ಬಿಜೆಪಿಯವರು ಖಾಲಿ ಬುಟ್ಟಿ ಹಿಡಿದುಕೊಂಡು ಪುಂಗಿ ಊದುತ್ತಿದ್ದಾರೆ: ಸಿಎಂ ಸಿದ್ಧರಾಮಯ್ಯ

Update: 2018-01-23 14:03 GMT

ಮೈಸೂರು,ಜ.23: ಬಿಜೆಪಿಯವರು ಈಗಾಗಲೇ ಚುನಾವಣೆಯನ್ನು ಸೋತಾಗಿದೆ. ಪರಿಣಾಮ ಹತಾಶರಾಗಿ ಏನೇನೊ ಹೇಳುತ್ತಿದ್ದಾರೆ. ಸುಳ್ಳಿನ ಸರಮಾಲೆಗಳನ್ನು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮೈಸೂರು ನಗರದ ಚಾಮರಾಜ ವಿಧಾನಸಭಾ ಕ್ಷೇತ್ರ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ ಅವರು, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಿಜೆಪಿಯವರು ಖಾಲಿ ಬುಟ್ಟಿಯನ್ನು ಹಿಡಿದುಕೊಂಡು ಒಳಗೆ ಹಾವಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಯಡಿಯೂರಪ್ಪ ಮಹಾನ್ ಸುಳ್ಳುಗಾರ. ಇವತ್ತಿನವರೆಗೆ ಒಂದೇ ಒಂದು ಸತ್ಯವನ್ನು ಯಡಿಯೂರಪ್ಪ ಹೇಳಿಲ್ಲ. ಖಾಲಿ ಬುಟ್ಟಿಯನ್ನು ಹಿಡಿದುಕೊಂಡು ಪುಂಗಿ ಊದುತ್ತಿದ್ದಾರೆ. ನನ್ನ ಮೇಲೆ 67 ಕೇಸ್‍ಗಳಿವೆ ಎಂದು ಹೇಳುವ ಇವರಿಗೆ ಕಾನೂನಿನ ಜ್ಞಾನ ಇಲ್ಲ. ಅಮಿತ್ ಶಾ ಕೂಡಾ ಸುಳ್ಳು ಹೇಳುವುದರಲ್ಲಿ ನಿಸ್ಸೀಮ. ಅವರಿಗೂ ಒಳ್ಳೆಯ ಚಾರಿತ್ರ್ಯ ಇಲ್ಲ ಎಂದು ಹರಿಹಾಯ್ದರು.

ಬಿಜೆಪಿಯವರಿಗೆ ಇರುವ ಅಜ್ಞಾನಕ್ಕೆ ನಗಬೇಕೋ ಅಳಬೇಕೊ ಗೊತ್ತಿಲ್ಲ. ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ನಾವು ಚಿತಾವಣೆ ನೀಡಿದ್ದೇವೆ ಎಂದು ಹೇಳುತ್ತಿರುವುದು ಸರಿಯಲ್ಲ. ಈ ಹಿಂದೆ ನಡೆದ ಅಮಿತ್ ಶಾ ಕಾರ್ಯಕ್ರಮಕ್ಕೆ ಜನ ಸೇರಿರಲಿಲ್ಲ. ಹಾಗಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು. 

ಸಂವಿಧಾನದಲ್ಲಿ ಈ ರೀತಿ ಎಲ್ಲಾದರೂ ಹೇಳಿದ್ದಾರಾ ? ಸಂವಿಧಾನವನ್ನು ಓದಿಕೊಳ್ಳಬೇಕಲ್ಲವೇ ? ಬಿ.ಎಸ್.ಯಡಿಯೂರಪ್ಪ ಅವರಿಗೆ ಇದು ಯಾವ ಸಂವಿಧಾನದಲ್ಲಿ ಹೇಳಿದೆಯಂತೆ. ಕಳೆದ ಬಾರಿ ಜಗದೀಶ ಶೆಟ್ಟರ್ ಬಜೆಟ್ ಮಂಡಿಸಿದರಲ್ಲಾ ಅದಕ್ಕೇನೂ ಹೇಳುತ್ತೀರಿ ಎಂದ ಸಿಎಂ, ಯಡಿಯೂರಪ್ಪ ಕೆಜೆಪಿ ಪಕ್ಷದಲ್ಲಿದ್ದಾಗ ಜಗದೀಶ್ ಶೆಟ್ಟರ್ ಭ್ರಷ್ಟ ಮುಖ್ಯಮಂತ್ರಿ, ಬಿಜೆಪಿಯನ್ನು ಮುಗಿಸುವುದೇ ನನ್ನ ಉದ್ದೇಶ ಎಂದು ಹೇಳಿದ್ದರು. ಹಾಗೆ ಬಿಜೆಪಿಯವರು ಈಗಾಗಲೇ ಚುನಾವಣೆಯಲ್ಲಿ ಸೋತು ಬಿಟ್ಟಿದ್ದಾರೆ. ಹಾಗಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನನ್ನ ಮೇಲೆ ಕೇಸ್ ಇದ್ದರೆ ಕೋರ್ಟ್ ಗೆ ಹೋಗಲಿ. ಸುಮ್ಮನೆ ಪುಂಗಿ ಊದುತ್ತಾರೆ ಎಂದರು.

ಆಡಳಿತಾತ್ಮಕ ದೃಷ್ಠಿಯಿಂದ ವರ್ಗಾವಣೆ: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಆಡಳಿತಾತ್ಮಕ ದೃಷ್ಠಿಯಿಂದ ವರ್ಗಾವಣೆ ಮಾಡಲಾಗಿದೆ.  ವರ್ಗಾವಣೆಗೆ ಚುನಾವಣಾ ಆಯೋಗ ತಡೆಯಾಜ್ಞೆ ನೀಡಿರುವುದು ನನಗೆ ಗೊತ್ತಿಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಯಾಗದೆ ವರ್ಗಾವಣೆಗೆ ತಡೆಯಾಜ್ಞೆ ನೀಡಲು ಹೇಗೆ ಸಾಧ್ಯ? ಇದು ಹಸ್ತಕ್ಷೇಪವಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಕಳಲೆ ಕೇಶವಮೂರ್ತಿ, ಜಿಲ್ಲಾಧಿಕಾರಿ ಡಿ.ರಂದೀಪ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ವಸ್ತುಪ್ರಧರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು ಕೆಪಿಸಿಸಿ ಸದಸ್ಯ ಅಕ್ಬರ್, ಮುಡಾ ಸದಸ್ಯ ಶಿವಮಾದು ಸೇರಿದಂತೆ ಹಲವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News