ಜೀವನಾವಶ್ಯಕ ಪದಾರ್ಥಗಳ ಬೆಲೆ ಇಳಿಕೆಯಾಗಲಿ

Update: 2018-01-25 04:37 GMT

ಕೇಂದ್ರದಲ್ಲಿ ಯುಪಿಎ ಸರಕಾರವಿದ್ದಾಗ ಈರುಳ್ಳಿ ಬೆಲೆ 5 ರೂ. ಹೆಚ್ಚಳವಾದರೆ ದೇಶದಲ್ಲಿ ದೊಡ್ಡ ಪ್ರತಿಭಟನೆಗಳೇ ನಡೆಯುತ್ತಿದ್ದವು. ಸಂಸತ್‌ನಲ್ಲೂ ಗಲಾಟೆಗಳಾಗುತ್ತಿದ್ದವು. ಆದರೆ, ಈಗ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾದರೂ ಪ್ರತಿಭಟನೆಗಳು ಎಲ್ಲೂ ಕಂಡುಬರುತ್ತಿಲ್ಲ. ಈ ದೃಷ್ಟಿಯಿಂದ ಈಗಿನ ಪ್ರಧಾನಿ ನರೇಂದ್ರ ಮೋದಿ ಅದೃಷ್ಟಶಾಲಿ. ಎಲ್ಲಾ ಜೀವನಾವಶ್ಯಕ ಪದಾರ್ಥಗಳ ಬೆಲೆ ಹೆಚ್ಚಳವಾಗಿದ್ದರೂ ಅಂತಹ ವಿರೋಧ ಕಂಡುಬರುತ್ತಿಲ್ಲ.

ಜನತೆಯ ಅಸಮಾಧಾನ ಮತ್ತು ಆಕ್ರೋಶವನ್ನು ಬೇರೊಂದು ದಿಕ್ಕಿಗೆ ತಿರುಗಿಸುವಲ್ಲಿ ಇಂದಿನ ಸರಕಾರ, ಆಳುವ ಪಕ್ಷ ಮತ್ತು ಅದನ್ನು ನಿಯಂತ್ರಿಸುವ ಸಂಘಪರಿವಾರ ಯಶಸ್ವಿಯಾಗಿದೆ. ಚಾಣಾಕ್ಷ ತಂತ್ರಗಳನ್ನು ಅನುಸರಿಸುತ್ತಿವೆ. ಬದುಕಿನ ಅಗತ್ಯಗಳಿಗಾಗಿ ಯೋಚಿಸಬೇಕಾದ ಜನತೆ ಇಂದು ಭಾವನಾತ್ಮಕ ವಿಷಯದಲ್ಲಿ ಮುಳುಗಿದ್ದಾರೆ. ದೇವರು, ಮತ ಧರ್ಮಗಳ ಉನ್ಮಾದವನ್ನು ಕೆರಳಿಸಿ ಪ್ರಭುತ್ವದ ಲೋಪಗಳನ್ನು ಮುಚ್ಚಿಹಾಕುವ ಯತ್ನ ನಡೆದಿದೆ. ಅಂತಲೇ ಈಗ ಗೋರಕ್ಷಣೆ, ಮತಾಂತರ, ‘ಪದ್ಮಾವತಿ’ ಸಿನೆಮಾ ಇಂತಹ ಭಾವನಾತ್ಮಕ ವಿಷಯಗಳನ್ನು ಕೆರಳಿಸಲಾಗುತ್ತಿದೆ. ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆ ಈಗ ಗಗನ ಮುಖಿಯಾಗಿದೆ. ಇದೇ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆ ಸೇರಿದಂತೆ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಕರ್ನಾಟಕದಲ್ಲಿ ಇಲ್ಲಿನ ಮುಖ್ಯ ಪ್ರತಿಪಕ್ಷವಾದ ಬಿಜೆಪಿಗೆ ಬೆಲೆ ಏರಿಕೆ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರದ ಲೋಪದೋಷಗಳು ಚುನಾವಣಾ ಪ್ರಚಾರದ ಮುಖ್ಯ ವಿಷಯಗಳಾಗಿಲ್ಲ. ಕೇಂದ್ರದ ಮಂತ್ರಿಯೊಬ್ಬರು ರಾಜ್ಯದ ಕೆಲ ಕಡೆ ನಡೆದ ಸಭೆಗಳಲ್ಲಿ ಕೋಮು ಪ್ರಚೋದಕ ಭಾಷಣಗಳನ್ನು ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಇತ್ತೀಚೆಗೆ ಭಾಷಣ ಮಾಡುತ್ತಾ ‘ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣೆ, ರಾಮ ಮತ್ತು ಅಲ್ಲಾಹು ನಡುವಿನ ಚುನಾವಣೆ’ ಎಂದು ಉದ್ರೇಕಕಾರಿಯಾಗಿ ಮಾತನಾಡಿದರು. ಜನರನ್ನು ಬಾಧಿಸುತ್ತಿರುವ ಸಮಸ್ಯೆಗಳ ಬದಲಾಗಿ ದೇವರು ಮತ್ತು ಧರ್ಮವನ್ನು ಚುನಾವಣಾ ಪ್ರಚಾರಕ್ಕಿಳಿಸಿ ಇವರು ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ.

 ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರತೀ ಲೀಟರ್‌ಗೆ ಪ್ರತೀ ದಿನ ಪೈಸೆ ಲೆಕ್ಕದಲ್ಲಿ ಹೆಚ್ಚಿಸಲಾಗುತ್ತಿದೆ. ಹೀಗೆ ಕ್ರಮೇಣ ಇವುಗಳ ಬೆಲೆ ಹೆಚ್ಚಳವಾಗಿ ಗ್ರಾಹಕರಿಗೆ ನಿಲುಕಲಾಗದ ಮಟ್ಟವನ್ನು ತಲುಪಿದೆ. ಇದರ ಪರಿಣಾಮ ಬರೀ ಗ್ರಾಹಕರ ಜೇಬಿನ ಮೇಲೆ ಮಾತ್ರ ಆಗುವುದಿಲ್ಲ. ದೇಶದ ಆರ್ಥಿಕತೆಯ ಮೇಲೂ ಇದು ಗಂಭೀರ ಪರಿಣಾಮ ಉಂಟುಮಾಡುತ್ತಿದೆ. ಇದರಿಂದಾಗಿ ಸರಕು ಸಾಗಣೆ ವೆಚ್ಚ್ಚ ಹೆಚ್ಚಳವಾಗಿದೆ. ಸರಕು ಸಾಗಣೆ ವೆಚ್ಚ ಹೆಚ್ಚಳವಾಗಿರುವುದರಿಂದ ಹಣದುಬ್ಬರ ಉಂಟಾಗುತ್ತಿದೆ. 2017ರ ಜೂನ್ ತಿಂಗಳಿನಿಂದ ಇಂಧನ ಬೆಲೆಯನ್ನು ಪ್ರತೀ ದಿನ ಪರಿಷ್ಕರಿಸಲು ಸರಕಾರ ಆರಂಭಿಸಿದ ಬಳಿಕ ಬೆಲೆ ಏರಿಕೆಗೆ ಕಡಿವಾಣ ಇಲ್ಲದಂತಾಗಿದೆ. ಈ ರೀತಿಯ ಏರಿಕೆ ಗ್ರಾಹಕರ ಕಣ್ಣಿಗೆ ಗೋಚರಿಸುವುದಿಲ್ಲ. ನಿಧಾನವಾಗಿ ನೇರವಾಗಿ ಬಳಕೆದಾರರಿಗೆ ಬಿಸಿ ಮುಟ್ಟಿಸುತ್ತದೆ.

ಮನಮೋಹನ್ ಸಿಂಗ್ ನೇತೃತ್ವದ ಸರಕಾರ ಕೇಂದ್ರದಲ್ಲಿದ್ದಾಗ ಮೂರು ತಿಂಗಳಿಗೊಮ್ಮೆ ಎರಡರಿಂದ ಮೂರು ರೂಪಾಯಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಮಾಡಿದರೆ ದೇಶವ್ಯಾಪಿಯಾಗಿ ಪ್ರತಿಭಟನೆ ಭುಗಿಲೇಳುತ್ತಿತ್ತು. ರಾಜಕೀಯ ಪಕ್ಷಗಳು ಬೀದಿಯಲ್ಲಿ ಚಳವಳಿ ಮಾಡುತ್ತಿದ್ದವು. ಈಗ ಪ್ರತೀ ದಿನ ಒಂದರಿಂದ 15 ಪೈಸೆ ಹೆಚ್ಚಳವಾಗುವುದರಿಂದ ಗ್ರಾಹಕರ ಜೇಬಿಗೆ ಇದು ತಕ್ಷಣ ಬಿಸಿ ಮುಟ್ಟಿಸುವುದಿಲ್ಲ. ಆದರೆ, ದೀರ್ಘಾವಧಿಯಲ್ಲಿ ಆರ್ಥಿಕ ವ್ಯವಸ್ಥೆಯ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮವನ್ನು ಉಂಟುಮಾಡುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಳವಾಗಿರುವುದರಿಂದ ಈ ಏರಿಕೆ ಅನಿವಾರ್ಯವಾಗಿದೆ ಎಂದು ತೈಲ ಮಾರಾಟ ಸಂಸ್ಥೆಗಳು ನೆಪ ಹೇಳುತ್ತವೆ. ಆದರೆ, ಇದರಲ್ಲಿ ಸತ್ಯಾಂಶವಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಾಗಲೂ ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ತೆರಿಗೆ ನೀತಿಯೇ ಕಾರಣವಾಗಿದೆ. ಪರೋಕ್ಷ ತೆರಿಗೆಗೆ ಸಂಬಂಧಿಸಿದಂತೆ ಜಿಎಸ್‌ಟಿ ಜಾರಿಗೆ ಬಂದ ಬಳಿಕವೂ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್‌ಗಳನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ತರಬೇಕೆಂಬ ಕೂಗು ಈಗ ಎಲ್ಲೆಡೆ ಕೇಳಿ ಬರುತ್ತಿದೆ.

