ಸಮುದಾಯ ಭವನಗಳು ಶೈಕ್ಷಣಿಕ ಚಟುವಟಿಕೆಗಳ ಮೂಲಕ ಅಧ್ಯಯನ ಕೇಂದ್ರಗಳಾಗಬೇಕು: ಶಾಸಕ ನರೇಂದ್ರ

Update: 2018-01-23 11:38 GMT

ಹನೂರು,ಜ.23: ಸಮುದಾಯ ಭವನಗಳು ಕೇವಲ ಸಭೇ ಸಮಾರಂಭಗಳಿಗೆ ಮಾತ್ರ ಸೀಮಿತವಾಗಿರದೇ ಸದಾ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಅಧ್ಯಯನ ಕೇಂದ್ರಗಳಾಗಬೇಕು ಎಂದು ಶಾಸಕ ನರೇಂದ್ರ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿ 10 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಬಾಬು ಜಗಜೀವನ ರಾಂ ಸಮುದಾಯ ಭವನದ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯ ಭವನಗಳು ಕೇವಲ ಮದುವೆ ಇನ್ನಿತರ ಸಭೆ ಸಮಾರಂಭಗಳಿಗೆ ಸೀಮಿತವಾಗಿರಸದೆ ಪ್ರತಿನಿತ್ಯ ಶೈಕ್ಷಣಿಕ ಚಟುವಟಿಕೆಗಳ ತಾಣವಾಗಿರಬೇಕು. ಪ್ರತಿ ಸಮುದಾಯ ಭವನದಲ್ಲೂ ಒಂದು ಮಿನಿ ಗ್ರಂಥಾಲಯಗಳನ್ನು ಸ್ಥಾಪಿಸಬೇಕು. ಜೊತೆಗೆ ಒಂದೆರೆಡು ದಿನಪತ್ರಿಕೆಗಳನ್ನು ಹಾಕಿಸಿ ಸದಾ ಚಟುವಟಿಕೆಯಿಂದ ಕೂಡಿರುವಂತಿರಬೇಕು. ಅಲ್ಲದೆ ಶಾಲೆಗಳಿಗೆ ತೆರಳುವ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಉತ್ತಮ ವಾತಾವರಣ ನಿರ್ಮಿಸಬೇಕು. ಆಗ ಮಾತ್ರ ಸರ್ಕಾರದ ಆಶಯಗಳು ಈಡೇರುತ್ತವೆ ಎಂದು ತಿಳಿಸಿದರು.

ಮೇಲುಸ್ತುವಾರಿ ಸಮಿತಿ ರಚಿಸಿ: ಪ್ರತಿ ಸಮುದಾಯ ಭವನಕ್ಕೂ ಆಯಾ ಗ್ರಾಮದ ಮುಖಂಡರುಗಳ ಒಂದು ಸಮಿತಿಯನ್ನು ರಚನೆ ಮಾಡಬೇಕು. ಈ ಸಮಿತಿ ಪ್ರತಿ ಸಮಾರಂಭಕ್ಕೆ ಒಂದಿಷ್ಟು ಕನಿಷ್ಠ ಮೊತ್ತವನ್ನು ನಿಗದಿಗೊಳಿಸಿ ಆ ಹಣವನ್ನು ಸಮುದಾಯ ಭವನದ ವಿದ್ಯುತ್ ಬಿಲ್, ಸ್ವಚ್ಛತಾ ಕಾರ್ಯ, ಆಗಾಗ ಬಣ್ಣ ಬಳಿಯುವ ಕಾರ್ಯಗಳಿಗೆ ಒಳಕೆ ಮಾಡಿಕೊಂಡು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ಸಮುದಾಯ ಭವನಕ್ಕೆ ಅಗತ್ಯವಾದ ಶೌಚಾಲಯ, ಅಡುಗೆ ಕೋಣೆ ನಿರ್ಮಾಣ ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ನರೇಂದ್ರ ಮುಂದಿನ ದಿನಗಳಲ್ಲಿ ಅನುದಾನ ಕೊಡಿಸುವ ಭರವಸೆ ನೀಡಿದರು.

ಸ್ಮಶಾನಕ್ಕೆ ರಸ್ತೆ ಸೌಕರ್ಯ ಕಲ್ಪಿಸಿ: ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಗ್ರಾಮದ ಸ್ಮಶಾನಕ್ಕೆ ತೆರಳುವ ರಸ್ತೆಯು ತೀರಾ ಇಳಿಜಾರಿನಿಂದ ಕೂಡಿದೆ. ಇದರಿಂದಾಗಿ ಯಾರಾದರೂ ಮೃತಪಟ್ಟಲ್ಲಿ ಮೃತದೇಹ ಹೊತ್ತು ತೆರಳಲು ಅಡಚಣೆಯಾಗುತ್ತಿದೆ. ಆದುದರಿಂದ ಕೂಡಲೇ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು. ಬಳಿಕ ಶಾಸಕ ನರೇಂದ್ರ ಮಾತನಾಡಿ ಕ್ರಮ ವಹಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷ ರಾಜು, ಸದಸ್ಯರಾದ ಸುಮತಿ, ಗ್ರಾ.ಪಂ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷೆ ಚಿತ್ರಾ, ಸದಸ್ಯರಾದ ಗೋವಿಂದರಾಜು, ಸಿದ್ಧರಾಜು, ನಿರ್ಮಿತಿ ಕೇಂದ್ರದ ಅಭಿಯಂತರ ಪ್ರತಾಪ್ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News