ಮಹಿಳೆಯನ್ನು ಕಾರಿನಿಂದ ಹೊರಗೆಳೆದು ಪತಿಯ ಮುಂದೆಯೇ ಅತ್ಯಾಚಾರಗೈದ ದುಷ್ಕರ್ಮಿಗಳು

Update: 2018-01-23 06:57 GMT

ಗುರ್ಗಾಂವ್, ಜ.23: ಕಾರಿನಿಂದ ಮಹಿಳೆಯೊಬ್ಬರನ್ನು ಹೊರಗೆಳೆದು ಬಂದೂಕಿನ ಮೂಲಕ ಆಕೆಯ ಪತಿ ಹಾಗು ಸಂಬಂಧಿಕನನ್ನು ಬೆದರಿಸಿ ಅವರ ಎದುರಲ್ಲೇ ಆಕೆಯನ್ನು ಅತ್ಯಾಚಾರಗೈದ ಘಟನೆ ಗುರ್ಗಾಂವ್ ನಲ್ಲಿ ನಡೆದಿದೆ.

ಹರ್ಯಾಣದ ಸರಣಿ ಅತ್ಯಾಚಾರ ಪ್ರಕರಣಗಳ ನಂತರ ನಡೆಯುತ್ತಿರುವ ಮತ್ತೊಂದು ಭೀಕರ ಘಟನೆ ಇದಾಗಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಹಿಳೆಯ ಕುಟುಂಬ ಕಾರಿನಲ್ಲಿ ಹಿಂದಿರುಗುತ್ತಿತ್ತು. ಇಲ್ಲಿನ ಬ್ಯುಸಿನೆಸ್ ಪಾರ್ಕ್ ಟವರ್ ಬಳಿ ಕಾರನ್ನು ನಿಲ್ಲಿಸಿ ಮಹಿಳೆಯ ಪತಿ ಶೌಚಾಲಯಕ್ಕೆ ತೆರಳಿದ್ದರು. ಇವರ ಕಾರಿನ ಸಮೀಪದಲ್ಲಿ ಇನ್ನೆರಡು ಕಾರುಗಳು ನಿಂತಿದ್ದು, ಅದರಲ್ಲಿದ್ದ ಮದ್ಯಪಾನ ಮಾಡಿದ ನಾಲ್ವರು ಮಹಿಳೆಯ ಪತಿಯ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.

ಇದೇ ಸಂದರ್ಭ ಕಾರಿನಲ್ಲಿ ಮಹಿಳೆ ಇರುವುದನ್ನು ಗಮನಿಸಿದ ಒಬ್ಬಾತ ಆಕೆಯನ್ನು ಕಾರಿನಿಂದ ಹೊರಗೆಳೆದು ಪಕ್ಕದ ಪೊದೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂದರ್ಭ ಇತರ ಮೂವರು ಪತಿ ಹಾಗು ಸಂಬಂಧಿಕನ ತಲೆಗೆ ಬಂದೂಕು ಇಟ್ಟು ಬೆದರಿಸಿದ್ದರು ಎನ್ನಲಾಗಿದೆ.

ಸ್ಥಳದಿಂದ ಪರಾರಿಯಾಗುದಕ್ಕೂ ಮುನ್ನ ಈ ತಂಡ ಪೊಲೀಸರಿಗೆ ದೂರು ನೀಡದಂತೆ ಬೆದರಿಸಿತ್ತು, ಆದರೆ ಮಹಿಳೆಯ ಪತಿ ಕಾರಿನ ರಿಜಿಸ್ಟ್ರೇಶನ್ ನಂಬರನ್ನು ಗುರುತಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

ಇದೇ ದೂರಿನ ಆಧಾರದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News