ಅನಂತ್ ಕುಮಾರ್ ಹೆಗಡೆ ದಿನೇದಿನೇ ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ: ಡಿ. ಬಸವರಾಜ್

Update: 2018-01-22 17:00 GMT

ದಾವಣಗೆರೆ,ಜ.22: ದೇಶ ಜನಸಂಖ್ಯೆಯಲ್ಲಿ ಸುಮಾರು 70 ಕೋಟಿ ಯುವ ಜನರಿದ್ದಾರೆ. ಅವರಿಗೆ ಉದ್ಯೋಗ ಸೃಷ್ಟಿಸುವ ಕೆಲಸ ಮಾಡುವುದನ್ನು ಬಿಟ್ಟು ಸಚಿವ ಹೆಗಡೆ ವಿವಾದಗಳಲ್ಲಿಯೇ ಮುಳುಗಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಮಾತನಾಡಿದ ಅವರು, ಕೌಶಲ್ಯಾಭಿವೃದ್ದಿ ನಿಗಮದ ಮಹತ್ವದ ಖಾತೆ ಹೊಂದಿರುವ ಸಚಿವ ಅನಂತ್ ಕುಮಾರ್ ಹೆಗಡೆ ಸದಾ ಒಂದಿಲ್ಲೊಂದು ವಿವಾದದಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಅವರು ಸಭಾ ಕಾರ್ಯಕ್ರಮಗಳಲ್ಲಿ ನೀಡುವ ಹೇಳಿಕೆ ಅವರ ವ್ಯಕ್ತಿತ್ವ ಬಿಂಬಿಸುತ್ತದೆ. ಮಹತ್ವದ ಖಾತೆಗೆ ನೀರಿಲ್ಲದ ಬಾವಿ ಎಂದು ತಮ್ಮ ಖಾತೆ ಕುರಿತು ಹೇಳಿರುವುದು ದುರಂತ. ಸಂವಿಧಾನ ಬದಲಾಯಿಸುವುದಾಗಿ ಹೇಳಿಕೆ ನೀಡುತ್ತಾರೆ. ಇನ್ನು ಇದನ್ನು ಪ್ರತಿಭಟಿಸಿದವರನ್ನು ಬೀದಿ ನಾಯಿಗಳು ಎನ್ನುತ್ತಾರೆ. ಒಟ್ಟಾರೆ ಇವರ ನಡವಳಿಕೆಯೇ ಖಂಡನೀಯ ಎಂದರು.

ಅವರು ದಿನೇದಿನೇ ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ಯಾವ ಸಭೆಯಲ್ಲಿಯೂ ಒಳ್ಳೆಯ ಮಾತನಾಡುತ್ತಿಲ್ಲ. ಆದರೆ, ಇವರ ಈ ಹೇಳಿಕೆಗಳನ್ನು ಬಿಜೆಪಿ ಮುಖಂಡರು ನಿಯಂತ್ರಿಸುತ್ತಿಲ್ಲ. ಪ್ರಧಾನಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಈ ರೀತಿ ಸುಮ್ಮನಿರುವುದನ್ನು ಗಮನಿಸಿದರೆ ಹೆಗೆಡೆಯ ಹೇಳಿಕೆಗೆ ಬಿಜೆಪಿಯವರ ಹಾಗೂ ಪ್ರಧಾನಿಯವರ ಸಮ್ಮತಿ ಇರುವ ಹಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಲ್ಲಾವಲ್ಲಿ ಘಾಜಿಖಾನ್, ಕೆ.ಜಿ.ರೆಹಮತ್ ವುಲ್ಲಾ, ಲಿಯಾಖತ್ ಅಲಿ, ಮೈನುದ್ದೀನ್, ನೂರು ಅಹ್ಮದ್, ಅಶ್ರಫ್ ಅಲಿ, ಸಿ.ಆರ್. ಮಹಮದ್ ರಫೀಕ್, ಡಿ.ಶಿವಕುಮಾರ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News