‘ಬಂದ್’ಗಳ ಉದ್ದೇಶ ಈಡೇರುತ್ತಿದೆಯೇ?

Update: 2018-01-23 05:00 GMT

ರಾಜ್ಯ ಮತ್ತು ರಾಷ್ಟ್ರದಲ್ಲಿ ಅನೇಕ ಸಂದರ್ಭ ಸನ್ನಿವೇಶಗಳಲ್ಲಿ ಪ್ರತಿರೋಧದ ನೆಲೆಯಲ್ಲಿ ಉದ್ದಿಶ್ಶಪೂರ್ವಕವಾದ ಗುರಿಯನ್ನು ತಲುಪಿ ಜನರಲ್ಲಿ ಜಾಗೃತಿಯನ್ನು ಹುಟ್ಟಿಸಿ ಸಮಾಜದಲ್ಲಿ ಆರೋಗ್ಯಯುತವಾದ ವಾತಾವರಣವನ್ನು ನಿರ್ಮಿಸಲು ‘ಬಂದ್’ ಎಂಬ ಅಸ್ತ್ರವನ್ನು ಬಳಸಲು ಜನತೆಗೆ ಈ ರಾಷ್ಟ್ರದ ಸಂವಿಧಾನ ನೀಡಿದೆ. ಪ್ರಜಾಸತ್ತಾತ್ಮಕವಾದ ವ್ಯವಸ್ಥೆಯಲ್ಲಿ ಇದು ಒಂದು ತನ್ನದೇ ಬಲವನ್ನು ಹೊಂದಿ ಕೊಂಡು ಹಳಿ ತಪ್ಪಿದ ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿ ಯಶಸ್ಸನ್ನು ಅನೇಕ ಸಂದರ್ಭಗಳಲ್ಲಿ ಪಡೆದಿದೆಯೆಂಬುದು ನಿಸ್ಸಂದೇಹವಾದ ಮಾತು.

ವ್ಯವಸ್ಥೆಯ ಒಳಗಿದ್ದುಕೊಂಡೇ ಪ್ರಭುತ್ವದ ವಿರುದ್ಧ ಬಳಸಬಹುದಾದ ಈ ಅಸ್ತ್ರ ಸಾಕಷ್ಟು ಮಟ್ಟಿಗೆ ಬಹುಜನರ ಪರವಾದ ನಿಲುವನ್ನು ವ್ಯಕ್ತಪಡಿಸುತ್ತದೆ. ನಿಜವಾದ ಪ್ರಜಾಪ್ರಭುತ್ವದ ಅಂತಃಸ್ಸತ್ತ್ವವಿದು. ಉಳಿದ ವ್ಯವಸ್ಥೆಯಲ್ಲಿ ಇದು ಸಾಧ್ಯವಾಗದ ಮಾತು. ಪ್ರತಿರೋಧವೇ ಇಲ್ಲದ ಪ್ರಭುತ್ವ ಹಾದಿ ತಪ್ಪುತ್ತದೆಯೆಂಬುದನ್ನು ಚರಿತ್ರೆಯಲ್ಲಿ ಕಾಣಲು ಸಾಧ್ಯವಿದೆ. ತನ್ನ ಅಸ್ತಿತ್ವಕ್ಕೆ ಎರವಾದ ಜನತೆಯನ್ನು ಪ್ರಭುತ್ವ ಸದಾಕಾಲ ಎಚ್ಚರದಲ್ಲೂ ಪ್ರೀತಿಯಲ್ಲೂ ಜತನದಲ್ಲೂ ನೋಡಿಕೊಳ್ಳಬೇಕಾದ ಅಗತ್ಯವನ್ನೂ ಅವಶ್ಯವನ್ನೂ ಇದು ತೋರಿಸುತ್ತದೆ. ಸಾಮೂಹಿಕ ಬಂದ್ ಆಚರಣೆಗೆ ಆಸ್ಪದವೀಯದಂತೆ ಪ್ರಭುತ್ವ ಆಡಳಿತ ನಿರ್ವಹಣೆ ಮಾಡಬೇಕಾದುದು ಕರ್ತವ್ಯವಾಗಿದೆ. ಇದು ಸಮಷ್ಟಿಯ ಚಿಂತನೆಯ ಮೂಲ.

