ಯೋಗೇಶ್ವರ್, ಹೆಗಡೆಗೆ ಕೆ.ಎಸ್.ಪುಟ್ಟಣ್ಣಯ್ಯ ತಿರುಗೇಟು: ಫೆ.5 ರಂದು ಲೀಡ್ ಬ್ಯಾಂಕ್‍ಗೆ ಮುತ್ತಿಗೆ

Update: 2018-01-23 15:35 GMT

ಮಂಡ್ಯ, ಜ.23: ರೈತ ಚಳವಳಿ ಮತ್ತು ರೈತರ ಬಗ್ಗೆ ಮಾತನಾಡುವ ನೈತಿಕತೆ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಅವರಿಗಿಲ್ಲ ಎಂದು ಶಾಸಕ, ರೈತ ಸಂಘದ ವರಿಷ್ಠ ಕೆ.ಎಸ್.ಪುಟ್ಟಣ್ಣಯ್ಯ ತಿರುಗೇಟು ನೀಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪರಿವರ್ತನಾ ಯಾತ್ರೆ ವೇಳೆ ರೈತ ಸಂಘದ ಬಗ್ಗೆ ಲಘುವಾಗಿ ಮಾತನಾಡಿರುವ ಯೋಗೇಶ್ವರ್ ಯಾವಾಗ ಉತ್ತಿಬಿತ್ತಿ ಬೇಸಾಯ ಮಾಡಿದ್ದಾರೆಂದು ತರಾಟೆಗೆ ತೆಗೆದುಕೊಂಡರು.

ಮಾಹಿತಿ ಇಲ್ಲದೇ ಸುಳ್ಳು ಮಾತನಾಡಬಾರದು. ಪಕ್ಷಾಂತರ ಮಾಡಿಕೊಂಡಿರುವ ಯೋಗೇಶ್ವರ್ ತನ್ನ ಕ್ಷೇತ್ರದ ಕೆರೆಗಳನ್ನು ತುಂಬಿಸಲು ಮೂರು ವರ್ಷ ತೆಗೆದುಕೊಂಡಿದ್ದರೆ, ನಾನು ನನ್ನ ಕ್ಷೇತ್ರದ ಕೆರೆಗಳನ್ನು 9 ತಿಂಗಳಲ್ಲೇ ತುಂಬಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಹೆಗಡೆಯೇ ಹುಚ್ಚು ನಾಯಿ: ಹುಚ್ಚುನಾಯಿಗೆ ಹೋಲಿಸಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯೇ ಹುಚ್ಚುನಾಯಿ. ಓರ್ವ ಜನಪ್ರತಿನಿಧಿಯಾಗಿ ಜವಾಬ್ಧಾರಿಯುತ ಸ್ಥಾನದಲ್ಲಿರುವ ಹೆಗಡೆ ಹೇಗೆ ಮಾತನಾಡಬೇಕು ಎಂಬುದನ್ನು ಕಲಿಯಬೇಕು ಎಂದು ಪುಟ್ಟಣ್ಣಯ್ಯ ಹೇಳಿದರು.

ದಲಿತರು, ಬಡವರು, ರೈತರು ನಿಯತ್ತಿನ ನಾಯಿಗಳು. ಆದರೆ, ಹೆಗಡೆ ಅವರಂತೆ ಬಾಯಿಗೆ ಬಂದಂತೆ ಬೊಗಳುವ ಹುಚ್ಚು ನಾಯಿ ಅಲ್ಲ. ಬದಲಾಗಬೇಕಿರುವುದು ಸಂವಿಧಾನವಲ್ಲ,  ಹೆಗಡೆಯ  ಕೆಟ್ಟ ಮನಸ್ಥಿತಿ ಎಂದು ಅವರು ಸಲಹೆ ನೀಡಿದರು.

ಲೀಡ್ ಬ್ಯಾಂಕ್ ಮುತ್ತಿಗೆ: ರಿಸರ್ವ್ ಬ್ಯಾಂಕ್ ಕಾನೂನು ಉಲ್ಲಂಘಿಸಿ ರೈತರಿಗೆ ಸಾಲ ನೀಡಲು ಮೀನಾಮೇಷ ಎಣಿಸುತ್ತಿರುವ ಬ್ಯಾಂಕ್‍ಗಳ ಧೋರಣೆ ಖಂಡಿಸಿ ಫೆ.5 ರಂದು ಲೀಡ್ ಬ್ಯಾಂಕ್‍ಗೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಹೇಳಿದರು.

ರೈತರ ಕೃಷಿ ಚಟುವಟಿಕೆಗೆ ಅಗತ್ಯವಿರುವ ಸಾಲವನ್ನು ಬ್ಯಾಂಕ್‍ಗಳು ನೀಡದೆ ಸಬೂಬು ಹೇಳುತ್ತಿವೆ. ರೈತರನ್ನು ಗುಲಾಮರಂತೆ ಕಾಣುತ್ತಿವೆ. ಈಗಲಾದರೂ ತಮ್ಮ ಧೋರಣೆ ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಅನಿವಾರ್ಯ ಎಂದು ಅವರು ಎಚ್ಚರಿಸಿದರು.

ಕೆಆರ್‍ಎಸ್‍ನಿಂದ ಹದಿನೈದು ದಿನ ನೀರು ಹರಿಸಿ, ಹದಿನೈದು ದಿನ ನಿಲ್ಲಿಸಲಾಗುತ್ತಿದೆ. ಇದರಿಂದ ತೊಂದರೆಯಾಗಿದ್ದು, ಹತ್ತುದಿನ ಮಾತ್ರ ನೀರು ನಿಲುಗಡೆಗೆ ಕ್ರಮ ವಹಿಸಬೇಕು ಎಂದು ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದರು.

ಯುವಜನರಿಗೆ ತರಬೇತಿ ಶಿಬಿರ: ಪ್ರಗತಿಪರ ಚಳವಳಿ ಹಾಗೂ ರಾಜಕೀಯದಲ್ಲಿ ಪಾಲ್ಗೊಳ್ಳುವಿಕೆ ವಿಷಯ ಕುರಿತು ಯುವಜನರಿಗೆ ರಾಜ್ಯಮಟ್ಟದ ತರಬೇತಿ ಶಿಬಿರವನ್ನು ಫೆ.4 ರಂದು ಮಂಡ್ಯದಲ್ಲಿ ಏರ್ಪಡಿಸಲಾಗಿದ್ದು, ಪ್ರತಿ ಜಿಲ್ಲೆಯಿಂದ ಹತ್ತು ಮಂದಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಸ್ವರಾಜ್ ಇಂಡಿಯಾ ಸ್ಪರ್ಧೆ: 
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ವರಾಜ್ ಇಂಡಿಯಾ ವತಿಯಿಂದ ಸದ್ಯಕ್ಕೆ 14 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ಜ.31 ರಂದು ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಬಿ.ಬೊಮ್ಮೇಗೌಡ, ರಾಮಕೃಷ್ಣಯ್ಯ, ಲಿಂಗಪ್ಪಾಜಿ, ರಾಮಕೃಷ್ಣ, ಕೀಲಾರ ಸೋಮಶೇಖರ್, ದೇವರಾಜು, ಲತಾಶಂಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News