ಮಕ್ಕಳಲ್ಲಿ ಸಂಶೋಧನಾ ಮನೋಭಾವ ಬೆಳೆಸುವುದು ಅಗತ್ಯ: ಸದಾನಂದ ಡಂಗನವರ

Update: 2018-01-24 17:18 GMT

ಧಾರವಾಡ, ಜ.23: ಇಂದು ವಿಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳು ಆಗುತ್ತಿವೆ. ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವವನ್ನು ಬೆಳೆಸುವುದು ಅವಶ್ಯವಾಗಿದೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗನವರ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳನ್ನು ಮಾದರಿ ವಿಜ್ಞಾನಿಗಳನ್ನಾಗಿ ಮಾರ್ಪಡಿಸುವಲ್ಲಿ ವಿಜ್ಞಾನ ವಸ್ತು ಪ್ರದರ್ಶನಗಳು ಸಹಾಯಕಾರಿಯಾಗಿವೆ. ದೇಶದ ಅಭಿವೃದ್ಧಿಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ. ಮಕ್ಕಳಲ್ಲಿ ಅಡಗಿರುವ ಕೌಶಲ್ಯಗಳನ್ನು ಹೊರಹಾಕಲು ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿವೆ ಎಂದು ಅವರು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರ ಮಾತನಾಡಿ, ಮಕ್ಕಳಲ್ಲಿ ಆವಿಷ್ಕಾರ ಕೈಗೊಳ್ಳುವಂತ ಕಾರ್ಯಗಳು ಆಗಬೇಕಿವೆ. ಶಿಕ್ಷಕರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಿದ್ದಾರೆ. ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಶಿಕ್ಷಕರು ಆಧಾರಸ್ತಂಭವಾಗಿದ್ದಾರೆ. ಮಕ್ಕಳು ಜೀವನದಲ್ಲಿ ಯಶಸ್ಸು ಗಳಿಸುವತ್ತ ಗಮನಹರಿಸಬೇಕೆಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸದಸ್ಯೆ ಹಾಗೂ ಕರ್ನಾಟಕ ವಿವಿಯ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಲಕ್ಷ್ಮಿ ಇನಾಮದಾರ ಮಾತನಾಡಿ, ವಿದ್ಯಾರ್ಥಿಗಳನ್ನು ವಿಜ್ಞಾನಿಗಳನ್ನಾಗಿ ಮಾರ್ಪಾಡು ಮಾಡುವಲ್ಲಿ ಇಂತಹ ವಸ್ತು ಪ್ರದರ್ಶನಗಳು ಸಹಾಯಕಾರಿಯಾಗಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕಿದೆ. ಮಕ್ಕಳಿಗೆ ತಂತ್ರಜ್ಞಾನ ಕುರಿತು ತಿಳಿ ಹೇಳಲು ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯೆ ಸುಮಂಗಳಾ ಕುಚಿನಾಡ್, ಸಾಯಿರಾಬಾನು ಖಾನ್, ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ನಾಡಗೀರ, ಎಸ್.ಕೆ.ಪಾಟೀಲ್, ವಿಮಲಾ, ಅಕ್ಬರ್ ಅಲಿ ಖಾಜಿ ಸೇರಿದಂತೆ ಕೊಪ್ಪಳ, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಯ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News