ಒಂದು ರಾಷ್ಟ್ರದ ಒಟ್ಟೂ ಗತಿಯಲ್ಲಿ ಯಾವುದೇ ರಾಜಕೀಯ ಪಕ್ಷದ ಸರಕಾರ ಅಧಿಕಾರಕ್ಕೆ ಬಂದಾಗ ಜನಹಿತವನ್ನು ಬಯಸಿ ಜಾರಿಗೆ ತರುವ ಕಾಯ್ದೆ ಕಾನೂನುಗಳು ಜನತೆಯಲ್ಲಿ ಹುಟ್ಟಿಸಬಹುದಾದ ಅಭಿಪ್ರಾಯ ಮತ್ತು ಅನಿಸಿಕೆಯನ್ನು ಅವಲಂಬಿಸಿ ಅದು ಯಶಸ್ವಿಯಾಗುತ್ತದೆ. ಈ ಅಭಿಪ್ರಾಯ ಮತ್ತು ಅನಿಸಿಕೆಗಳು ಮಾಧ್ಯಮಗಳು ಬಿತ್ತರಿಸುವ ವರದಿಯನ್ನು ಅವಲಂಬಿಸಿಯೂ ಇರುತ್ತದೆ. ರಾಜಕೀಯ ಚಿಂತಕರು, ವಿಶ್ಲೇಷಕರು ವ್ಯಕ್ತಪಡಿಸುವ ಪ್ರತಿಕ್ರಿಯೆಯೂ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜನತೆಯಲ್ಲಿ ಹುಟ್ಟುವ ಚಿಂತನೆಗಳಿಗೆ ಮೂಲ ಇದೂ ಒಂದು ಕಾರಣ. ಇವು ಸಮೂಹಸನ್ನಿಯ ರೂಪದಲ್ಲಿ ನೇತ್ಯಾತ್ಮಕವಾದ ಪರಿಣಾಮವನ್ನೂ, ಸಕಾರಾತ್ಮಕ ಸ್ಪಂದನೆಯನ್ನೂ ನೀಡಬಲ್ಲುದು. ಕೊನೆಯಲ್ಲಿ ಇದರ ಪರಿಣಾಮ ಗೊತ್ತಾಗುವುದು ಜನತೆ ಹೇಗೆ ಸ್ವೀಕರಿಸಿತು ಅಥವಾ ಪ್ರತಿಕ್ರಿಯಿಸಿತು ಎಂಬುದರ ಮೇಲೆಯೇ. ಆದ್ದರಿಂದ ಬಂದ್ ಎಂಬುದು ಅತೀ ಮಹತ್ವವಾದ ಮೌಲ್ಯವನ್ನು ಪ್ರಜಾಪ್ರಭುತ್ವದಲ್ಲಿ ಹೊಂದಿದೆ.

ಯಾವುದೋ ಸಂಘಟನೆಗಳ, ಸಂಸ್ಥೆಗಳ, ಕೋಮುಗಳ, ಜಾತಿಗಳ ವಿರುದ್ಧ ಪ್ರತಿಭಟಿಸುವಾಗಲೂ ಜನತೆ ಬಂದ್‌ಗೆ ಇರುವ ಪ್ರಜಾಪ್ರಭುತ್ವದ ಮಿತಿಗಳನ್ನು ದಾಟಬಾರದು ಎಂಬ ಎಚ್ಚರದಲ್ಲೇ ಬಂದ್ ಆಚರಣೆ ಮಾಡಬೇಕು. ಬಂದ್ ಆಚರಣೆಯ ಎಲ್ಲಾ ಸಾಧ್ಯತೆಗಳನ್ನು ಜನತೆ ಅರ್ಥೈಸಿಕೊಂಡಿರಬೇಕು. ಸಂಘಟನೆಗಳು ಬಂದ್‌ಗೆ ಕರೆ ಕೊಟ್ಟಾಗ ಆಗುವ ಅನುಭವಗಳು ಬೇರೆ, ರಾಜಕೀಯ ಪಕ್ಷಗಳು ಕರೆ ಕೊಟ್ಟಾಗ ಅನುಭವಗಳು ಬೇರೆ, ಜನಸಮುದಾಯವೇ ಕರೆ ಕೊಟ್ಟಾಗ ಆಗುವ ಅನುಭವಗಳು ಬೇರೆ, ವ್ಯಕ್ತಿಯೊಬ್ಬ ತನ್ನ ಪ್ರಭಾವ ಬಳಸಿ ಬಂದ್ ಆಚರಿಸಿದಾಗ ಆಗುವ ಅನುಭವಗಳು ಬೇರೆ. ಸರಕಾರದ ವಿರುದ್ಧ ವಿರೋಧಪಕ್ಷಗಳು ಬಂದ್‌ಗೆ ಕರೆಕೊಟ್ಟಾಗ ಜನತೆಯೂ ಸೇರಿಕೊಳ್ಳುವುದು ಸಹಜವಾದುದು.

