ಕಾಂಗ್ರೆಸ್‌ನ ಬಂಡಾಯ ಸದಸ್ಯೆ ಭಾಗ್ಯವತಿಗೆ ಮೈಸೂರು ಮೇಯರ್ ಪಟ್ಟ

Update: 2018-01-24 18:17 GMT

ಮೈಸೂರು, ಜ.24: ಪ್ರಸಕ್ತ ಅವಧಿಯ ಕೊನೆ ಅವಧಿಗೆ ಮೈಸೂರು ಮೇಯರ್ ಹಾಗೂ ಉಪಮೇಯರ್ ಚುನಾವಣೆ ಗದ್ದಲ ಗಲಾಟೆಗಳ ನಡುವೆಯೇ ನಡೆದು ಎಸ್ಸಿ ಮಹಿಳೆಗೆ ಮೀಸಲಾಗಿದ್ದ ಮೇಯರ್ ಸ್ಥಾನವನ್ನು ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಭಾಗ್ಯವತಿ ಮೇಯರ್ ಆಗಿ ಆಯ್ಕೆಯಾಗಿದ್ದು, ಎಸ್ಟಿ ಮಹಿಳಾ ವರ್ಗಕ್ಕೆ ಮೀಸಲಾಗಿರುವ ಉಪಮೇಯರ್ ಸ್ಥಾನಕ್ಕೆ ಜಾತ್ಯಾತೀತ ಜನತಾದಳದ ಎಂ.ಇಂದಿರಾ ಆಯ್ಕೆಯಾಗಿದ್ದಾರೆ. ಮೇಯರ್ ಉಪಮೇಯರ್ ಎರಡೂ ಸ್ಥಾನಗಳೂ ಜೆಡಿಎಸ್ ಪಕ್ಷದ ಪಾಲಾದಂತಾಗಿದೆ.

ಬುಧವಾರ ಸಯ್ಯಜಿ ರಾವ್ ರಸ್ತೆಯಲ್ಲಿರುವ ಮೈಸೂರು ಮಹಾನಗರ ಪಾಲಿಕೆಯ ಪ್ರಧಾನ ಕಚೇರಿಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಪೂರ್ವಾಹ್ನ 11:30ಕ್ಕೆ ಚುನಾವಣಾ ಪ್ರಕ್ರಿಯೆ ನಿಗದಿಪಡಿಸಲಾಗಿತ್ತು. ಮೊದಲಿಗೆ ವಾರ್ಡ್ ಸಂಖ್ಯೆ 50ರ ಸದಸ್ಯೆ ಕಾಂಗ್ರೆಸ್‌ನ ಕಮಲ ಉದಯ್ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಬಳಿಕ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಜೆಡಿಎಸ್ ಶಾಸಕರಾದ ಸಾ.ರಾ.ಮಹೇಶ್ ಮತ್ತು ಜಿ.ಟಿ.ದೇವೇಗೌಡ ಜೊತೆ ಪಾಲಿಕೆ ಹಿಂಬಾಗಿಲಿನಿಂದ ಪ್ರವೇಶಿಸಿದ ಭಾಗ್ಯವತಿಯನ್ನು ಕಾಂಗ್ರೆಸ್ ಸದಸ್ಯರು ತರಾಟೆಗೆ ತೆಗೆದುಕೊಂಡರು.

ಜೆಡಿಎಸ್ ಮತ್ತು ಬಿಜೆಪಿ ಬೆಂಬಲದಿಂದ ಭಾಗ್ಯವತಿ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಈ ನಡುವೆ ನಮ್ಮ ಸದಸ್ಯೆಯನ್ನು ಹೈಜಾಕ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು, ಶಾಸಕರು ಮತ್ತು ಸಚಿವ ತನ್ವೀರ್ ಸೇಠ್ ಅವರು ಗಲಾಟೆ ಮಾಡಿ, ಚುನಾವಣೆ ಮುಂದೂಡುವಂತೆ ಚುನಾವಣಾಧಿಕಾರಿಗಳಿಗೆ ತಿಳಿಸಿದರು.ಆದರೆ ಚುನಾವಣಾಧಿಕಾರಿಗಳು ಕೋರಂ ಇರುವ ಕಾರಣ ಮುಂದೂಡಲು ಸಾಧ್ಯವಿಲ್ಲವೆಂದು ತಿಳಿಸಿದರು.

