ದೇಶದ ಹೊಸ ವಿಶ್ವದರ್ಜೆ ರೈಲಿನ ವಿಶೇಷತೆಗಳೇನು ಗೊತ್ತೇ ?

Update: 2018-01-23 04:13 GMT
ಸಾಂದರ್ಭಿಕ ಚಿತ್ರ

ಚೆನ್ನೈ, ಜ. 23: ಭಾರತೀಯ ರೈಲ್ವೆ ಬದಲಾವಣೆಗೆ ತೆರೆದುಕೊಂಡಿದೆ. ಮುಂದಿನ ವರ್ಷದ ಜೂನ್ ವೇಳೆಗೆ ಎರಡು ವಿಶ್ವದರ್ಜೆಯ ರೈಲುಗಳನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಈ ಅರೆ ಹೈಸ್ಪೀಡ್ ರೈಲು ಸ್ವಯಂಚಾಲಿತ ಇಂಧನ ವ್ಯವಸ್ಥೆಯನ್ನು ಹೊಂದಿದ್ದು, ಇದು ಪ್ರಯಾಣದ ವೇಳೆಯನ್ನು ಕನಿಷ್ಠ ಶೇಕಡ 20ರಷ್ಟು ಕಡಿಮೆ ಮಾಡಲಿದೆ.

ಲೋಕೊ ಇಂಜಿನ್ ಚಾಲಿತ ರೈಲುಗಳಿಗಿಂತ ಕ್ಷಿಪ್ರವಾಗಿ ವೇಗವರ್ಧನೆಗೆ ಮತ್ತು ವೇಗ ಇಳಿಕೆಗೆ ಇದು ಸಹಕಾರಿಯಾಗಲಿದ್ದು, ರೈಲು ಪ್ರಯಾಣ ಅವಧಿ ಕಡಿತಗೊಳಿಸುವಲ್ಲಿ ಇದು ನೆರವಾಗಲಿದೆ. ಚೆನ್ನೈ ಮೂಲದ ರೈಲ್ವೆಯ ಇಂಟಗ್ರಲ್ ಕೋಚ್ ಫ್ಯಾಕ್ಟರಿ ಇದನ್ನು ವಿನ್ಯಾಸಗೊಳಿಸಿದ್ದು, ಪ್ರಪ್ರಥಮ ಸಂಪೂರ್ಣ ಹವಾನಿಯಂತ್ರಿತ 16 ಬೋಗಿಗಳ ರೈಲು 2018ರ ಜೂನ್ ಒಳಗಾಗಿ ನಿರ್ಮಾಣವಾಗಲಿವೆ.

ಟ್ರೈನ್-18 ಹೆಸರಿನ ಈ ರೈಲು ವಿಶ್ವದರ್ಜೆ ಪ್ರಯಾಣಿಕ ಸೌಕರ್ಯಗಳನ್ನು ಹೊಂದಿದ್ದು, ವೈ-ಫೈ ಹಾಗೂ ಮಾಹಿತಿ ಮನೋರಂಜನಾ ವ್ಯವಸ್ಥೆ, ಜಿಪಿಎಸ್, ಆಧರಿತ ಪ್ರಯಾಣಿಕ ಮಾಹಿತಿ ವ್ಯವಸ್ಥೆ ಹಾಗೂ ಎಲ್‌ಇಡಿ ಬೆಳಕಿನ ವ್ಯವಸ್ಥೆ ಹಾಗೂ ಆಕರ್ಷಕ ಒಳಾಂಗಣ ವಿನ್ಯಾಸವನ್ನು ಹೊಂದಿದೆ.

ಇದು ಏರೊಡೈನಾಮಿಕ್ ನೋಸ್ ಹೊಂದಿದ್ದು, ಇದು ರೈಲಿನ ಸೌಂದರ್ಯವ್ನನು ಹೆಚ್ಚಿಸಲಿದೆ. ಪ್ರಸ್ತುತ ಇರುವ ಎಲೈಟ್ ಕ್ಲಾಸ್ ಶತಾಬ್ದಿ ರೈಲಿನ ಬದಲು ಹೊಸ ರೈಲು ಹಳಿಗೆ ಇಳಿಯಲಿದೆ.

ಟ್ರೈನ್-20 ಹೆಸರಿನ ಇನ್ನೊಂದು ವಿನೂತನ ರೈಲನ್ನು 2020ರ ವೇಳೆಗೆ ಪರಿಚಯಿಸಲು ಕೂಡಾ ಭಾರತೀಯ ರೈಲ್ವೆ ಸಿದ್ಧತೆ ಮಾಡಿಕೊಂಡಿದೆ. ವಿಶ್ವ ದರ್ಜೆಯ ಸೌಕರ್ಯಗಳನ್ನು ಒಳಗೊಂಡ ಈ ರೈಲು ಕೂಡಾ ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ ಪರ್ಯಾಯವಾಗಿ ಬರಲಿದೆ. ಐಸಿಎಫ್‌ನ ಮೇಕ್ ಇನ್ ಇಂಡಿಯಾ ಯೋಜನೆಯಡಿ ಇದನ್ನು ರೂಪಿಸಲಾಗುತ್ತಿದೆ. ಇದು ಆಮದು ರೈಲಿನ ಅರ್ಧದಷ್ಟು ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಟ್ರೈನ್-18 ಸ್ಟೀಲ್ ಬಾಡಿ ಹೊಂದಿದ್ದರೆ, ಟ್ರೈನ್-20 ಅಲ್ಯೂಮೀನಿಯಂ ಬಾಡಿ ಹೊಂದಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News