ಬಹುಸಂಖ್ಯೆಯ ಜನತೆ ಬಂದ್‌ಗೆ ಇಳಿದಾಗ ಅದರಲ್ಲಿ ಭಾಗಿಯಾದ ಎಲ್ಲರಿಗೂ ಆ ಬಂದ್‌ನ ಉದ್ದೇಶ ಮತ್ತು ಗುರಿಯ ಬಗ್ಗೆ ಗೊತ್ತಿರುವುದಿಲ್ಲ. ಆಗ ಬಂದ್ ಸಾಗಬೇಕಾದ ದಾರಿಯಲ್ಲಿ ಸಾಗದೆ ಹಿಂಸೆಯ ರೂಪಕ್ಕಿಳಿಯುತ್ತದೆ. ಶಾಲೆಗಳನ್ನು ಮುಚ್ಚಿಸುವುದು, ಅಂಗಡಿ ಮಳಿಗೆಗಳ ಲೂಟಿ, ಸಾರ್ವಜನಿಕ ವಸ್ತುಗಳ ನಾಶ, ಚಿನ್ನ, ಬೆಳ್ಳಿ ಮುಂತಾದ ಅಮೂಲ್ಯವಾದ ವಸ್ತುಗಳ ಅಪಹರಣ, ಕೊಲೆ, ಮನೆಗಳ ದರೋಡೆ, ಬ್ಯಾಂಕ್ ಎಟಿಎಂಗಳ ಲೂಟಿ, ವೈಯಕ್ತಿಕ ಸೇಡಿನ ಪ್ರತೀಕಾರ, ಯಾವ ಕಾರಣವೂ ಇಲ್ಲದೆ ಬೆಂಕಿ ಹಚ್ಚುವುದು, ಟೈರ್‌ಗಳನ್ನು ಸುಟ್ಟು ವಾಯುಮಾಲಿನ್ಯಕ್ಕೆ ಕಾರಣವಾಗುವುದು, ನಿತ್ಯದ ಬದುಕು ಅಲ್ಲೋಲ ಕಲ್ಲೋಲವಾಗುವಂತೆ ಪರಿಸ್ಥಿತಿಯನ್ನು ಹದಗೆಡಿಸುವುದು ಇತ್ಯಾದಿ.

 ಕೊಲೆ, ಸುಲಿಗೆಗಳಿಗೆ ಅವಕಾಶವೀಯುವ ಸಾಧ್ಯತೆಗಳಿಗೆ ಇಂಬು ನೀಡುತ್ತಿರುವ ವರ್ತಮಾನದ ಬಂದ್‌ಗಳು ಅದರ ಮೂಲ ಉದ್ದೇಶದಲ್ಲಿ ಯಾವ ನೈತಿಕತೆಯನ್ನೂ ಹೊಂದದೆ ದಾರಿತಪ್ಪಿದ ಸಂದರ್ಭಗಳನ್ನೇ ನೋಡುತ್ತಿದ್ದೇವೆ. ಅನೇಕ ಸಂದರ್ಭಗಳಲ್ಲಿ ಇಂಥ ಬಂದ್‌ಗಳು ಕೋಮುಗಲಭೆಗಳಾಗಿ ಮಾರ್ಪಟ್ಟು ತನ್ನ ಮೂಲೋದ್ದೇಶವನ್ನೇ ಮರೆತು ಇನ್ಯಾವುದೋ ತೀರಲಾರದ ಸಮಸ್ಯೆಗಳನ್ನು ಹುಟ್ಟಿಸಿದುದನ್ನು ನಾವು ನೋಡುತ್ತಿದ್ದೇವೆ. ಸರಕಾರ ತನ್ನ ಪೊಲೀಸ್ ಪಡೆಯನ್ನು ಬಳಸಿ ಇಂಥವುಗಳನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗುತ್ತವೆ. ಜನತೆಯ ನಿತ್ಯದ ಬದುಕಿಗೆ ಸ್ಪಂದಿಸುವ ಇರಾದೆ ಸರಕಾರಕ್ಕೆ ಇರುವುದಕ್ಕಿಂತ ಹೆಚ್ಚಾಗಿ ತನಗೆ ಹುಟ್ಟಿಕೊಂಡ ವಿರೋಧದ ಅಲೆಯನ್ನು ಸದೆಬಡಿಯುವ ಹುನ್ನಾರವೇ ಹೆಚ್ಚಾಗಿರುತ್ತದೆ. ಅಲ್ಲಿಗೆ ಬಂದ್ ಆಚರಣೆಯ ಹಿನ್ನೆಲೆ ಮತ್ತು ಸರಕಾರ ಕೈಗೊಳ್ಳುವ ನಿಲುವು ಎರಡೂ ಅರ್ಥಹೀನವಾಗುತ್ತಿರುವುದೇ ಇಂದಿನ ದಿನಮಾನಗಳಲ್ಲಿ ಹೆಚ್ಚುತ್ತಿದೆ.