ಕೇಂದ್ರ ಸರಕಾರ ಈ ಬಗ್ಗೆ ಜಾಣ ಕಿವುಡತನ ತೋರಿಸುತ್ತಿದೆ. ಕೇಂದ್ರ ಸರಕಾರ ರಾಜ್ಯಗಳ ಮೇಲೆ ರಾಜ್ಯ ಸರಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಾ ಬಳಕೆದಾರರನ್ನು ತೊಂದರೆಗೀಡುಮಾಡುತ್ತಿವೆ. ರಾಜ್ಯಗಳು ಮೊದಲು ವೌಲ್ಯವರ್ಧಿತ(ವ್ಯಾಟ್) ತೆರಿಗೆಯನ್ನು ತಗ್ಗಿಸಲಿ ಎಂದು ಕೇಂದ್ರ ಹೇಳುತ್ತಿದೆ. ಕೇಂದ್ರ ಸರಕಾರ ಮೊದಲು ಅಬಕಾರಿ ಶುಲ್ಕ ಕಡಿಮೆ ಮಾಡಲಿ ಎಂದು ರಾಜ್ಯಗಳು ಒತ್ತಾಯಿಸುತ್ತಿವೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಕಿತ್ತಾಟದ ಪರಿಣಾಮವಾಗಿ ಗ್ರಾಹಕರು ತೊಂದರೆಗೀಡಾಗಿದ್ದಾರೆ. ಗ್ರಾಹಕರ ಮೇಲಿನ ಹೊರೆ ತಗ್ಗಿಸಲು ಕೇಂದ್ರ ಸರಕಾರ ಅಬಕಾರಿ ಸುಂಕ ಕಡಿಮೆ ಮಾಡಬೇಕು ಎಂಬ ಬೇಡಿಕೆಗೆ ತಕ್ಷಣ ಸ್ಪಂದಿಸಬೇಕಾಗಿದೆ. 2014ನೇ ಇಸವಿಯಿಂದ ಒಂಬತ್ತು ಬಾರಿ ಅಬಕಾರಿ ಸುಂಕವನ್ನು ಕೇಂದ್ರ ಸರಕಾರ ಹೆಚ್ಚಳ ಮಾಡಿದೆ. ಖಾಸಗಿ ಪೆಟ್ರೋಲಿಯಂ ಕಂಪೆನಿಗಳ ಹಿತ ರಕ್ಷಿಸಲು ಗ್ರಾಹಕರ ಹಿತವನ್ನು ಅದು ಬಲಿಕೊಡುತ್ತಿದೆ. ಅದೇರೀತಿ ರಾಜ್ಯಗಳೂ ಸಿಕ್ಕಾಪಟ್ಟೆ ವೌಲ್ಯವರ್ಧಿತ ತೆರಿಗೆಯನ್ನು ಹೆಚ್ಚಿಸುತ್ತಿರುವುದರಿಂದ ಗ್ರಾಹಕರು ಇನ್ನಷ್ಟು ತೊಂದರೆಗೀಡಾಗಿದ್ದಾರೆ. ಈ ವೌಲ್ಯ ವರ್ಧಿತ ತೆರಿಗೆಯನ್ನು ಕಡಿಮೆ ಮಾಡುವ ಇಚ್ಛೆ ರಾಜ್ಯ ಸರಕಾರಗಳಿಗೆ ಇಲ್ಲ. ಸಂಪನ್ಮೂಲಗಳ ಕ್ರೋಡೀಕರಣಕ್ಕಾಗಿ ಇಂತಹ ತೆರಿಗೆ ಏರಿಕೆ ಅನಿವಾರ್ಯ ಎಂದು ರಾಜ್ಯ ಸರಕಾರಗಳು ಸಮರ್ಥಿಸುತ್ತಿವೆ. ಈ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಿತ್ತಾಟದಿಂದ ಬಳಕೆದಾರರಿಗೆ ತೊಂದರೆಯಾಗಿದೆ. ಇಂಧನಗಳ ಬೆಲೆ ಇಳಿಸಲು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದೊಂದೇ ಈಗ ಉಳಿದಿರುವ ದಾರಿಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಯೋಚನೆ ಮಾಡಬೇಕಾಗಿದೆ.

