ಚಿಕ್ಕಮಗಳೂರು: ಸಚಿವ ಹೆಗಡೆ ವಿರುದ್ದ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಕಾರ್ಯಕರ್ತರ ಪ್ರತಿಭಟನೆ

Update: 2018-01-23 11:43 GMT

ಚಿಕ್ಕಮಗಳೂರು, ಜ.23: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯರನ್ನು ತಕ್ಷಣ ಸಚಿವ ಸಂಪುಟದಿಂದ ವಜಾಗೊಳಿಸಲು ಒತ್ತಾಯಿಸಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಕಾರ್ಯಕರ್ತರು ಮಂಗಳವಾರ ನಗರದ ಆಜಾದ್‍ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಪಾರ್ಲಿಮೆಂಟ್‍ನ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಅನಂತಕುಮಾರ್ ತಾವು ಚುನಾಯಿತನಾಗಲು ಅನುಕೂಲ ಕಲ್ಪಿಸಿದ ಸಂವಿದಾನಕ್ಕೆ ಅಪಚಾರ ಎಸಗುತ್ತಿದ್ದಾರೆ. ಸಂವಿಧಾನ ಬದಲಿಸಲು ತಾವು ಬಂದಿರುವುದಾಗಿ ಹೇಳಿ, ಸಂವಿಧಾನಕ್ಕೆ ಧಕ್ಕೆಯಾಗುವ ಮಾದರಿಯಲ್ಲಿ ಜನರ ಭಾವನೆಗಳನ್ನು ಕದಡುತ್ತಿದ್ದಾರೆ. ಅವರು ಚುನಾಯಿತ ಸಂಸದರಾಗಿ ಉಳಿಯಲು ಅನರ್ಹರಾಗಿದ್ದಾರೆ. ಚುನಾಯಿತ ಜನಪ್ರತಿನಿಧಿ ಹೇಗಿರಬೇಕೋ ಹಾಗೆ ಅನಂತಕುಮಾರ್ ಇಲ್ಲ ಎಂದು ಆರೋಫಿಸಿದ್ದಾರೆ.

ಪಾರ್ಲಿಮೆಂಟಿನಲ್ಲಿ ಹಿಂದೆ ಈ ವಿಚಾರದಲ್ಲಿ ಸಂಸತ್ತಿನಲ್ಲಿ ಒಮ್ಮೆ ಕ್ಷಮೆ ಯಾಚಿಸಿದ್ದಾರೆ. ಪುನಃ ವಿವಿಧ ವೇದಿಕೆಗಳಲ್ಲಿ ನಿಂತು ಭಾಷಣ ಮಾಡುವಾಗ ಪರಿಶಿಷ್ಟರ ಜಾತಿಯ ಹೋರಾಟಗಾರರು ನಿಜವಾದ ಹೋರಾಟಗಾರರಲ್ಲ ಎಂದು ಜಾತಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. 

ಇದಲ್ಲದೆ ಸಾಮರಸ್ಯಕ್ಕೆ ಧಕ್ಕೆಯಾಗುವಂತಹ ಹೇಳಿಕೆ ನೀಡಿ ಜನರನ್ನು ಕೆರಳಿಸುತ್ತಿದ್ದಾರೆ. ಜನಪ್ರತಿನಿಧಿಯಾದವರು ಸಮಾಜದ ಸ್ವಾಸ್ಥ್ಯ ಕಾಪಾಡುವತ್ತ ಹೆಜ್ಜೆ ಇಡಬೇಕೇ ಹೊರತು ಸಾಮರಸ್ಯ ಕದಡುವಂತೆ ಮಾಡುವುದಲ್ಲ. ಆದ್ದರಿಂದ ಅನಂತ ಕುಮಾರ್‍ರನ್ನು ತಕ್ಷಣ ಅವರ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಎಂ.ಸಿ.ಹೂವಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್, ರೈತ ವಿಭಾಗದ ಅಕ್ಮಲ್, ಪುಟ್ಟಸ್ವಾಮಿ, ಶಿವಾನಂದಸ್ವಾಮಿ ಮತ್ತಿತರರು ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News