ಹಾಳಾದುದನ್ನು ಸರಿಪಡಿಸಲು ಸರಕಾರ ಜನತೆಯ ಹಣವನ್ನೇ ಬಳಸುತ್ತದೆಂಬ ಅರಿವು ಇಂಥ ಬಂದ್ ಘೋಷಣೆ ಕೂಗುವವರ ಮನಸ್ಸಿನವರಿಗೆ ಇರುವುದಿಲ್ಲ. ಯಾರ ಅಥವಾ ಯಾವುದರ ವಿರುದ್ಧ ಹಾಗೂ ಹೇಗೆ ಬಂದ್ ಆಚರಿಸಬೇಕು ಎಂದು ಗೊತ್ತಿಲ್ಲದವರು ಬಂದ್‌ಗೆ ಕರೆ ಕೊಟ್ಟಾಗ ಇಂಥ ಅವಘಡಗಳು, ದುರಂತಗಳು ಸಂಭವಿಸುತ್ತವೆ. ಪ್ರಸ್ತುತ ರಾಷ್ಟ್ರದಲ್ಲಿ ಆಚರಿಸಲ್ಪಡುತ್ತಿರುವ ಹೆಚ್ಚಿನ ಬಂದ್‌ಗಳಿಗೆ ಯಾವ ನಿರ್ದಿಷ್ಟ ಗುರಿಗಳಿರದೆ ಒಟ್ಟಾರೆ ದೊಂಬಿ ಎಬ್ಬಿಸಿ ಅದರಲ್ಲೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಮನಸ್ಥಿತಿಗಳೇ ತುಂಬಿವೆ. ನಿತ್ಯವೂ ತಮ್ಮ ಪಾಡಿಗೆ ತಾವು ಬದುಕುತ್ತಾ ರಾಜಕೀಯದ ಯಾವ ಗೊಂದಲಗಳಿಗೂ ಕಿವಿಗೊಡದ, ದೈನಂದಿನ ಜೀವನದಲ್ಲೇ ಹೈರಾಣಾಗುವವರಲ್ಲಿ ಇಂಥ ಬಂದ್ ಆಚರಣೆಗಳು ಯಾವ ಅರ್ಥವನ್ನೂ ಪಡೆದುಕೊಂಡಿರುವುದಿಲ್ಲ. ಇವರ ಭಾಗಿತ್ವಕ್ಕೂ ಯಾವ ಅರ್ಥವಿರುವುದಿಲ್ಲ. ಪ್ರಭುತ್ವದ ಕಣ್ಣಲ್ಲಿ ಇವರು ನಗಣ್ಯರಾಗಿ ಬಿಡುತ್ತಾರೆ. ಆದ್ದರಿಂದ ಬಂದ್ ಹುಟ್ಟಿಸಬಹುದಾದ ಅನಾಹುತಗಳನ್ನು ಲಕ್ಷವಿರಿಸಿಕೊಂಡು ಅದಕ್ಕೊಂದು ನಿರ್ದಿಷ್ಟ ರೂಪದ ಕಾನೂನುಬದ್ಧ ವಿನ್ಯಾಸವನ್ನು ಎಲ್ಲಾ ರಾಜಕೀಯ ಪಕ್ಷಗಳು ಇಚ್ಛಾಶಕ್ತಿಯಿಂದ ರೂಪಿಸಬೇಕಿದೆ. ಇಲ್ಲವಾದಲ್ಲಿ ಸಂಬಂಧಪಟ್ಟ ಕಾನೂನಿನಿಂದ ಪರಿಹರಿಸಬಹುದಾದ ಸಣ್ಣಸಣ್ಣ ಸಂಗತಿಗಳಿಗೂ, ವಿಷಯಗಳಿಗೂ ಬಂದ್‌ಗೆ ಕರೆಕೊಟ್ಟು ಜನರ ಬದುಕನ್ನೇ ಅದ್ವಾನಗೊಳಿಸುವುದರಿಂದ ಮುಕ್ತಿ ಸಿಗಲಾರದು.

Writer - ಟಿ. ದೇವಿದಾಸ್

contributor

Editor - ಟಿ. ದೇವಿದಾಸ್

contributor

Similar News