ಇಂಧನ ಬೆಲೆಗಳು ಸರಕಾರಗಳ ಪಾಲಿಗೆ ಗರಿಷ್ಠ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸುವ ಮೂಲಗಳಾಗಿವೆ. ಬೊಕ್ಕಸವನ್ನು ಭರ್ತಿ ಮಾಡುವ ಈ ವರಮಾನದ ಮೂಲಗಳನ್ನು ಬಿಟ್ಟುಕೊಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಕಿಂಚಿತ್ತೂ ಮನಸ್ಸಿಲ್ಲ. ಇದರ ಪರಿಣಾಮವಾಗಿ ಗ್ರಾಹಕರು ತೊಂದರೆಗೀಡಾಗಿದ್ದಾರೆ. ಬರೀ ಇಂಧನ ಬೆಲೆ ಮಾತ್ರವಲ್ಲ. ಜೀವನಾವಶ್ಯಕ ಪದಾರ್ಥಗಳಾದ ಅಕ್ಕಿ, ಗೋಧಿ, ಖಾದ್ಯತೈಲ, ಜೀವರಕ್ಷಕ ಔಷಧಿಗಳು ಹೀಗೆ ನಾನಾ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬಳಲಿ ಹೋಗಿದ್ದಾರೆ. ಒಳ್ಳೆಯ ದಿನಗಳು ಬರುತ್ತವೆ ಎಂದು ಪ್ರಧಾನಿ ಮೋದಿ ಹೇಳುತ್ತಲೇ ಇದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದು ಮೂರೂವರೆ ವರ್ಷ ಗತಿಸಿದರೂ ಅವರು ಹೇಳುತ್ತಿರುವ ಒಳ್ಳೆಯ ದಿನಗಳು ಬರಲೇ ಇಲ್ಲ. ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ನೋಟು ಅಮಾನ್ಯೀಕರಣ ಮಾಡಿರುವುದಾಗಿ ದಿಢೀರನೆ ಘೋಷಿಸಿ ಜನಸಾಮಾನ್ಯರನ್ನು ತೊಂದರೆಗೀಡುಮಾಡಲಾಯಿತು. ಆ ಆಘಾತದಿಂದ ಜನರು ಇನ್ನೂ ಚೇತರಿಸಿಲ್ಲ.

ದೇಶದ ಅಭಿವೃದ್ಧಿಗಾಗಿ ಜನತೆ ತ್ಯಾಗ ಮಾಡಬೇಕೆಂದು ಕೇಂದ್ರದ ಅಧಿಕಾರ ಸೂತ್ರ ಹಿಡಿದವರು ಹೇಳುತ್ತಾರೆ. ಆದರೆ, ಅವರ ಅಭಿವೃದ್ಧಿಯ ಮಾನದಂಡ ಯಾವುದು ಎಂಬುದು ಸ್ಪಷ್ಟವಾಗಿಲ್ಲ. ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ದೇಶ ಅಂತಹ ಮುನ್ನಡೆಯನ್ನೇನೂ ಸಾಧಿಸಿಲ್ಲ. ಒಟ್ಟು ರಾಷ್ಟ್ರೀಯ ಉತ್ಪನ್ನದ ಪ್ರಮಾಣದಲ್ಲೂ ಅಂತಹ ಹೆಚ್ಚಳ ಉಂಟಾಗಿಲ್ಲ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಸರಕಾರ ಹೇಳುತ್ತಿರುವ ಮಾತುಗಳಲ್ಲಿ ಜನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಮತ್ತೆ ಕೋಮು ಧ್ರುವೀಕರಣದ ರಾಜಕೀಯವನ್ನು ಬಿಜೆಪಿ ನಡೆಸುತ್ತಿದೆ. ದೇಶದ ಆರ್ಥಿಕ ಪರಿಸ್ಥಿತಿ ಈಗ ತೀವ್ರ ಗಂಭೀರವಾಗಿದೆ. ಈ ಬಗ್ಗೆ ಪ್ರತಿಪಕ್ಷಗಳೂ ಸರಿಯಾದ ಚಿತ್ರಣವನ್ನು ಜನರಿಗೆ ನೀಡುತ್ತಿಲ್ಲ. ಸರಕಾರದ ಲೋಪಗಳ ವಿರುದ್ಧ ಪರಿಣಾಮಕಾರಿಯಾದ ಹೋರಾಟಗಳು ನಡೆಯುತ್ತಿಲ್ಲ. ಇನ್ನು ಮುಂದಾದರೂ ಜನಪರ ಸಂಘಟನೆಗಳು ಎಚ್ಚೆತ್ತು ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ವಿರುದ್ಧ ಹೋರಾಟಗಳನ್ನು ಸಂಘಟಿಸುವುದು ತುರ್ತು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News