ಭಾಗ್ಯವತಿ ಅವರಿಗೆ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಅವರು ವಾಪಸ್ ಪಡೆಯದ ಕಾರಣ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು. ಪ್ರಕ್ರಿಯೆಯಂತೆ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಅಂಗೀ ಕಾರವಾಗಿದ್ದು, ಬಿ.ಭಾಗ್ಯವತಿ ಪರ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಮತಹಾಕಿದರು. ಭಾಗ್ಯವತಿ ಮೇಯರ್ ಆಗಿ ಆಯ್ಕೆಯಾಗಿದ್ದು, ಉಪಮೇಯರ್ ಸ್ಥಾನಕ್ಕೆ ಓರ್ವರೇ ನಾಮಪತ್ರ ಸಲ್ಲಿಸಿದ್ದರಿಂದ ಎಂ.ಇಂದಿರಾ ಆಯ್ಕೆಯಾದರು. ಪಾಲಿಕೆ ಮೇಯರ್ ಚುನಾವಣೆಗೆ ಕೋರಂ ಲಭ್ಯವಾಗಿದ್ದು, 74 ಸದಸ್ಯ ಮತದಾರರ ಪೈಕಿ 44 ಸದಸ್ಯರು ಹಾಜರಾತಿಯ ಪುಸ್ತಕಕ್ಕೆ ಸಹಿ ಮಾಡಿದ್ದಾರೆ. ಕೋರಂ ಇರುವುದರಿಂದ ಚುನಾವಣೆ ನಡೆಸುತ್ತೇೆ ಎಂದು ಚುನಾವಣಾಧಿಕಾರಿ ತಿಳಿಸಿದರು.

ಇದರಿಂದ ಕಾಂಗ್ರೆಸ್‌ಗೆ ಹಿನ್ನಡೆಯುಂಟಾಯಿತು. ಕೋರಂ ಅಭಾವ ಸೃಷ್ಟಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಮೇಯರ್ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಹೊರನಡೆದರು. ಸಿಎಂ ತವರು ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಬಾರೀ ಮುಖಭಂಗವಾಗಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಮೈಸೂರು ಮೇಯರ್ ಸ್ಥಾನ ಒಲಿದಿದೆ. ಮೈಸೂರು ನಗರ ಪಾಲಿಕೆ ಮೇಯರ್ ಆಗಿ ಭಾಗ್ಯವತಿ , ಉಪಮೇಯರ್ ಆಗಿ ಎಂ.ಇಂದಿರಾ ಆಯ್ಕೆಯಾದರು.
ಈ ಸಂದಭರ್ ಪ್ರಾದೇಶಿಕ ಆಯುಕ್ತ ಪ್ರಭಾರ ಶಿವಯೋಗಿ ಸಿ.ಕಳಸದ್, ಆಯುಕ್ತ ಜಿ.ಜಗದೀಶ್, ಮಾಜಿ ಮೇಯರ್ ಎಂ.ಜೆ.ರವಿಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್ ಸದಸ್ಯರನ್ನು ಅಪಹರಿಸಿ ಹೈಜಾಕ್ ಮಾಡಿದ್ದಾರೆ: ಸಚಿವ ತನ್ವೀರ್ ಸೇಠ್ ಆರೋಪ

ನಮ್ಮಿಂದ ಕಾಂಗ್ರೆಸ್‌ನ ಒಬ್ಬರು ಸದಸ್ಯರನ್ನು ಅಪಹರಿಸಿ ಹೈಜಾಕ್ ಮಾಡಿದ್ದಾರೆ. ಮೇಯರ್ ಚುನಾವಣೆ ಸಂಪೂರ್ಣ ಕಾನೂನು ಬಾಹಿರ ಎಂದು ಸಚಿವ ತನ್ವೀರ್ ಸೇಠ್ ಆರೋಪಿಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಆವರಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಗ್ಗೆ ನಾವು ಹಿರಿಯ ಅಧಿಕಾರಿಗಳಿಗೆ ದೂರು ನೀಡುತ್ತೇವೆ. ಚುನಾವಣಾ ಅಧಿಕಾರಿಗಳ ವಿರುದ್ಧ ದೂರು ನೀಡುತ್ತೇವೆ. ಪ್ರಸ್ತುತ ಸಂದಭರ್ದಲ್ಲಿ ಮೀಸಲಾತಿ ಬಂದಿದೆ. ಆದರೆ ಪಕ್ಷಾಂತರ ಮಾಡಿದ್ದಾರೆ. ಅಧಿಕಾರದ ದಾಹ, ಆಸೆಯಿಂದ ಪಕ್ಷಾಂತರ ಪರ್ವ ಮಾಡಿದ್ದಾರೆ. ಕೋರ್ಟ್ ಹಾಗೂ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುತ್ತೇವೆ. ಅರ್ಜಿ ಕಿತ್ತು ಹಾಕಿದ ಪ್ರಸಂಗವೂ ನಡೆದಿದೆ. ನಿಗದಿಪಡಿಸಿದ ಜಾಗ ಬಿಟ್ಟು ಬೇರೆಡೆ ಸದಸ್ಯರಿಗೆ ಜಾಗ ಕೊಟ್ಟಿದ್ದಾರೆ. ಇದು ಮೊದಲ ಲೋಪವಾಗಿದೆ. ಚುನಾವಣೆ ಏಕಪಕ್ಷೀಯವಾಗಿ ನಡೆದಿದೆ. ಚುನಾವಣಾ ಅಧಿಕಾರಿಗಳು ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಇದರೆಲ್ಲ ಲೋಪ ಹಾಗೂ ಘಟನೆಗೆ ನೇರವಾಗಿ ಜಿ.ಟಿ.ದೇವೆಗೌಡರೇ ಕಾರಣ ಎಂದು ಗಂಭೀರವಾಗಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ.ಕೆ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಕಾಂಗ್ರೆಸ್ ಬೆಂಬಲಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News