ಲಾಭದಾಯಕ ಹುದ್ದೆ ಹೊಂದಿದ ಮಧ್ಯ ಪ್ರದೇಶದ 116 ಬಿಜೆಪಿ ಶಾಸಕರನ್ನು ಅನರ್ಹಗೊಳಿಸಿ: ಆಪ್

Update: 2018-01-23 07:01 GMT

ಹೊಸದಿಲ್ಲಿ, ಜ. 23: ದಿಲ್ಲಿಯ 20 ಮಂದಿ ಆಪ್ ಶಾಸಕರು ಲಾಭದಾಯಕ ಹುದ್ದೆಗಳನ್ನು ಹೊಂದಿದ್ದಾರೆಂಬ ಕಾರಣಕ್ಕೆ ಅವರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ಮಾಡಿರುವ ಶಿಫಾರಸಿಗೆ ರಾಷ್ಟ್ರಪತಿ ಒಪ್ಪಿಗೆ ಸೂಚಿಸಿದ ಕೆಲವೇ ದಿನಗಳಲ್ಲಿ ಆಮ್ ಆದ್ಮಿ ಪಕ್ಷವು ಮಧ್ಯ ಪ್ರದೇಶದ 116 ಬಿಜೆಪಿ ಶಾಸಕರ ವಿರುದ್ಧ ಇಂತಹುದೇ ಆರೋಪ ಹೊರಿಸಿ ಅವರನ್ನು ಅನರ್ಹಗೊಳಿಸಬೇಕೆಂದು ಆಗ್ರಹಿಸಿದೆ.

ಪಕ್ಷವು ಈ ನಿಟ್ಟಿನಲ್ಲಿ ಒಂದೂವರೆ ವರ್ಷದ ಹಿಂದೆಯೇ ಬೇಡಿಕೆ ಮುಂದಿಟ್ಟಿದ್ದರೂ ಚುನಾವಣಾ ಆಯೋಗ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಪ್ ಮಧ್ಯಪ್ರದೇಶ ಘಟಕದ ಸಂಚಾಲಕ ಅಲೋಕ್ ಅಗರ್ವಾಲ್ ಹೇಳಿದ್ದಾರೆ. ಈ ವಿಚಾರವನ್ನು ಈಗ ಮತ್ತೊಮ್ಮೆ ಮಧ್ಯ ಪ್ರದೇಶದ ಹೊಸದಾಗಿ ನೇಮಕಗೊಂಡ ರಾಜ್ಯಪಾಲರ ಗಮನಕ್ಕೆ ತರಲಾಗುವುದು. ಈ ವಿಚಾರವನ್ನು ಆದ್ಯತೆಯ ಮೇಲೆ ಪರಿಗಣಿಸುವಂತೆ ಕೋರಲಾಗುವುದು ಎಂದು ಅವರು ಹೇಳಿದ್ದಾರೆ.

ಮಧ್ಯ ಪ್ರದೇಶದಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಪಾರಸ್ ಜೈನ್ ಹಾಗೂ ದೀಪಕ್ ಜೋಶಿ ಎಂಬ ಇಬ್ಬರು ಬಿಜೆಪಿ ಶಾಸಕರು ಲಾಭದಾಯಕ ಹುದ್ದೆ ಹೊಂದಿ ದ್ದಾರೆಂದು ಆರೋಪಿಸಿದ ಅಗರ್ವಾಲ್, ದೇಶದಲ್ಲಿ ಬಿಜೆಪಿ ಆಡಳಿತದ ರಾಜ್ಯಗಳಿಗೆ ಹಾಗೂ ಇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ಪ್ರತ್ಯೇಕ ಕಾನೂನು ಇದ್ದಂತಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News