'ಪದ್ಮಾವತ್' ಬಿಡುಗಡೆ: ಅಹ್ಮದಾಬಾದ್ ಮಾಲ್‌ನಲ್ಲಿ ದಾಂಧಲೆ

Update: 2018-01-24 04:01 GMT

ಅಹ್ಮದಾಬಾದ್, ಜ. 24: ವಿವಾದಾತ್ಮಕ 'ಪದ್ಮಾವತ್' ಚಿತ್ರವನ್ನು ಜನವರಿ 25ರಂದು ಬಿಡುಗಡೆ ಮಾಡಲು ಸಿದ್ಧತೆ ನಡೆದಿರುವ ಮಧ್ಯೆಯೇ ಚಿತ್ರ ಬಿಡುಗಡೆ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ಆರಂಭವಾಗಿದೆ. ಮಂಗಳವಾರ ರಾತ್ರಿ ಕರ್ಣಿ ಸೇನಾ ಕಾರ್ಯಕರ್ತರು ಮುಂಬತ್ತಿ ಜಾಥಾ ನಡೆಸಿದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿದೆ.

ಮಂಗಳವಾರ ರಾತ್ರಿ 8ರ ಬಳಿಕ ಗುಂಪು ದಾಂಧಲೆ ನಡೆಸಿದ್ದು, 150ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ನಗರದ ಪಶ್ಚಿಮ ಭಾಗದಲ್ಲಿ ಮಲ್ಟಿಪ್ಲೆಕ್ಸ್ ಹೊಂದಿರುವ ಮೂರು ಮಾಲ್‌ಗಳ ಮೇಲೆ ಮತ್ತು ಇನ್ನೊಂದು ಥಿಯೇಟರ್ ಕಾಂಪ್ಲೆಕ್ಸ್ ಮೇಲೆ ದಾಳಿ ನಡೆಸಿದ್ದಾರೆ.

ಆದರೆ ಈ ಹಿಂಸಾಚಾರಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಕರ್ಣಿ ಸೇನಾ ಗುಜರಾತ್ ಘಟಕದ ಮುಖ್ಯಸ್ಥ ರಾಜ್ ಶೇಖಾವತ್ ಸ್ಪಷ್ಟಪಡಿಸಿದ್ದಾರೆ. ಈ ಹಿಂಸಾಚಾರ ಖಂಡನೀಯ. ಕರ್ಣಿ ಸೇನಾ ಇದರಲ್ಲಿ ಶಾಮೀಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಕ್ರೋಪೋಲಿಸ್, ಅಹ್ಮದಾಬಾದ್ ವನ್, ಹಿಮಾಲಯ ಮಾಲ್ ಹಾಗೂ ಸಿನೆಮೆಕ್ಸ್ ಸಂಕೀರ್ಣಗಳ ಮೇಲೆ ದಾಳಿ ನಡೆದಿದೆ. ನಗರದ ಥಿಯೇಟರ್ ಮಾಲಕರು ಪದ್ಮಾವತ್ ಚಿತ್ರವನ್ನು ಪ್ರದರ್ಶಿಸುವುದಿಲ್ಲ ಎಂದು ಪ್ರಕಟಿಸಿದ್ದರೂ ಸಂಕೀರ್ಣಗಳ ಮೇಲೆ ದಾಳಿ ನಡೆದಿರುವುದು ಸಂಶಯ ಮೂಡಿಸಿದೆ. ಮಾಲ್‌ಗಳ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಜಖಂಗೊಳಿಸಲಾಗಿದ್ದು, ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ರಾತ್ರಿ 10ರ ಬಳಿಕವೂ ಮಾಲ್‌ಗಳ ಎದುರು ಬೆಂಕಿ ಧಗಧಗಿಸುತ್ತಿತ್ತು.

ಮಾಲ್ ಮತ್ತು ಥಿಯೇಟರ್‌ಗಳ ಒಳಗಿದ್ದವರನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಯಾರಿಗೂ ಗಾಯಗಳಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರುವುದು ನಮ್ಮ ಆದ್ಯತೆ. ಬಳಿಕ ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News