ಉ.ಪ್ರದೇಶದಲ್ಲಿ ‘ಪದ್ಮಾವತ್’ ವಿರುದ್ಧ ಪ್ರತಿಭಟನೆ: ಸಿನೆಮಾ ಮಂದಿರದ ಟಿಕೆಟ್ ಕೌಂಟರ್ ಧ್ವಂಸ

Update: 2018-01-23 15:06 GMT

ಲಕ್ನೊ, ಜ.23: ಬಾಲಿವುಡ್ ಸಿನೆಮಾ ‘ಪದ್ಮಾವತ್’ ವಿರುದ್ಧ ಪ್ರತಿಭಟನೆ ಮುಂದುವರಿದಿದ್ದು, ಉ.ಪ್ರದೇಶದ ಹಪೂರ್‌ನಲ್ಲಿ ಸಿನೆಮಾ ಮಂದಿರವೊಂದರ ಟಿಕೆಟ್ ಕೌಂಟರ್ ಧ್ವಂಸಗೊಳಿಸಲಾಗಿದೆ.

ಸಿನೆಮದಲ್ಲಿ ಚಾರಿತ್ರಿಕ ಘಟನೆಗಳನ್ನು ವಿಕೃತಗೊಳಿಸಲಾಗಿದೆ ಎಂದು ಆರೋಪಿಸಿ ಕರ್ಣಿ ಸೇನೆ ಹಾಗೂ ಇತರ ಕೆಲವು ಸಂಘಟನೆಗಳು ಸಿನೆಮಾದ ಪ್ರದರ್ಶನವನ್ನು ವಿರೋಧಿಸುತ್ತಿವೆ. ಈ ಹಿಂದೆ ‘ಪದ್ಮಾವತಿ’ ಎಂದು ಹೆಸರಿಡಲಾಗಿದ್ದ ಸಿನೆಮಾದ ಹೆಸರನ್ನು ಬಳಿಕ ಸೆನ್ಸಾರ್ ಮಂಡಳಿಯ ಸಲಹೆಯಂತೆ ‘ಪದ್ಮಾವತ್’ ಎಂದು ಬದಲಿಸಲಾಗಿದೆ.

 ಬಿಜೆಪಿ ಆಡಳಿತದ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ತಾನ ಮತ್ತು ಗುಜರಾತ್ ರಾಜ್ಯಸರಕಾರಗಳು ಸಿನೆಮಾ ಪ್ರದರ್ಶನವನ್ನು ನಿಷೇಧಿಸಿ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದ ಹಿನ್ನೆಲೆಯಲ್ಲಿ ಜನವರಿ 25ರಂದು ಸಿನೆಮಾವನ್ನು ದೇಶದಾದ್ಯಂತ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ ಸಿನೆಮಾದ ಪ್ರದರ್ಶನಕ್ಕೆ ಇತರ ರಾಜ್ಯಗಳೂ ನಿಷೇಧ ಹೇರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

ಸಿನೆಮ ಮಂದಿರಗಳಲ್ಲಿ ಜನರಿಂದಲೇ ಕರ್ಫ್ಯೂ: ಕರ್ಣಿ ಸೇನೆ ಎಚ್ಚರಿಕೆ

ಒಂದು ವೇಳೆ ಉತ್ತರಪ್ರದೇಶದಲ್ಲಿ ಸಿನೆಮಾ ಬಿಡುಗಡೆಯಾಗಿ ಪ್ರದರ್ಶನಗೊಂಡರೆ ಸಿನೆಮಾ ಮಂದಿರಗಳಲ್ಲಿ ಜನರೇ ಕರ್ಫ್ಯೂ ವಿಧಿಸಲಿದ್ದಾರೆ ಎಂದು ಶ್ರೀ ರಜಪೂತ್ ಕರ್ಣಿ ಸೇನೆ ಎಚ್ಚರಿಸಿದೆ.

  ಉ.ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ರನ್ನು ಭೇಟಿಮಾಡಿದ ಕರ್ಣಿ ಸೇನೆಯ ಮುಖಂಡರು, ರಾಜ್ಯದಲ್ಲಿ ಸಿನೆಮ ಪ್ರದರ್ಶನಕ್ಕೆ ನಿಷೇಧ ಹೇರುವಂತೆ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಯೊಂದಿಗೆ 20 ನಿಮಿಷ ನಡೆದ ಮಾತುಕತೆಯಲ್ಲಿ ‘ಪದ್ಮಾವತ್’ಗೆ ನಿಷೇಧ ಹೇರುವಂತೆ ಒತ್ತಾಯಿಸಿದ್ದೇವೆ ಎಂದು ನಿಯೋಗದಲ್ಲಿದ್ದ ಕರ್ಣಿ ಸೇನಾ ಬೆಂಬಲಿಗ ಲೋಕೇಂದ್ರ ಸಿಂಗ್ ಕಾಳ್ವಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ‘ಪದ್ಮಾವತ್’ ಸಿನೆಮದ ಬಗ್ಗೆ 40 ವಿವಿಧ ಆಕ್ಷೇಪಗಳನ್ನು ಎತ್ತಿರುವ ಕರ್ಣಿ ಸೇನೆ, ಮಹಾರಾಣಾ ಪ್ರತಾಪ್, ಶಿವಾಜಿ ಹಾಗೂ ಇತರ ಪ್ರಮುಖ ವ್ಯಕ್ತಿಗಳ ಕುರಿತೂ ಸಿನೆಮಾ ಮಾಡುವಂತೆ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News