ನೂತನ ಅಧ್ಯಕ್ಷರ ಪದವಿ ಸ್ವೀಕಾರ ಸಭೆಯಲ್ಲಿ ಮಾತನಾಡಿದರು. ಪರಿಷತ್ತು ಜೀವಪರವಾದ ಬರೀ ಮಾತುಗಳನ್ನಾಡದೇ ಅದರಂತೆ ಬದುಕುವುದನ್ನು ಕೂಡ ಶ್ರೀ ಸಾಮಾನ್ಯರ ನಡುವೆ ಪ್ರಚುರಪಡಿಸುತ್ತವೆ ಎಂದರು. 

ವಚನ ಸಾಹಿತ್ಯದ ಪ್ರಚಾರ, ಪ್ರಸಾರ ಜೊತೆಗೆ ಗೋಷ್ಠಿಗಳನ್ನು ಏರ್ಪಡಿಸುವ ಮೂಲಕ ಶರಣರು ಹೇಳಿರುವ ಬದುಕಿನ ಮೌಲ್ಯಗಳನ್ನು ಪ್ರಚಾರ ಮಾಡಿ ಒಳ್ಳೆಯ ಸುಸ್ತಿರ ಸಮಾಜವನ್ನು ಕಟ್ಟುವ ಸದುದ್ದೇಶ ಶರಣ ಸಾಹಿತ್ಯ ಪರಿಷತ್ತಿನದ್ದಾಗಿದೆ. ಇಂದು ಮನುಷ್ಯ ಸಣ್ಣ ಸಣ್ಣ ವಿಚಾರಗಳಿಗೆ ವಿವೇಕವನ್ನು ಕಳೆದುಕೊಳ್ಳುತ್ತಿರುವುದರಿಂದ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ಒಳ್ಳೆಯ ವ್ಯಕ್ತಿಗಳು ನಿರ್ಮಾಣವಾಗುವುದರ ಮೂಲಕ ಒಂದು ಒಳ್ಳೆಯ ಸಮಾಜ ನಿರ್ಮಾಣ ಆಗಬೇಕೆಂದು ಆಶಿಸಿದರು. 

ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷ ಎಸ್.ಎಂ.ಲೋಕೇಶಪ್ಪ ಮಾತನಾಡಿ, ಪರಿಷತ್ತಿನ ಆಶಯಗಳಿಗೆ ಧಕ್ಕೆ ಬರದ ಹಾಗೆ ಎಲ್ಲಾ ಸಮ ಸಮಾಜದ ನಿರ್ಮಾಣವನ್ನು ಮಾಡುವುದರ ಜೊತೆಗೆ ಪರಿಷತ್ತಿನ ಆಶಯಗಳನ್ನು ಈಡೇರಿಸುವುದು, ವಚನ ಸಾಹಿತ್ಯ ಪ್ರಚಾರ ಮಾಡುವುದು, ಸಮ್ಮೇಳನ ನಡೆಸುವ ಕಡೆ ಗಮನ ಹರಿಸುತ್ತೇವೆ ಎಂದು ಹೇಳಿದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಮಲ್ಲೇಶಪ್ಪನವರು ಶರಣ ಸಾಹಿತ್ಯ ಪರಿಷತ್ತು ಒಳ್ಳೆಯ ಕೆಲಸವನ್ನು ಮಾಡುತ್ತಿದೆ. ಸಮಾಜದಲ್ಲಿ ಯುವಕರಿಗೆ ಸರಿದಾರಿ ತೋರುವ ವಿಚಾರಗೋಷ್ಠಿಗಳು, ಚರ್ಚೆಗಳು ನಡೆಯಬೇಕು, ಸದ್ಗುಣಗಳನ್ನು ಬೆಳೆಸುವುದರ ಮೂಲಕ ಸಮಾಜವನ್ನು ಕಟ್ಟಬೇಕು ಎಂದರು. 

ಅಧ್ಯಕ್ಷತೆ ವಹಿಸಿದ ಬಿ.ಆರ್.ಜಗದೀಶ್ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತು ಇತ್ತೀಚೆಗೆ ಒಳ್ಳೆಯ ಚಟುವಟಿಕೆಗಳನ್ನು ನಡೆಸುತ್ತಿದ್ದು, ಶರಣರ ಆಶಯಗಳನ್ನು ಗ್ರಾಮಗಳಿಗೆ, ನಗರಗಳಿಗೆ ಕೊಂಡೊಯ್ಯಬೇಕು, ಆ ಮೂಲಕ ಜನರಿಗೆ ಸತ್ಯದ ಬದುಕಿನ ದಾರಿಯನ್ನು ತೋರಬೇಕು ಎಂದು ಆಶಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ರವೀಶ್‍ಕ್ಯಾತನಬೀಡು, ಬಾಣೂರು ಚನ್ನಪ್ಪ, ಮಂಜುನಾಥ್ ಹುಲಿಕೆರೆ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News