ಕೆ.ಎಸ್.ಓ ಮಾನ್ಯತೆ ನವೀಕರಣಕ್ಕೆ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಲಿ: ಪ್ರೊ.ಕೆ.ಎಸ್.ಭಗವಾನ್ ಒತ್ತಾಯ

Update: 2018-01-23 14:21 GMT

ಮೈಸೂರು,ಜ.23: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಇನ್-ಹೌಸ್ ಕೋರ್ಸ್ ಗಳಿಗೆ ಕೂಡಲೇ ಮಾನ್ಯತೆ ನೀಡುವ ಮೂಲಕ ಡೋಲಾಯಮಾನದಲ್ಲಿರುವ 3 ಲಕ್ಷ ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಬೇಕೆಂದು ಪ್ರಗತಿಪರ ಚಿಂತರಾದ ಪ್ರೋ.ಹಿ.ಶಿರಾಮಚಂದ್ರೇಗೌಡ, ಪ್ರೋ.ಕೆ.ಎಸ್.ಭಗವಾನ್, ಕೆ.ಎಸ್.ಶಿವರಾಮು ಹಾಗೂ ನೊಂದ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್, ನವೀಕರಣಕ್ಕೆ ಸಂಬಂಧಿಸಿದ ಷರತ್ತುಗಳನ್ನು ಈಗಾಗಲೇ ದಾಖಲೆ ಸಮೇತ ಯುಜಿಸಿಗೆ ಪೂರೈಸಲಾಗಿದೆ. ಅಲ್ಲದೇ ರಾಜ್ಯ ಉಚ್ಚನ್ಯಾಯಾಲಯವು ಎರಡು ವಾರಗಳಲ್ಲಿ ಮಾನ್ಯತೆ ನವೀಕರಿಸಬೇಕೆಂದು ಸ್ಪಷ್ಟ ಆದೇಶ ನೀಡಿದೆ, ಹೀಗಿದ್ದರೂ ನ್ಯಾಯಾಲದ ಆದೇಶವನ್ನು ತಿರಸ್ಕರಿಸಿ ಯುಜಿಸಿ ಸಂಪೂರ್ಣ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಕಿಡಿಕಾರಿ, ವಿಷಯಕ್ಕೆ ಸಂಬಂಧವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸಿ ಕೇಂದ್ರ ಶಿಕ್ಷಣ ಸಚಿವರಿಗೆ ಆದೇಶ ನೀಡಬೇಕೆಂದು ಒತ್ತಾಯಿಸಿದರು

ಕೆ.ಎಸ್.ಓ.ಯು ಸಿಂಡಿಕೇಟ್ ಸದಸ್ಯ ಕೆ.ಎಸ್.ಶಿವರಾಮು ಮಾತನಾಡಿ, ಎಬಿವಿಪಿಯು ರಾಜಧಾನಿ ಬೆಂಗಳೂರಿನಲ್ಲಿ ಕಳೆದ ತಿಂಗಳು ನಡೆಸಿದ ಪ್ರತಿಭಟನೆ ವೇಳೆಯಲ್ಲಿ ಕೆಎಸ್‍ಓಯುಗೆ ಯುಜಿಸಿ ಮಾನ್ಯತೆ ನೀಡಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ನೊಂದ ವಿದ್ಯಾರ್ಥಿಗಳಿಗೆ ನೀಡಿದ ಆಶ್ವಾಸನೆ, ಭರವಸೆಯನ್ನು ದೆಹಲಿಗೆ ಹೋದ ನಂತರ ಮರೆತಿದ್ದು, ಅವರೊಬ್ಬ ಸುಳ್ಳುಗಾರ ಎಂದು ದೂರಿ, ವಿಶ್ವವಿದ್ಯಾಲಯದ ತಾಂತ್ರಿಕ ವಿಷಯಗಳನ್ನು ಹೊರತುಪಡಿಸಿ ಇನ್-ಹೌಸ್ ವಿಷಯಗಳಿಗೆ ಯುಜಿಸಿ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ವಿಷಯವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಸಂಬಂದಿಸಿದವರೊಂದಿಗೆ ಸಂವಾದ ನಡೆಸಿ ಕೂಲಂಕುಷ ಪರಿಶೀಲನೆ ನಡೆಸಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಒಗ್ಗಟ್ಟಿನಿಂದ ಕೇಂದ್ರದ ಮೇಲೆ ಒತ್ತಡ ತರಬೇಕು ಮನವಿ ಮಾಡಿದರು.

ಜ.25ರಂದು ನವ ಕರ್ನಾಟಕ ನಿರ್ಮಾಣಕ್ಕೆ ಪರಿವರ್ತನಾ ಯಾತ್ರೆಯ ಸಮಾರೋಪಕ್ಕೆ ನಗರಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರಾದ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟಿಸಿ, ವಿದ್ಯಾರ್ಥಿಗಳ ಹಿತ ಕಾಪಾಡಲು ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News